ಮುಧೋಳದ ರನ್ನ ಸಕ್ಕರೆ ಕಾರ್ಖಾನೆಗೆ ಆರ್ಥಿಕ ಸಂಕಷ್ಟದ ಕಾರ್ಮೋಡ: ಬಂದ್ ಆಗುವ ಭೀತಿ..!

* ೬೦ ಕೋಟಿ ರೂ. ಸಾಲದ ಹೊರೆ * ಜು.೧೫ಕ್ಕೆ ಸಕ್ಕರೆ ಹರಾಜು  * ಕೋವಿಡ್ ಜತೆಗೆ ಕಾರ್ಮಿಕರ ಹೋರಾಟದ ಆತಂಕ 

ಮುಧೋಳದ ರನ್ನ ಸಕ್ಕರೆ ಕಾರ್ಖಾನೆಗೆ ಆರ್ಥಿಕ ಸಂಕಷ್ಟದ ಕಾರ್ಮೋಡ: ಬಂದ್ ಆಗುವ ಭೀತಿ..!

   
ರಾಮ ಮನಗೂಳಿ
ಬಾಗಲಕೋಟೆ: 
ಜಿಲ್ಲೆಯ ಏಕೈಕ ಸಹಕಾರಿ ಕಾರ್ಖಾನೆ ಮುಧೋಳ ತಾಲೂಕಿನ ತಿಮ್ಮಾಪುರ ರನ್ನನಗರದ ರೈತರ ಸಹಕಾರಿ ಕಾರ್ಖಾನೆ ಸಂಕಷ್ಟದಲ್ಲಿದೆ, ಕಬ್ಬು ಸರಬರಾಜು ಮಾಡಿದ ರೈತರ ಬಾಕಿಯನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ ಇದಕ್ಕಾಗಿ ಜಿಲ್ಲಾಡಳಿತ ಸಕ್ಕರೆ ಸಂಗ್ರಹವನ್ನು ಜಪ್ತು ಮಾಡಿ ಲೀಲಾವಿಗೆ ಘೋಷಿಸಿದೆ. 
 ಈ ಸಂಕಷ್ಟ ಇಂದು ನಿನ್ನೆಯದಲ್ಲ. ಕಳೆದ ಮರ‍್ನಾಲ್ಕು ವರ್ಷಗಳಿಂದ ಎದುರಿಸುತ್ತಿರುವ ಸ್ಥಿತಿ. ಆದರೆ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ನೆರವು ಸಿಗದಿದ್ದರೆ. ಕಾರ್ಖಾನೆ ಶಾಶ್ವತವಾಗಿ ಬೀಗ ಹಾಕಿದರೂ ಆಶ್ಚರ್ಯವಿಲ್ಲ. ಮುಧೋಳದ ರಾಜಕೀಯ ಚದುರಂಗದ ಆಟಕ್ಕೆ ಕಾರ್ಖಾನೆ ಬಲಿಯಾಗುತ್ತಿದೆ ಎಂಬ ನೋವು ರೈತರಿಗಿದೆ. 
 ಈ ಕಾರ್ಖಾನೆಯ ಈ ವರ್ಷದ ಸಂಕಷ್ಟ ಅನಿರೀಕ್ಷಿತವಲ್ಲ. ಕೊರೊನಾ ಕಾರಣದಿಂದ ಎಲ್ಲ ಕಾರ್ಖಾನೆಗಳು ಎದುರಿಸುತ್ತಿರುವ ತೊಂದರೆ ಇದಕ್ಕೂ ಇದೆ. ಆದರೆ ಸ್ವಲ್ಪ ಭಿನ್ನವಾಗಿದೆ. ಕೊರೊನಾ ಜತೆಗೆ ಮುಷ್ಕರದ ಬೆದರಿಕೆ ಹಾಕಿರುವ ಕಾರ್ಮಿಕರ ಸವಾಲು ಕೂಡ ಆಡಳಿತ ಮಂಡಳಿಯನ್ನು ಚಿಂತೆಗೀಡುಮಾಡಿದೆ. 
