ಇದ್ದಕ್ಕಿದ್ದಂತೆ ಎದ್ದೇ ಹೋದರಲ್ಲ ಅಜಾತಶತ್ರು..!

ಕನ್ನಡಪರ ಹೋರಾಟಗಾರ, ಹಿರಿಯ ಪತ್ರಕರ್ತ ಅಶೋಕ‌ ಚಂದರಗಿ ಅವರು ದಿವಂಗತ ಸುರೇಶ ಅಂಗಡಿ ಅವರೊಂದಿಗಿನ ಒಡನಾಟದ ಕುರಿತು ಹಂಚಿಕೊಂಡಿರುವ ಬರಹ ಇಲ್ಲಿದೆ .

ಇದ್ದಕ್ಕಿದ್ದಂತೆ ಎದ್ದೇ ಹೋದರಲ್ಲ ಅಜಾತಶತ್ರು..!

ಅಜಾತ ಶತ್ರು ಇದ್ದಕ್ಕಿದ್ದಂತೆ
ಎದ್ದೇ ಹೋದನಲ್ಲ!ಟಿವ್ಹಿ ಸುದ್ದಿ
ನೋಡಿ ಅರಗಿಸಿಕೊಳ್ಳಲಾಗದೇ
ಚಾನೆಲ್ ಬದಲಿಸಿ ಏನೋ ನೋಡಿದೆ!!

