ದೀಪಾವಳಿ ಸಿಹಿ ತಿನಿಸುಗಳಿಗೆ ಬೇಕೇಬೇಕು ಈ ಸ್ನ್ಯಾಕ್ಸ್ ಗಳು
ನಾಡನುಡಿ ದೀಪವಾಳಿ ಪಾಕಶಾಲೆಯ ಆರನೇ ದಿನ ಇನ್ನೂ ವಿಶೇಷವಾಗಿದೆ. ೭ನೇ ದಿನ ಅಂದರೆ ಶುಕ್ರವಾರ ಹಬ್ಬದ ವಿಶೇಷವಾಗಿ ಖಾದ್ಯಗಳನ್ನು ಪರಿಚಯಿಸುತ್ತಿರುವ ಈ ಅಂಕಣ ಕೊನೆಗೊಳ್ಳಲಿದೆ. ಗೊತ್ತು ನೀವು ಈ ಅಂಕಣವನ್ನು ಮಿಸ್ ಮಾಡಿಕೊಳ್ಳುತ್ತೀರಿ ಎಂದು... ಹಬ್ಬ ಬಂದಿದೆ ಇನ್ನು ಸಂಭ್ರಮಿಸೋಣ... ನಮಸ್ಕಾರ
ನಾಡನುಡಿಯ ದೀಪಾವಳಿ ಪಾಕಶಾಲೆಯ ಆರನೇ ದಿನವಾದ ಇಂದು ಸ್ವಲ್ಪ ವಿಭಿನ್ನವಾಗಿರಲೆಂದು ಸ್ನ್ಯಾಕ್ಸ್ ಗಳ ತಯಾರಿಕೆ ವಿಧಾನ ತಿಳಿಸಲಾಗಿದೆ. ಸಿಹಿ ಜತೆಗೆ ಖಾರದ ತಿನಿಸುಗಳು ನೀಡುವ ಮಜವೇ ಬೇರೆ ಈ ನಿಟ್ಟಿನಲ್ಲಿ ಇಂದಿನ ರೆಸಿಪಿಗಳು ಇಲ್ಲಿದೆ ಓದಿ
ನಿಪ್ಪಟ್ಟು
ಸಾಮಗ್ರಿ
ಅಕ್ಕಿ ಹಿಟ್ಟು 2 ಕಪ್, ಮೈದಾ ಹಿಟ್ಟು 1 ಕಪ್, ಚಿರೋಟಿ ರವೆ 1/2 ಕಪ್, ತರಿಯಾಗಿ ಪುಡಿ ಮಾಡಿದ ಕಡ್ಲೆಬೀಜ ಮತ್ತು ಹುರಿಗಡಲೆ( ಪುಟಾಣಿ) 3 ಚಮಚ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 3 ಚಮಚ, ಅಚ್ಚಖಾರದ ಪುಡಿ 2 ಚಮಚ, ಇಂಗು ½ ಚಮಚ, ಹುರಿದ ಬಿಳಿ ಎಳ್ಳು 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಚಿಕ್ಕದಾಗಿ ಕತ್ತರಿಸಿದ ಕರಿಬೇವು ಸ್ವಲ್ಪ. ವನಸ್ಪತಿ 2 ಚಮಚ.
ಮಾಡುವ ವಿಧಾನ
ಮೇಲಿನ ಎಲ್ಲ ಸಾಮಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲಿಸಿ ಕೊಳ್ಳಿ. ಈಗ ಬೇಕಿದ್ದರೆ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿಗಿಂತ ಗಟ್ಟಿ ಕಲಸಿ, ಚಿಕ್ಕ ಚಿಕ್ಕ ಉಂಡೆ ತೆಗೆದುಕೊಂಡು ವಡೆ ಆಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ನಿಪ್ಪಟ್ಟು ಸಿದ್ಧ.