 ಕಳೆದ ಸಾಲಿನ ಹಂಗಾಮಿನ ಸುಮಾರು ೨೮ ಕೋಟಿ ರೂ.ಗಳನ್ನು ರೈತರಿಗೆ ಪಾವತಿಸಬೇಕಾಗಿದೆ. ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಯಾರ ಮುಲಾಜೂ ಹಿಡಿಯದೇ ದಿಟ್ಟ ನಿರ್ಣಯಕೈಗೊಂಡು ಸಕ್ಕರೆ ಸಂಗ್ರಹದ ಗೋದಾಮನ್ನು ಕಳೆದ ತಿಂಗಳವೇ ಜಪ್ತು ಮಾಡಿದ್ದು, ಈಗ ಆ ಸಂಗ್ರಹವನ್ನು ಲೀಲಾವು ಮಾಡಿ ರೈತರಿಗೆ ಪಾವತಿಸಲು ಮುಂದಾಗಿದ್ದಾರೆ. 
         ೩೮ ಕೋಟಿ ರೂ.ಬಾಕಿ:
 ವಾಸ್ತವಿಕವಾಗಿ ಮೇ ೨೮ರಂದೇ ಕಬ್ಬು ಆಯುಕ್ತರು ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಮುಂದೆ ಜಪ್ತಿಗೆ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದರು. ಕಾರ್ಖಾನೆ ಪ್ರತಿ ಟನ್‌ಗೆ ನಿಗದಿಪಡಿಸಿದ ೩೦೬೪ ರೂ.ದರದಲ್ಲಿ ೮೧.೬೦ ಕೋಟಿ ರೂ.ಗಳನ್ನು ಪಾವತಿಸಬೇಕಾಗಿದ್ದು, ಈ ಪೈಕಿ ೪೩.೫೦ ಕೋಟಿ ರೂ.ಗಳನ್ನು ಪಾವತಿಸಿ ಇನ್ನೂ ೩೮.೧೦ ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ಈ ಬಾಕಿ ಮೊತ್ತವನ್ನು ಪಾವತಿಸುವುದಕ್ಕಾಗಿ ಜಿಲ್ಲಾಡಳಿತ ಜಪ್ತಿ ಮಾಡಿ ಜು.೧೫ಕ್ಕೆ ಲೀಲಾವು ನಿಗದಿಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಮೂಲ ಬಾಕಿ ವೇತನ ಪಾವತಿ ಆಗುವವರೆಗೆ ಶೇ.೧೫ರ ಬಡ್ಡಿ ವಸೂಲಾತಿ ನಿರ್ವಹಣಾ ವೆಚ್ಚ ಶೇ.೨.೫ರಂತೆ ಕಂದಾಯ ಬಾಕಿಯನ್ನಾಗಿ ಜಿಲ್ಲಾಡಳಿತ ಘೋಷಿಸಿರುವುದು ಆಡಳಿತ ಮಂಡಳಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಗೋದಾಮಿನಲ್ಲಿ ಸುಮಾರು ೭೮ ಕೋಟಿ ರೂ. ಸಂಗ್ರಹ ಇರುವ ಬಗ್ಗೆ ಆಡಳಿತ ಮಂಡಳಿ ಅಂದಾಜು ಮಾಡಿದೆ. ಈ ಸಕ್ಕರೆ ಹರಾಜಿನಿಂದ ರೈತರ ಬಾಕಿ ತೀರಿಸಿದರೂ ಕಾರ್ಖಾನೆಯ ಸಂಕಷ್ಟ ತಪ್ಪುವದಿಲ್ಲ. ಏಕೆಂದರೆ ಸರಿಸುಮಾರು ೬೦ ಕೋಟಿ ರೂ.ಗಳ ಸಾಲದ ಭಾರ ಕಾರ್ಖಾನೆ ಮೇಲಿದ್ದು, ಅದನ್ನು ನಿಭಾಯಿಸುವುದು ಕಷ್ಟದ ಕೆಲಸವಾಗಿದೆ. 