       ನಿನ್ನೆ ಬುಧವಾರ ರಾತ್ರಿ ಸುರೇಶ ಅಂಗಡಿ
ಅಗಲಿಕೆಯ ಸುದ್ದಿ ಬರುತ್ತಿದೆಯೆಂದು
ಮಿತ್ರರೊಬ್ಬರು ಫೋನ್ ಮಾಡಿದಾಗ
ನಂಬಲಾಗಲಿಲ್ಲ!ರಾಧಾ ಕೃಷ್ಣ ಧಾರಾವಾಹಿಯೊ,ಮತ್ತೊಂದೊ ನೋಡುತ್ತಿದ್ದೆ
ಎರಡು ತಿಂಗಳಿಂದ ಟಿವ್ಹಿ ಸುದ್ದಿ
ನೋಡುವದನ್ನೇ ನಿಲ್ಲಿಸಿದ್ದೇವೆ!
          ಹತ್ತು  ನಿಮಿಷ ನೋಡಿದೆ.ಏನೋ
ಆಘಾತದ ಅನುಭವ.ಮಾಧ್ಯಮ ಮಿತ್ರರ ಫೋನುಗಳು,ಹೊರ ಊರುಗಳಿಂದ ಕರೆಗಳು ಸತತವಾಗಿ ಬರತೊಡಗಿದವು.ಸುರೇಶ ಅಂಗಡಿಯವರ ರಾಜಕೀಯ,ಸಾಮಾಜಿಕ ಹಿನ್ನೆಲೆಯನ್ನು ವಿವರಿಸಿದೆ.ಮತ್ತೆ ಸುದ್ದಿ
ಬಿಟ್ಟು ಬೇರೆ ಚಾನೆಲ್ ಹಾಕಿದೆ.
       ಇತರರಂತೆ ನನಗೂ ಶಾಕ್.1980 ರಲ್ಲಿ ನಾನು ರಾಮದುರ್ಗದಿಂದ ಬೆಳಗಾವಿಗೆ ಬಂದಾಗ ಅಥವಾ 1995 ರವರೆಗೂ ಅವರೊಬ್ಬ ಸಿಮೆಂಟ್ ವ್ಯಾಪಾರಿಯಂತಲೊ ಜಮೀನು ಖರೀದಿಸಿ ನಿವೇಶನ ತಯಾರಿಸಿ ಮಾರಾಟ ಮಾಡುವವರೊ ಎಂದೇ ಗುರುತಿಸಲ್ಪಡುತ್ತಿದ್ದರು.1996 ರಲ್ಲಿ ಅವರು ಬಿಜೆಪಿ ಸೇರಿದಾಗಲೇ ರಾಜಕಾರಣದಲ್ಲಿ ಗುರುತಿಸಿಕೊಂಡರು.1994 ರ ವಿಧಾನ ಸಭೆ ಚುನಾವಣೆಯಲ್ಲಿ ಬಾಗೇವಾಡಿ ಬಿಜೆಪಿ ಟಿಕೆಟ್ ಪಡೆದಿದ್ದ ಅವರ ಮಾವ( ತಾಯಿಯ ತಮ್ಮ) ಲಿಂಗರಾಜ ಪಾಟೀಲರ ಪ್ರಚಾರವನ್ನು ಸುರೇಶ ಮಾಡಿದ್ದರಷ್ಟೆ.
        2004,2009,2014 ಮತ್ತು 2019 ರಲ್ಲಿ ನಾಲ್ಕು ಬಾರಿ ಆಯ್ಕೆಯಾದ ಅವರು ಕಪ್ಪು ವರ್ಣದ ಲ್ಯಾಂಬ್ರೇಟಾ ಸ್ಕೂಟರ್ ಹತ್ತುವ ದಿನಗಳಿಂದಲೂ ನನಗೆ ಪರಿಚಿತರು.ಸಾಕಷ್ಟು ಸಲಿಗೆ.ಎಲ್ಲಿಯವರೆಗೆ ಎಂದರೆ ನನ್ನ ಮತ್ತು ದಿ.ಸಿದ್ದನಗೌಡ ಪಾಟೀಲರ  ಸಮಾಧಿಗಳನ್ನು ಮುಂಚಿತವಾಗಿಯೇ ಒಂದೇ ಕಡೆಗೆ ಸಿದ್ಧಪಡಿಸಿದರೆ ಒಳ್ಳೆಯದು ಎಂದು ನಾಲ್ಕು ಮಂದಿಯೆದುರೇ ಹೇಳುತ್ತಿದ್ದರು! ನಾನು ಸಿದ್ದನಗೌಡರು ನಗುತ್ತಲೇ ಅವರ ಮಾತನ್ನು ಕೇಳುತ್ತಿದ್ದೆವು.
       ಭಾಷಾ ವಿವಾದ ಬಂದಾಗ ಅವರದು ತುಸು  ಮರಾಠಿಗರ ಪರವಾಗಿಯೇ ಜೋಲು ಹೋಗುತ್ತಿತ್ತು.ಈ ವಿಷಯದ ಬಗ್ಗೆ ನಾನು ಬಹಿರಂಗವಾಗಿಯೇ ಅವರೊಂದಿಗೆ ಜಗಳಾಡಿದ್ದಿದೆ.ಮಾಧ್ಯಮದಲ್ಲಿಯೇ ಝಾಡಿಸಿದ್ದಿದೆ.ಆದರೂ ಅವರ ಮತ್ತು ನನ್ನ ವೈಯಕ್ತಿಕ ಸ್ನೇಹಕ್ಕೆ ಯಾವದೇ ಚ್ಯುತಿ ಭರಲಿಲ್ಲ.
        2018 ರ ಅಸೆಂಬ್ಲಿ ಚುನಾವಣೆಯಲ್ಲಿ ನಾನೊಂದು ಸಲಹೆ ಕೊಟ್ಟೆ.ಇನ್ನು ಲೋಕಸಭೆ ಸಾಕು.ಅಸೆಂಬ್ಲಿಗೆ ನಿಲ್ಲಿ.ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೂ ಸಿಗಬಹುದು.ಬೆಳಗಾವಿಯಿಂದ ಇನ್ನೂವರೆಗೆ ಯಾರೂ ಸಿಎಮ್ ಆಗಿಲ್ಲ.ಶಂಕರಾನಂದ ,ವಸಂತರಾವ ಪಾಟೀಲರು ಅವಕಾಶ ಸಿಕ್ಕರೂ ಸಿಎಮ್ ಹುದ್ದೆ ಅಲಂಕರಿಸಲಿಲ್ಲ.ನೀವು ಒಬ್ಬರಾದರೂ ಕೈ ಹಾಕಿ ಎಂದೆ.ಆ ವರ್ಷ ರಾಜ್ಯದ ಹತ್ತು ಸಂಸದರು ಅಸೆಂಬ್ಲಿ ಟಿಕೆಟ್ ಕೇಳಿದ್ದರು.ಬಿಜೆಪಿ ಹೈ ಕಮಾಂಡ ಯಾರಿಗೂ ಕೊಡಲಿಲ್ಲ.
