ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಗಲಕೋಟೆ ಮೂಲದ ಹೈಕೋರ್ಟ್ ಉದ್ಯೋಗಿ 

ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಗಲಕೋಟೆ ಮೂಲದ ಹೈಕೋರ್ಟ್ ಉದ್ಯೋಗಿ 
ಬಾಗಲಕೋಟೆ: ಅವರದು ಮುದ್ದಾದ ಕುಟುಂಬ. ಉದ್ಯೋಗದಲ್ಲಿ ಅವರು ಅತ್ಯಂತ ನಿಷ್ಠಾವಂತರು. ಹಗಲು, ರಾತ್ರಿ ಕೆಲಸದಲ್ಲೆ ಸಮಯ ಕಳೆಯುತ್ತಾ ಜೀವನದಲ್ಲಿ ನೆಮ್ಮದಿ ಕಂಡವರು. ಈಗ ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 
ಬಾಗಲಕೋಟೆ ಮೂಲದ ವಿಷ್ಣುತೀರ್ಥ ವಡವಿ(೫೧) ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದರು. ಬೆಂಗಳೂರಿನ ಹೈಕೋರ್ಟ್ನಲ್ಲಿ ಸಿಸ್ಟಮ್ ಎಡ್ಮಿನಿಸ್ಟೇಟರ್ ಆಗಿದ್ದ ಅವರು ತಮ್ಮ ಅಂಗಾಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ತಾಯಿ, ಪತ್ನಿ, ಓರ್ವ ಪುತ್ರಿ, ಇಬ್ಬರು ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮನೆಯಲ್ಲಿ ನಸುಕಿನ ಜಾವವೇ ಕೆಲಸಕ್ಕೆ ಕೂರುತ್ತಿದ್ದ ಅವರು ರಜೆ ದಿನಗಳಲ್ಲೂ ಕಚೇರಿ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಿದ್ದರು. ಇತ್ತೀಚೆಗೆ ಮನೆಯಲ್ಲಿ ನಸುಕಿನ ಜಾವವೇ ಅವರು ಕೆಲಸಕ್ಕೆಂದು ಕುಳಿತಿದ್ದು, ನಂತರ ಪತ್ನಿಯ ಸಲಹೆ ಮೇರೆಗೆ ವಿಶ್ರಾಂತಿಗೆ ತೆರಳಿದ್ದಾರೆ. ನಂತರ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿಲ್ಲ. ಅವರು ಬದುಕುವುಳಿಯುವುದು ಅನುಮಾನ ಎಂಬುದು ಗೊತ್ತಾದ ಮೇಲೆ ತಮ್ಮ ಅಂಗಾಗಳನ್ನು ಅವರು ದಾನ ಮಾಡಿ ಹಲವು ಜೀವಗಳಿಗೆ ಬೆಳಕಾಗಿದ್ದಾರೆ. 
ತಮ್ಮ ಕಣ್ಣು, ಹೃದಯ, ಶ್ವಾಸಕೋಶ, ಯಕೃತ್ತುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ನಗರದ ಕಂಚಿ, ಪಂಡರಿ, ಆಲೂರು ಕುಟುಂಬಗಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅವರು ಅಗಲಿದ್ದಾರೆ.