 ಪ್ರಸಕ್ತ ಹಂಗಾಮನ್ನು ಆರಂಭಿಸುವ ಬಗ್ಗೆ ಆಡಳಿತ ಮಂಡಳಿಗೆ ಅನುಮಾನವಿದೆ. ಹಣಕಾಸು ಸಂಸ್ಥೆಗಳಿAದ ಆರ್ಥಿಕ ನೆರವು ತಂದು ಬಾಕಿ ತೀರಿಸಿ ಕಾರ್ಖಾನೆ ಆರಂಭಿಸುವುದು ಆಡಳಿತ ಮಂಡಳಿಗೆ ಕಷ್ಟದ ಕೆಲಸವಲ್ಲ ಆದರೆ ಕಾರ್ಮಿಕರು ವೇತನ ಪರಿಷ್ಕರಣೆ, ಹೆಚ್ಚಳಕ್ಕೆ ಪಟ್ಟು ಹಿಡಿಯುತ್ತಿರುವುದು, ಅದಕ್ಕಾಗಿ ಮುಷ್ಕರ ಆರಂಭಿಸುವ ಬಗ್ಗೆ ಬೆದರಿಕೆ ಹಾಕಿರುವುದು ಅದಕ್ಕೆ ಸಮಸ್ಯೆ ಆಗಿದೆ. 
          
                                                                ರಾಜಕೀಯ ಪೀಕಲಾಟ: 
 ಜಿಲ್ಲೆಯ ಇತರೆಲ್ಲ ಕಾರ್ಖಾನೆಗಳಿಗಿಂತ ಹೆಚ್ಚಿನ ಸಂಬಳ ಪಾವತಿಸುತ್ತಿದ್ದೇವೆ. ಕಳೇದ ವರ್ಷ ಇಂಥದೇ ಮುಷ್ಕರದ ಕಾರಣ ಎಲ್ಲ ಬೇಡಿಕೆಗಳನ್ನು ಒಪ್ಪಲಾಗಿತ್ತು. ಈಗ ಆರನೇ ವೇತನ ಆಯೋಗವನ್ನು ಜಾರಿಗೊಳಿಸಲು ಪಟ್ಟು ಹಿಡಿದಿದ್ದಾರೆ. ಸುಮಾರು ೬೦೦ ನೌಕರರಿಗೆ ವೇತನ ಹೆಚ್ಚಳ ಮಾಡುವಷ್ಟು ಸಾಮರ್ಥ್ಯ ಕಾರ್ಖಾನೆಗಿಲ್ಲ. ಹೀಗಾಗಿ ಕಾರ್ಮಿಕರು ಮುಷ್ಕರ ಮಾಡಿದರೆ ಪ್ರಸಕ್ತ ಹಂಗಾಮು ಹೇಗೆ, ಹೊರಗಿನಿಂದ ಹಣ ತಂದರೆ ಅದನ್ನು ಪಾವತಿಸುವುದು ಹೇಗೆ ಎಂಬ ಸಮಸ್ಯೆ ಇದೆ ಎಂಬುದು ಕಾರ್ಖಾನೆ ಮೂಲಗಳ ಆತಂಕ.
 ಕೇವಲ ಸಂಬಳ ಪರಿಷ್ಕರಣೆ ಒಂದು ತಿಂಗಳದ ಸಮಸ್ಯೆಯಲ್ಲ. ಅದು ವರ್ಷದುದ್ಧಕ್ಕೂ ನೀಡಬೇಕಾಗಿರುವ ಬದ್ಧತೆ ಆದರೆ ಕೊರೊನಾ ಸಂಕಷ್ಟ ಅದರ ಪರಿಣಾಮಗಳ ಬಗ್ಗೆ ಯೋಚಿಸದೇ ಇರುವುದರಿಂದ ಆಗುವ ಹಾನಿಯನ್ನು ಯಾರೂ ಅಂದಾಜು ಮಾಡುತ್ತಿಲ್ಲ. ಅದಕ್ಕಾಗಿ ಈ ಬಾರಿ ಹೊರಗಿನಿಂದ ಸಾಲ ತಂದು ಬಾಕಿ ತೀರಿಸಿ ಮತ್ತೆ ಹಂಗಾಮು ಆರಂಭಿಸುವುದು ಸುಲಭದ ಕೆಲಸವಲ್ಲ ಎಂಬುದು ಹೆಸರು ಹೇಳಲು ಇಚ್ಛಿಸದ ಆಡಳಿತ ಮಂಡಳಿ ಅಧಿಕಾರಿಯೊಬ್ಬರು  ತಿಳಿಸಿದರು. 
