ಅಪ್ಪಟ ದೇಶಭಕ್ತ, ಹಾವುಗಳ ರಕ್ಷಣೆಗೂ ನಿಂತ: ಬಾಗಲಕೋಟೆ ಡ್ಯಾನಿಯ ಕಥೆ ಹೇಳುತ್ತೇವ ಕೇಳಿ
ವಿಷಕಾರಿ ಹಾವುಗಳನ್ನು ರಕ್ಷಿಸುತ್ತಲೇ ಅದರ ಕಡಿತದಿಂದಲೇ ಹತರಾದ ಡ್ಯಾನಿಯಲ್ ನ್ಯೂಟನ್ ಜೀವನದ ಹಲವು ವಿಚಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಭಾಸ್ಕರ ಮನಗೂಳಿ
ಬಾಗಲಕೋಟೆ:
ಮಿಲಿಟರಿ ಪ್ಯಾಂಟು, ಶರ್ಟು ಅದರ ಮೇಲೊಂದು ಕರಿ ಬಣ್ಣದ ಕೋಟು, ತಲೆ ಮೇಲೊಂದು ಹ್ಯಾಟು, ಕರಿ ಕೋಟಿನ ಮೇಲೆ ಭಗತ್ ಸಿಂಗ್ ರ ಫೋಟೊ ಇರುವ ಲಾಂಛನ, ಹೆಣ್ಮಕ್ಕಳು ಅಸೂಯೇ ಪಡುವಷ್ಟು ಉದ್ದನೆಯ ತಿಳಿ ಕೂದಲು...
ಇವನನ್ನ ನೋಡಿ ಮಾತಾಡ್ಸೋಕೆ ಹೋಗೊದೆ ಒಂದು ಸಾಹಸ, ಇವನ ಹತ್ತಿರ ಹೋಗಲು ಸಹ ಭಯ, ಇನ್ನೂ ಕೈ ಕುಲುಕುವುದು ಅಂತೂ ದೂರದ ಮಾತು.. ಇವನ ಹತ್ತಿರ ಹೋದರೆ ಎಲ್ಲಿ ಹಾವು ಕಡಿಯುತ್ತೋ ಅಥವಾ ಮೈ ಮೇಲೆ ಏರೂತ್ತೊ ಅನ್ನೋ ಭಯ... ಸದಾ ಹಾವಿನ ಜೊತೆ ಸರಸ, ಎರಡೇ ಎರಡು ಬಾರಿ ಮಾತ್ರ ವಿರಸ.. ಅದೇ ಎರಡನೇ ಬಾರಿ ವಿರಸವೇ ಇವಮ ಜೀವ ತಗೆದುಕೊಂಡಿತು.
ಹಾವು ಎಂದಾಕ್ಷಣ ಬಾಗಲಕೋಟೆ ಜನರಿಗೆ ನೆನಪಾಗುವವನೇ ಈ ಡ್ಯಾನಿ.. ಹಾವು ಹಿಡಿಯುವುದು ಈ ಡ್ಯಾನಿಯಲ್ ನ್ಯೂಟನ್ ನ ಸಮಾಜ ಸೇವೆ.. ಇದಷ್ಟೆ ಅಲ್ಲ ಅವನ ಇತಿಹಾಸ ಅವಲೋಕಿಸಿತ್ತ ಹೊರಟರೆ ಸ್ವತಂತ್ರ ಸಂಗ್ರಾಮದ ಸ್ವತಂತ್ರ ಸೇನಾನಿಯೋರ್ವರ ಪುನರ್ಜನ್ಮವಿದ್ದಂತೆ ಭಾಸವಾಗುತ್ತಿತ್ತು.. ಅವನಿಗಿದ್ದ ಸ್ವತಂತ್ರ ಸಂಗ್ರಾಮ ಇತಿಹಾಸದ ಜ್ಞಾನ ಊಹಿಸಲಾಗದಷ್ಟು ಆಳ, ದೇಶ ಭಕ್ತರೆನಿಸಿಕೊಂಡವರಿಗೂ ಗೊತ್ತಿಲ್ಲದ ಸ್ವತಂತ್ರ ವೀರರ ಹೆಸರು, ಅವರ ಇತಿಹಾಸ ಅವನ ಬಾಯಲ್ಲಿ ಕೇಳುವಾಗ ಆ ಸಂದರ್ಭವೇ ಕಣ್ಮುಂದೆ ಬರುವಂತೆ ಹೇಳುತ್ತಿದ್ದ.
