ಸಾರ್ವಜನಿಕರನ್ನು ವಿನಾಕಾರಣ ಅಲೆದಾಡಿಸಿದರೆ ಕ್ರಮ: ಡಾ.ಚರಂತಿಮಠ ಎಚ್ಚರಿಕೆ 

 ಸಾರ್ವಜನಿಕರನ್ನು ವಿನಾಕಾರಣ ಅಲೆದಾಡಿಸಿದರೆ ಕ್ರಮ: ಡಾ.ಚರಂತಿಮಠ ಎಚ್ಚರಿಕೆ 

ಬಾಗಲಕೋಟೆ ಆ.೨೮: 
ಕಟ್ಟಡ ಪರವಾನಿಗೆ, ಭೂದಾಖಲೆಗಳು ಸೇರಿದಂತೆ ಸಾರ್ವಜನಿಕರ ಕಾರ್ಯಗಳನ್ನು ವಿನಾಕಾರಣ ವಿಳಂಬ ಮಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 
 ಸೋಮವಾರ ನಗರಸಭೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಅವರು ಕಚೇರಿ ಮೇಲ್ಛಾವಣಿ ಸ್ವಚ್ಛವಿಲ್ಲದನ್ನು ಕಂಡು ಗರಂ ಆದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಮುಂದಿನ ಮರ‍್ನಾಲ್ಕು ದಿನದಲ್ಲಿ ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 
 ಬಾಗಲಕೋಟೆ ಮುಳುಗಡೆ ಬಾಧಿತವಾಗಿರುವುದರಿಂದ ನಗರಸಭೆ ದಾಖಲೆಗಳು ಸಂತ್ರಸ್ತರಿಗೆ ಅಗತ್ಯವಾಗಿರುತ್ತದೆ. ಯಾವುದೇ ಕೆಲಸಗಳು ವಿಳಂಬವಾಗಬಾರದು. ಜನರಿಗೆ ತೊಂದರೆ ಆಗುತ್ತಿರುವುದು ತಿಳಿದರೆ ಅದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು. 
 ಸಾರ್ವಜನಿಕರು ಸಹ ಯಾವುದೇ ತೊಂದರೆಗಳಿದಲ್ಲಿ ಪೌರಾಯುಕ್ತರ ಗಮನಕ್ಕೆ ತರಬೇಕು. ಮಧ್ಯವರ್ತಿಗಳಿರುವ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ನನ್ನ ಗಮನಕ್ಕೆ ಸಾರ್ವಜನಿಕರು ತರಬೇಕು ಎಂದು ಹೇಳಿದರು. ಪೌರಾಯುಕ್ತ ಮುನಿಶಾಮಪ್ಪ ಮತ್ತಿತರರು ಇದ್ದರು.