 ಮುಧೋಳ ತಾಲೂಕಿನಲ್ಲಿ ಸದ್ಯಕ್ಕೆ ಕಾರ್ಖಾನೆಯ ಈ ಸ್ಥಿತಿಯ ಬಗ್ಗೆ ಬೂದಿಮುಚ್ಚಿದ ಕೆಂಡ ಕಾರಜೋಳರು ಕಾರ್ಖಾನೆಗೆ ಹಣಕೊಡಿಸಬೇಕೆಂಬುದು ಅವರ ಟೀಕಾಕಾರರ ಸಲಹೆ ಆದರೆ ಇದೇ ಪರಿಹಾರ ಅಲ್ಲ ಎಂಬುದು ಅವರ ಸಮರ್ಥಕರ ನಿಲುವು. ಕಾರ್ಖಾನೆಯನ್ನು ಆರಂಭಿಸದAತೆ ಎತ್ತಿಕಟ್ಟುವ ಕೆಲಸವನ್ನು ಕೆಲ ವಿಶಿಷ್ಟ ಹಿತಾಸಕ್ತಿಗಳು ಕಾಣದ ಕೈಗಳಾಗಿ ಕೆಲಸ ಮಾಡುತ್ತಿವೆ. ರೈತರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿ ಅವರನ್ನು ಪ್ರಚೋದಿಸುವುದು, ಕಾರ್ಮಿಕರನ್ನೂ ಎತ್ತಿಕಟ್ಟಿ ಕಾರ್ಖಾನೆ ಆರಂಭಿಸದAತೆ ವಾತಾವರಣ ಸೃಷ್ಠಿಸುವುದು, ಹಾಲಿ ಅಧ್ಯಕ್ಷ ರಾಮಣ್ಣ ತಳೇವಾಡ ಅವರನ್ನು ಸಂಕಷ್ಟದಲ್ಲಿ ಸಿಲುಕಿಸುವುದು ಈ ಉದ್ದೇಶ ಎಂಬುದು ಆಡಳಿತ ಮಂಡಳಿಯಲ್ಲಿನ ಕೆಲವರ ಅನಿಸಿಕೆಗಳು. ಒಟ್ಟು ಬೆಳವಣಿಗೆಗಳನ್ನು ಕಾಯಬೇಕಿದೆ. ಕಾರ್ಖಾನೆ ಉತ್ಪಾದಿಸಿದ ಸಕ್ಕರೆಯನ್ನು ಹರಾಜು ಮಾಡಿದರೆ ಈ ಸಾಲಿನ ಹಂಗಾಮಿನ ರೈತರ ಬಾಕಿ ತೀರಬಹುದು ಆದರೆ ಮುಂದಿನ ಹಂಗಾಮಿನ ಗತಿ ಏನು. ಇದನ್ನು ಆಡಳಿತ ಮಂಡಳಿ ನಿರ್ಧರಿಸಬೇಕಿದೆ.

             ಬಾಕ್ಸ್
         ರಾಜೀನಾಮೆಗೆ ತಳೇವಾಡ ಚಿಂತನೆ..?   
 ಸ್ವಹಿತಾಸಕ್ತಿಯ ಕೆಲವರು, ರಾಜಕೀಯ ವಿರೋಧಿಗಳು ಕೆಲವರು ಸೃಷ್ಠಿಸಿರುವ ಪರಿಸ್ಥಿತಿ ಇದು. ಕೊರೊನಾ ಹಾಗೂ ಕಾರ್ಮಿಕರ ನಿಲುವಗಳಿಂದಾಗಿ ಸಮಸ್ಯೆ ಪರಿಹಾರಕ್ಕೆ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿರುವ ರಾಮಣ್ಣ ತಳೇವಾಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ರಾಜೀನಾಮೆಯನ್ನು ನೀಡಬಾರದು ಸವಾಲು ಎದುರಿಸೋಣ, ಕಾರ್ಖಾನೆಯನ್ನು ಬಲಪಡಿಸೋಣ ಎಂದು ಅವರ ಆಪ್ತರು ಸಲಹೆ ಮಾಡುತ್ತಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಕಾರ್ಖಾನೆ ಬಗ್ಗೆ ಕಾಳಜಿ ಹೊಂದಿದ್ದಾರೆ. ಸೂಕ್ತ ಕಾಲಕ್ಕೆ ಎಲ್ಲ ತೀರ್ಮಾನ ಹೊರಬೀಳುತ್ತದೆ ಎಂಬುದು ಅವರ ವಿಶ್ವಾಸ.