ಕೋಡುಬಳೆ
ಸಾಮಗ್ರಿ
ಅಕ್ಕಿ ಹಿಟ್ಟು 2 ಕಪ್, ತೆಂಗಿನತುರಿ 1 ಕಪ್, ಮೈದಾ ಹಿಟ್ಟು 2 ಚಮಚ, ಕೆಂಪು ಮೆಣಸಿನಕಾಯಿ 3, ಇಂಗು ½ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.
ಮಾಡುವ ವಿಧಾನ:
ಅಕ್ಕಿ ಹಿಟ್ಟು, ಮೈದಾ ಹಿಟ್ಟು ಉಪ್ಪು ಸೇರಿಸಿಡಿ. ಕೆಂಪು ಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಹುರಿದು ತೆಂಗಿನ ಕಾಯಿ ಇಂಗು ಹಾಕಿ ರುಬ್ಬಿ ಹಿಟ್ಟಿಗೆ ಹಾಕಿ ಚೆನ್ನಾಗಿ ಕೈಯಾಡಿ ಸ್ವಲ್ಪ ನೀರು ಸೇರಿಸಿ ಮಿಶ್ರಣವನ್ನು ಪುರಿ ಹಿಟ್ಟಿನ ಹದಕ್ಕೆ ಕಲಸಿ ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಚಿಕ್ಕ ಬಳೆ ಆಕಾರದಲ್ಲಿ ಮಾಡಿ ಕಾದ ಎಣ್ಣೆಯಲ್ಲಿ ಕರಿದರೆ ಕೋಡು ಬಳೆ ಸಿದ್ಧ.
ಪುದಿನಾ ಚುರುಮುರಿ(ಮಂಡಕ್ಕಿ)
ಚುರುಮುರಿ 1/2 ಕೆಜಿ, ಒಣಕೊಬ್ಬರಿ ಚೂರುಗಳ ೧ ಚಮಚ, ಕಡ್ಲೆಬೀಜ ೩ ಚಮಚ, ಪುಟಾಣಿ 3 ಚಮಚ, ಬೆಳ್ಳುಳ್ಳಿ 5 ಎಸಳು, ಅರಿಶಿನ ಪುಡಿ ಸ್ವಲ್ಪ, ಸಾಸಿವೆ 1 ಚಮಚ, ಎಣ್ಣೆ 4 ಚಮಚ, ಕರಿಬೇವು , ಕೊತ್ತಂಬರಿ ಸ್ವಲ್ಪ, ಹಸಿಮೆಣಸಿನಕಾಯಿ ೩, ಪುದಿನಾ ೧ ಕಪ್. ಉಪ್ಪು, ಸಕ್ಕರೆ ಸ್ವಲ್ಪ.
ಮಾಡುವ ವಿಧಾನ
ಹಸಿಮೆಣಸಿನಕಾಯಿ, ಪುದಿನಾ ಹಾಗೂ ಕೊತ್ತಂಬರಿ ಮಿಕ್ಸರ್ ಅಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ.ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕಡ್ಲೆಬೀಜ, ಪುಟಾಣಿ, ಕರಿಬೇವು ಹಾಗೂ ಬೆಳ್ಳುಳ್ಳಿ ಒಣಕೊಬ್ಬರಿ ಹಾಕಿ ೨ ನಿಮಿಷ ಹುರಿದು ರುಬ್ಬಿದ ಮಿಶ್ರಣ ಸೇರಿಸಿ ಅರಿಶಿಣ, ಉಪ್ಪು ಹಾಗೂ ಸಕ್ಕರೆ ಹಾಕಿ ಕಲಸಿಅದಕ್ಕೆ ಸಾಲುವಷ್ಟು ಮಂಡಕ್ಕಿ ಹಾಕಿ ಹುರಿದರೆ ಗರಿಗರಿಯಾದ ಪುದಿನಾ ಮಂಡಕ್ಕಿ ಸಿದ್ಧ. ಬೇಕಿದ್ದರೆ ನಿಂಬೆ ರಸ ಸ್ವಲ್ಪ ಕ್ಯಾರೆಟ್ ತುರಿ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಮತ್ತು ಹಸಿಕೊಬ್ಬರಿ ಹಾಕಿ ಸರ್ವ್ ಮಾಡಿ.