ಮನೆಯಲ್ಲೇ ತಯಾರಾಗಲಿ ಬಾಯಿಗೆ ನೀರುಣಿಸುವ ಈ ಖಾದ್ಯಗಳು
ಮನೆಯಲ್ಲೇ ಬಗೆ,ಬಗೆಯ ಆಹಾರ ಖಾದ್ಯಗಳನ್ನು ಸಿದ್ಧಪಡಿಸುವುದರ ಮುಖಾಂತರ ಸಂಭ್ರಮ ಹೆಚ್ಚಿಸಬಹುದಾಗಿದೆ.ಕೋವಿಡ್ ಕಾಲದಲ್ಲಿ ಮನೆಯಲ್ಲೇ ಈ ರೀತಿಯ ಪ್ರಯೋಗಗಳ ಮೂಲಕ ಎಲ್ಲರ ಮನದಲ್ಲೂ ಸಂಭ್ರಮ ಇಮ್ಮಡಿ ಆಗಬೇಕೆಂಬುದು ನಮ್ಮಾಸೆ. ಅದಕ್ಕಾಗಿ ಈ ಅಂಕಣ
ನಾಡನುಡಿ ವಿಶೇಷ:
ಹಬ್ಬಗಳ ಸಂದರ್ಭದಲ್ಲಿ ನಿಮ್ಮ ಸಂಭ್ರಮ ಹೆಚ್ಚಿಸಲೆಂದೇ ಹಲವು ವಿಶೇಷ ಖಾದ್ಯಗಳ ರೆಸಿಪಿಯೊಂದಿಗೆ ನಾವು ನಿಮ್ಮ ಮುಂದೆ ಬಂದಿದ್ದೇವೆ.
ಕೋವಿಡ್ ಕಾರಣ ಸಂಭ್ರಮವೇ ಇಲ್ಲ ಎಂದು ಗೊಣಗುವ ಬದಲು ಮನೆಯಲ್ಲಿ ಎಲ್ಲರಿಗೂ ಇಷ್ಟ ಆಗಬಲ್ಲ ಬಗೆ, ಬಗೆಯ ರುಚಿಕರ ಆಹಾರವನ್ನು ಸಿದ್ಧಪಡಿಸಿ ನೀವೆಲ್ಲ ತಿನ್ನಬೇಕು ಆ ಮೂಲಕ ಮನೆ,ಮನಗಳಲ್ಲಿ ಹಬ್ಬದ ಸಂಭ್ರಮ ಬೆಳಗಬೇಕು ಎಂಬುದು ನಮ್ಮ ಆಸೆ ಅದಕ್ಕಾಗಿ "ನಾಡನುಡಿ ಪಾಕಶಾಲೆ" ಅಂಕಣ ಆರಂಭಗೊಂಡಿದ್ದು, ದಿನಕ್ಕೆ ಹಲವಾರು ಆಹಾರ ಪದಾರ್ಥಗಳ ರೆಸಿಪಿಗಳು ನಿಮ್ಮ ಕೈ ಸೇರಲಿದೆ.
ನೀವು ಇವುಗಳನ್ನು ಪಾಲಿಸುವುದಲ್ಲದೇ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಬೇಕೆಂಬುದೊಂದೇ ನಮ್ಮಾಸೆ. ಇನ್ನ್ಯಾಕೆ ತಡ ಶೇರ್ ಮಾಡಿ... ಮನೆಯಲ್ಲೇ ರೆಸಿಪಿ ಟ್ರೈ ಮಾಡಿ.
ಪೂರಿ ಉಂಡೆ
ಸಾಮಗ್ರಿ:
ಗೋಧಿ ಹಿಟ್ಟು 3 ಕಪ್, ಚಿರೋಟಿ ರವೆ 1 ಕಪ್, ಮೈದಾಹಿಟ್ಟು 1 ಬಟ್ಟಲು, ತುಪ್ಪ 1/2 ಕಪ್, ಚಿಟಿಕೆ ಉಪ್ಪು, ಸಕ್ಕರೆ ಪುಡಿ 2 ಕಪ್, ಎಲ್ಲತರಹದ ಡ್ರೈಫ್ರೂಟ್ಸ್ 1/2 ಕಪ್, ಏಲಕ್ಕಿ ಪುಡಿ ಸ್ವಲ್ಪ. ಕರಿಯಲು ಎಣ್ಣೆ.
ಮಾಡುವ ವಿಧಾನ :ಗೋಧಿಹಿಟ್ಟು, ಚಿರೋಟಿ ರವೆ, ಮೈದಾಹಿಟ್ಟು, ಉಪ್ಪು, ತುಪ್ಪ ಸೇರಿಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ 10 ನಿಮಿಷ ನೆನೆಯಲು ಬಿಡಿ. ನಂತರ ತೆಳುವಾದ ಪುರಿ ಲಟ್ಟಿಸಿ ಗರಿಗರಿಯಾಗಿ ಕರಿದು ಟಿಶ್ಯು ಮೇಲೆ ಹಾಕಿ ನಂತರ ಎಲ್ಲ ಪುರಿಯನ್ನು ಸಣ್ಣಗೆ ಪುಡಿಮಾಡಿ ಮಿಕ್ಕೆಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಕಿದ್ದರೆ ಸ್ವಲ್ಪ ತುಪ್ಪ ಹಾಕಿಕೊಂಡು ಉಂಡೆ ಕಟ್ಟಿದರೆ ಪುರಿ ಉಂಡೆ ಸಿದ್ಧ.