         ಸುರೇಶರಿಗೆ ಸಿಎಮ್ ಆಗುವ ಆಕಾಂಕ್ಢೆ ಇತ್ತು.ಯಡಿಯೂರಪ್ಪ ಕಳೆದ ವರ್ಷ ಸಿಎಮ್ ಆಗುವಾಗ ಒಂದು ಮಾತು ಬಂತು.ಅವರಿಗೆ ಇದೊಂದು ಕೊನೆಯ ಅವಕಾಶವಿದೆ.ಆಗಿ ಬಿಡಲಿ.ಮುಂದೆ ನಮ್ಮಂಥವರಿಗೆ ದಾರಿ
ಕ್ಲಿಯರ್ ಆಗುತ್ತದೆ ಎಂದಿದ್ದರು ಸುರೇಶ.
        ಅವರು ಕೇಂದ್ರ ರೈಲು ಸಚಿವರಾಗಿದ್ದಾಗ
ಮನೆಗೆ ಹೋಗಿ ದೊಡ್ಡ ಬುಕ್ಕೆ ಕೊಟ್ಟು ಬಂದೆ.ನಂತರ ಯಾವದೋ ಒಂದು ವಿಷಯದಲ್ಲಿ ಜಗಳ ಬಂತು.ಝಾಡಿಸಿ ಬರೆದೆ.ಸ್ವಲ್ಪ ಮುನಿಸಿಕೊಂಡರು.ಕೊರೋನಾ ಸಂದರ್ಭದಲ್ಲಿ ನಾನು ನೂರು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ನಡೆಸಿದ " ಹಸಿದವರತ್ತ ನಮ್ಮ ಚಿತ್ತ" ಅಭಿಯಾನದ ಕಾಲಕ್ಕೆ ನನಗೆ ಫೋನ್ ಮಾಡಿ ನಾಲ್ಕು ಒಳ್ಖೆಯ ಮಾತು ಆಡಿದರು.
        ಮೊನ್ನೆ ಸಿದ್ದನಗೌಡರು ನಿಧನರಾದ ರಾತ್ರಿ ದಿಲ್ಲಿಯಿಂದ ಫೋನ್ ಮಾಡಿ " ನಿಮಗೇ ನಾನು ಫೋನ್ ಮಾಡಿದೆ.ಗೌಡರ ನಿಧನದಿಂದ ನಿಮಗಾದಷ್ಟು ಯಾರಿಗೂ  ದುಃಖ ಆಗಿರಲಾರದು" ಎಂದಿದ್ದರು.
        ನಾನು ಎಮ್ ಎಲ್ ಸಿ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾಗ ಅವರು ಸಿಎಮ್  ಗೆ ಪತ್ರ ಕಳಿಸಿದ್ದರು.ನಾನೆಂದೆ," ಇಂಥ ಪತ್ರ ಬರೆಯುವ  ರಾಜಕೀಯ ನನಗೂ ಗೊತ್ತು.ಖರೇನ ಹೇಳುವದಿದ್ದರೆ ನನ್ನನ್ನು ಎಮ್ ಎಲ್ ಸಿ ಸ್ಥಾನ ಮಾಡದಿದ್ದರೆ
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವದಾಗಿ ಹೇಳ್ತೀರೇನು? ಎಂದು ನಗುತ್ತ ಕೇಳಿದ್ದೆ.ನಗುತ್ರಲೇ ಚಹಾ ಕುಡಿಸಿ ಕಳಿಸಿದರು.
       ಸುರೇಶ ಒಂದು ಸ್ವಭಾವ.ಯಾರೇ ಫೋನ್ ಮಾಡಿ ಮಿಸ್ ಕಾಲ್ ಕೊಟ್ಟರೂ ಮರಳಿ ಫೋನ್ ಮಾಡುತ್ತಿದ್ದರು.ತಮ್ಮ ಕ್ಷೇತ್ರದ ಜನರ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿದ್ದರು.ಹೀಗಾಗಿ ಅವರು ಅನೇಕ ಬಾರಿ ಕೆಲಸ ಮಾಡದಿದ್ದರೂ ಜನರೊಂದಿಗೆ ಒಳ್ಖೆಯ ಸಂಬಂಧ ಹೊಂದಿದ್ದರು.
         ಎಷ್ಟೇ ಕೆಲಸ ಮಾಡಿದರೂ ಜನರು ಮರೆತೇ ಬಿಡುತ್ತಾರೆ.ಅಂಗಡಿ ಎಂದರೆ ಯಾರು ? ಸುರೇಶ ಅಂಗಡಿಯೊ ಗೋಕಾಕದ ಅಂಗಡಿಯೊ ಎಂದು ಕೇಳಿದರೂ ಅಚ್ಚರಿಯಿಲ್ಲ ಎಂದು ನನ್ನೆದುರು ಹೇಳಿಯೇ ಹೇಳುತ್ತಿದ್ದರು.
        ಒಂದು ಮಾತ್ರ ಸತ್ಯ.ಕೊರೋನಾ ಸೋಂಕಿಗೆ ಅವರು ಬಲಿಯಾಗಿದ್ದು ಜನರಿಗೆ ಒಂದು ಎಚ್ಚರಿಕೆಯ ಗಂಟೆಯಾಗಬೇಕು.ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲೇ ಬೇಕು.
        ಸುರೇಶ ಮೊನ್ನೆ ಇದ್ದರು.ಇಂದು ಇಲ್ಲ.ಆಯುಷ್ಯ ಮುಗಿದು ಬಂದರೆ ಯಾರೂ ಅಷ್ಟೆ.ಆದರೆ ಇದ್ದಷ್ಟು ದಿನ ನಾವು ಮನುಷ್ಯರಂತೆ ಬದುಕಬೇಕು.ನಡೆದುಕೊಳ್ಳಬೇಕು.

ಅಶೋಕ ಚಂದರಗಿ
ಪತ್ರಕರ್ತರು,ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ.ಮೊ;9620114466