ಕೋಟೆನಗರಿಗೂ ಪ್ರಾಣವಾಯು ಕೊರತೆ: ಖಾಸಗಿ ಆಸ್ಪತ್ರೆಗಳಲ್ಲಿನ್ನು ಚಿಕಿತ್ಸೆ ಅನುಮಾನ

ಕೋಟೆನಗರಿಗೂ ಪ್ರಾಣವಾಯು ಕೊರತೆ: ಖಾಸಗಿ ಆಸ್ಪತ್ರೆಗಳಲ್ಲಿನ್ನು ಚಿಕಿತ್ಸೆ ಅನುಮಾನ

ನಾಡನುಡಿ ನ್ಯೂಸ್ 
ಬಾಗಲಕೋಟೆ:
ಆಸ್ಪತ್ರೆಗಳಲ್ಲಿ ಪ್ರಾಣವಾಯು ಕೊರತೆ ಬಾಗಲಕೋಟೆ ಜಿಲ್ಲೆಯನ್ನು ಭಯದಲ್ಲಿಟ್ಟಿದೆ, ಬೇಡಿಕೆಯ ಅರ್ಧದಷ್ಟು ಆಮ್ಲಜನಕ ದೊರೆಯದೇ ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕುವ ಸ್ಥಿತಿ ಬಂದಿದ್ದರೇ ಸರಕಾರಿ ಆಸ್ಪತ್ರೆಗಳು ಈ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿಗೆ ತಲುಪಿದೆ. 


 ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ೪೩೭, ಖಾಸಗಿ ಆಸ್ಪತ್ರೆಯಲ್ಲಿ ೮೧೭ ಸೋಂಕಿತರು ಚಿಕಿತ್ಸೆಗಾಗಿ ದಾಖಲಾಗಿದ್ದು ೨೦೩೩ ಸೋಂಕಿತರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ೧೨೫೪ ರೋಗಿಗಳ ಪೈಕಿ ೯೨೬ ಸೋಂಕಿತರು ಆಕ್ಸಿಜನ್ ಅವಲಂಬಿತರಾಗಿದ್ದು ಇವರಲ್ಲಿ ೩೪೮ ಸೋಂಕಿತರು ಸರಕಾರಿ ಆಸ್ಪತ್ರೆಯಲ್ಲಿದ್ದರೆ ೫೭೮ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. ಕಳೆದ ಎರಡು ದಿನಗಳಿಂದ ಏಕಾಏಕಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಇದನ್ನು ಸರಿಪಡಿಸಲು ಜಿಲ್ಲಾಡಳಿತ ಪ್ರಯತ್ನ ನಡೆಸಿದೆ ಆದರೂ ಅದು ಖಾಸಗಿ ಆಸ್ಪತ್ರೆಗಳ ಬೇಡಿಕೆಯನ್ನು ನಿಭಾಯಿಸುವದು ಕಷ್ಟಸಾಧ್ಯವಾಗಿದೆ. 
 ಜಿಲ್ಲೆಯಲ್ಲಿ ರೀಫಿಲಿಂಗ್ ಕೇಂದ್ರ ಇದ್ದರೂ ಬೇಡಿಕೆ ನಿಭಾಯಿಸಲು ಸಾಧ್ಯವಾಗಿಲ್ಲ ಬವಿವ  ಸಂಘದ ಹಾನಗಲ್ ಕುಮಾರೇಶ್ವರ ಆಸ್ಪತ್ರೆಗೆ ಕಂಪನಿ ಒಪ್ಪಂದದ ಮೇಲೆ ಲಭ್ಯವಾಗುತ್ತಿರುವ ಆಕ್ಸಿಜನ್‌ದಲ್ಲಿ ಅರ್ದದಷ್ಟು ಜಿಲ್ಲಾಸ್ಪತ್ರೆಗೆ ನೀಡಿ ಶಾಸಕ, ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಸಂಜೀವಿನಿಯಾಗಿದ್ದಾರೆ ಇದು ತಕ್ಕ ಮಟ್ಟಿನ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗಿದೆ ಆದರೆ ಖಾಸಗಿ ಆಸ್ಪತ್ರೆಗಳಿಗೆ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. 