ಹಸಿ ಕೊಬ್ಬರಿ ಪಾಯಸ
ಸಾಮಗ್ರಿ : ತೆಂಗಿನತುರಿ 2 ಕಪ್, ಹಾಲು 1/2 ಕಪ್, ಸಕ್ಕರೆ 2 ಚಮಚ, ಏಲಕ್ಕಿ ಪುಡಿ 1/2 ಚಮಚ, ಬೆಲ್ಲ ೧ ಕಪ್, ತುಪ್ಪ ಅರ್ಧ ಚಮಚ, ಗೊಡಂಬಿ, ಬದಾಮಿ, ದ್ರಾಕ್ಷಿ ಸ್ವಲ್ಪ.
ಮಾಡುವ ವಿಧಾನ:
ತೆಂಗಿನತುರಿಯನ್ನು ಸಕ್ಕರೆ ಹಾಕಿ ಚೆನ್ನಾಗಿ ರುಬ್ಬಿಕೊಂಡು ಹಾಲು,ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ ತುಪ್ಪದಲ್ಲಿ ಹುರಿದ ಬದಾಮಿ ಗೊಡಂಬಿ ದ್ರಾಕ್ಷಿ ಯನ್ನು ಸೇರಿಸಿ.
ಜೋಳದಹಿಟ್ಟಿನ ಚಕ್ಕುಲಿ
ಸಾಮಗ್ರಿ: ಜೋಳದ ಹಿಟ್ಟು 4 ಕಪ್, ಪುಟಾಣಿ ಹಿಟ್ಟು ೧ಕಪ್, ಖಾರದ ಪುಡಿ 2 ಚಮಚ, ಅಜವಾನ 1ಚಮಚ, ಬಿಳಿ ಎಳ್ಳು 2 ಚಮಚ, ಜೀರಿಗೆ 1 ಚಮಚ, ಕಾಳು ಮೆಣಸಿನ ಪುಡಿ ¼ ಚಮಚ, ಇಂಗು ½ ಚಮಚ, ಅರಿಶಿನಪುಡಿ ½ ಚಮಚ, ಉಪ್ಪು ರುಚಿಗೆ, ಕಾಯ್ದ ಎಣ್ಣೆ 4 ಚಮಚ, ಕರಿಯಲು ಎಣ್ಣೆ.
ಮಾಡುವ ವಿಧಾನ :
ಜೋಳದ ಹಿಟ್ಟನ್ನು ಸ್ವಲ್ಪ ಹುರಿದು ಪುಟಾಣಿ ಹಿಟ್ಟನ್ನು ಬೆರೆಸಿ, ಮಿಕ್ಕ ಎಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲೆಸಿ. ಕಾಯ್ದ ಎಣ್ಣೆ ಹಾಗೂ ನೀರು ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ನಾದಿ ಚಕ್ಕುಲಿ ಒರಳಿನಲ್ಲಿ ಹಾಕಿ ಒತ್ತಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಇಟ್ಟು ಕರಿಯಿರಿ.
ಸೌತೆಕಾಯಿ ಚಟ್ನಿ
ಸಾಮಗ್ರಿ: ಸೌತೆಕಾಯಿ 1, ಹಸಿಮೆಣಸಿನಕಾಯಿ 4, ಕೊತ್ತಂಬರಿ ಸೊಪ್ಪು ಸ್ವಲ್ಪ, ಹಸಿಕಾಯಿತುರಿ 1 ಕಪ್, ಹುರಿದ ಶೇಂಗಾ ಅರ್ಧ ಕಪ್, ಜೀರಿಗೆ ½ ಚಮಚ, ಹುಣಸೆಹಣ್ಣು ಸ್ವಲ್ಪ, ಬೆಲ್ಲ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಹಸಿಮೆಣಸಿನಕಾಯಿನ್ನು ಸ್ವಲ್ಪ ಎಣ್ಣೆ ಹಾಕಿ ಬಾಡಿಸಿಕೊಂಡು ಅದರಲ್ಲೆ ಸೌತೆಕಾಯಿ ತುರಿಯನ್ನು ಹಸಿ ವಾಸನೆ ಹೋಗುವರೆಗು ಹುರಿದು, ಕಾಯಿ ತುರಿ, ಹುಣಸೆ ಹಣ್ಣು, ಜೀರಿಗೆ, ಬೆಲ್ಲ, ಉಪ್ಪು, ಕೊತ್ತಂಬರಿ ಹಾಕಿ ನುಣ್ಣಗೆ ರುಬ್ಬಿ ಇಂಗು ಸಾಸಿವೆ ತುಪ್ಪದ ಒಗ್ಗರಣೆ ಕೊಡಿ.