ಎಲ್ಲಿಗೆ, ಎಷ್ಟು ಬೇಕು ಪ್ರಾಣವಾಯು:
 ಪ್ರತಿನಿತ್ಯ ಸರಕಾರಿ ಆಸ್ಪತ್ರೆಗೆ ೩ ಕೆ.ಎಲ್, ಖಾಸಗಿ ಆಸ್ಪತ್ರೆಗೆ ೧೪ ಕೆ.ಎಲ್ ಸೇರಿ ಬೇಕಾಗಿರುವ ಆಕ್ಸಿಜನ್  ೧೭ ಕೆ.ಎಲ್ ಆದರೆ ಸರಕಾರಿ ಆಸ್ಪತ್ರೆಗೆ ೧.೫ ಕೆ.ಎಲ್, ಖಾಸಗಿ ಆಸ್ಪತ್ರೆಗೆ ೬ ಕೆ.ಎಲ್ ಒಟ್ಟು ೭.೫ ಕೆ.ಎಲ್ ಮಾತ್ರ ಪೂರೈಕೆಯಾಗುತ್ತಿದೆ ಸರಿ ಸುಮಾರು ೯.೫ಕೆ.ಎಲ್ ಆಕ್ಸಿಜನ್ ಕೊರತೆ ಇದೆ. ಆಕ್ಸಿಜನ್ ಅವಲಂಬಿತವಾಗಿರುವ ರೋಗಿಗೆ ಕನಿಷ್ಟ ೯೦ ಡಿಗ್ರಿ ಪ್ರಮಾಣದಷ್ಟು ಉಸಿರಾಟಕ್ಕೆ ಈ ಆಮ್ಲಜನಕ ಅಗತ್ಯವಾಗಿದೆ ಅದು ೬೦ಕ್ಕೆ ಕುಸಿದರೇ ಜೀವಕ್ಕೆ ಅಪಾಯ ಖಂಡಿತ ಈ ಕಾರಣಕ್ಕೆ ಪ್ರತಿ ಅವಲಂಬಿತ ರೋಗಿಗೆ ಕನಿಷ್ಟ ಎಂದರು ೨ರಿಂದ ೫ ಲೀಟರ್‌ವರೆಗೆ ಪ್ರಾಣವಾಯು ಅಗತ್ಯವಾಗಿದೆ. 
 ಈ ಪ್ರಮಾಣದ ಆಮ್ಲಜನಕ ದೊರೆಯುತ್ತಿಲ್ಲ ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕ್ಸಿಜನ ಅವಲಂಬಿತ ರೋಗಿಗಳ  ವಿಶೇಷವಾಗಿ ವೆಂಟಿಲೇಟರ್‌ನಲ್ಲಿರುವ ೮೮, ಎಚ್‌ಎನ್‌ಎಫ್‌ಸಿಯಲ್ಲಿರುವ ೭೭ ರೋಗಿಗಳಿಗೆ ತೊಂದರೆಯಾಗಲಿದೆ. ನಮಗೆ ರೆಮ್ಡಿಸ್ವೀಯರ ಸಿಗದಿದ್ದರೂ ಚಿಂತೆಯಿಲ್ಲ ಕನಿಷ್ಟ ಆಕ್ಸಿಜನ್ ಕೊಟ್ಟರೂ ಸಹ ನಾವು ರೋಗಿಗಳನ್ನು ಬದುಕಿಸಲು ಸಾಧ್ಯವಿದೆ ಇಲ್ಲದಿದ್ದರೆ ಪರಿಸ್ಥಿತಿ ತೊಂದರೆಯಾಗಲಿದೆ ಎಂದು ಖಾಸಗಿ ವೈದ್ಯರು ಅಲವತ್ತುಕೊಂಡಿದ್ದಾರೆ. 
 ಬುಧವಾರದಂದು ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ನಡೆಸಿದ ಕೋವಿಡ್ ನಿರ್ವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಅಲ್ಲಮಪ್ರಭು ಸೂಪರ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯ ಡಾ. ಪ್ರಭಯ್ಯ ಪ್ರಭುಸ್ವಾಮಿಮಠ ಅವರು ವಿಷಯವನ್ನು ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಗಮನಕ್ಕೆ ತಂದು ಬಾಗಲಕೋಟೆ ಸಾಮಾನ್ಯ ಜಿಲ್ಲೆಯಲ್ಲ ಇದು ಮೆಡಿಕಲ್ ಹಬ್, ವಿಜಯಪೂರ, ಬಾಗಲಕೋಟೆ, ಕೊಪ್ಪಳ, ರಾಯಚೂರ, ಬೆಳಗಾವಿ ಜಿಲ್ಲೆಯ ರೋಗಿಗಳು ಚಿಕಿತ್ಸೆ ಬಯಸಿ ಬರುತ್ತಿದ್ದಾರೆ ಈ ಬೆಳವಣಿಗೆಯನ್ನು ಗಮನಿಸಿ ಜಿಲ್ಲೆಗೆ ಹೆಚ್ಚಿನ ಕೋಟಾ ನಿಗದಿಪಡಿಸಬೇಕು,ಸಮಸ್ಯೆ ಬಗಿಹರಿಸಬೇಕೆಂದು ಆಗ್ರಹಿಸಿದರು. 
 ಸಧ್ಯಕ್ಕೆ ಜಿಲ್ಲಾಡಳಿತ ಏನೂ ಮಾಡದ ಸ್ಥಿತಿಯಲ್ಲಿದೆ. ಉಸ್ತುವಾರಿ ಸಚಿವರು ಸರಕಾರದ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ. ಆದರೆ ಭರವಸೆ ಪರಿಹಾರವಾಗಲಾರದು ಖಾಸಗಿ ವೈದ್ಯಕೀಯ ಆಸ್ಪತ್ರೆಗಳು ಅಕ್ಷರಶಃ ಆತಂಕದ ಸ್ಥಿತಿಯಲ್ಲಿವೆ. ಆಸ್ಪತ್ರೆ ಮುಚ್ಚಬೇಕಾದ ಸ್ಥಿತಿಯ ಬಗ್ಗೆ ಕಳವಳ ಹೊಂದಿದ್ದಾರೆ. ಗುರುವಾರ ಬೆಳಿಗ್ಗೆ ಹೊತ್ತಿಗೆ ಪರಿಸ್ಥಿತಿ ಇನ್ನಷ್ಟು ಕಳವಳಕಾರಿಯಾಗಲಿದೆ. ಇದಕ್ಕೆ ಪರಿಹಾರ ಸಿಗಲೇಬೇಕು. ರಾಜ್ಯದ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ ಆಕ್ಸಿಜನ್ ಕೊರತೆ ಅನುಭವಿಸುತ್ತಿರುವ ಜಿಲ್ಲೆಗಳಲ್ಲಿ ಬಾಗಲಕೋಟೆ ರಾಜ್ಯದಲ್ಲಿಯೇ ಎರಡನೇ ಜಿಲ್ಲೆ. ಅಪಾಯದ ಸ್ಥಿತಿಯ ಬಗ್ಗೆ ಎಚ್ಚರಿಸಲು ಇನ್ನೇನು ಬೇಕು?