ಹುಟ್ಟಿನಿಂದಲೂ ಕಮ್ಯುನಿಷ್ಠ ಸಿದ್ದಾಂತದಲ್ಲಿಯೇ ಪಳಗಿ ನಾಸ್ತಿಕ ಜೀವನ ನಡೆಸುತ್ತಿದ್ದ ಈತ ಯೋಧರ ಬಗ್ಗೆ ಜನರಲ್ಲಿ ಜಾಗೃತಿ ಮುಡಿಸುವಲ್ಲಿ ಯಶಸ್ವಿಯಾಗಿದ್ದ ಅಲ್ಲದೆ ಉರಗಗಳ ಬಗ್ಗೆಯೂ ಜನರಲ್ಲಿ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದ.ಸಿಮೆಂಟ್ ಕಾರ್ಖಾನೆಯ ನೌಕರರಾಗಿದ್ದ ಈತನ ತಂದೆಯವರು ಸಹ ಕಮ್ಯುನಿಷ್ಠ ಸಿದ್ದಾಂತವನ್ನು ಅಳವಡಿಸಿಕೊಂಡಿದ್ದಕ್ಕಾಗಿ ಅವರ ಹಾಗೂ ಕ್ರಾಂತ್ರಿಕಾರಿ ಚೇ ಗುವೇರಾ ಅವರ ಪರಿಪಾಲಕನಾಗಿ, ಅವರ ತತ್ವಗಳ ಅನುಯಾಯಿಯಾಗಿ, ಅವರ ಸಿದ್ದಾಂತಗಳಿಗೆ ಭದ್ಧನಾಗಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದ ಈತ ನಗರದ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ, ಮನೆಮನೆಗೆ ಚಿರಪರಿಚಿತನಾಗಿದ್ದ.
ದೇಶ ಭಕ್ತಿಯ ಮೈಲಿಗಲ್ಲು ಒಂದೆಡೆಯಾದರೆ ಬಾಗಲಕೋಟೆ ನಗರದ ಬೆಳವಣಿಗೆ ಹಾಗೂ ಜನಪರ ಕಾಳಜಿ ಊಹಿಸಲಾಗದಷ್ಟು ಇತ್ತು, ಹಾವು ಹಿಡಿಯುವ ಸಮಾಜ ಸೇವೆಯಂತೂ ಶಿಖರ ಉತ್ತುಂಗದ್ದಷ್ಟೆ ಎತ್ತರವಿತ್ತು. ಹಗಲು, ಇರುಳು ಮಧ್ಯರಾತ್ರಿ ಯಾರೇ ಕರೆ ಮಾಡಿ ಹಾವು ಬಂದಿದೆ, ದಯವಿಟ್ಟು ಬನ್ನಿ ಎಂದು ಕರೆ ಮಾಡಿದರೆ ಸಾಕು ತನ್ನ ಸೈಕಲ ಮೇಲೆ ಅವರ ಅವರ ಮನೆಯತ್ತ ಧಾವಿಸಿ ಹಾವಿನ ಜೀವ ರಕ್ಷಿಸಿ ಜನರಲ್ಲಿರುವ ಭಯ ಹೋಗಲಾಡಿಸುತ್ತಿದ್ದ. ೧೦೦ಕ್ಕೂ ಹೆಚ್ಚು ಬಾರಿ ಹಾವಿನ ಕಡಿತವಾಗಿದೆ, ಆವಾಗೆಲ್ಲ ಅವನು ಹೇಳೊದು ಒಂದೆ ಮಾತು IT IS KISSING ME. ೩೦೦೦ ಕ್ಕೂ ಹೆಚ್ಚು ಉರಗಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾನೆ, ೧೦೦೦ ಕ್ಕೂ ಹಚ್ಚು ನಾಗರ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಡಿದ್ದಾನೆ. ಅನೇಕಬಾರಿ ಗಾಯಗೊಂಡ ಹಾವುಗಳನ್ನು ತಾನೇ ಖುದ್ಧಾಗಿ ಚಿಕಿತ್ಸೆ ನೀಡಿ ಅದರ ಆರೈಕೆ ಮಾಡಿ ಗುಣಮುಖವಾದ ಮೇಲೆ ಸುರಕ್ಷಿತ ಸ್ಥಳಕ್ಕೆ ಬಿಟ್ಡಿದ್ದಾನೆ. ಸರಿಯಾಗಿ ಎರಡು ತಿಂಗಳ ಹಿಂದೆಯಷ್ಟೇ ನಾಗರ ಹಾವೊಂದು ಕಚ್ಚಿತ್ತು, ಅದರ ಪರಿಣಾಮ ಕೋಮಾದಲ್ಲಿ ಹೋಗಿದ್ದ, ಚಿಕಿತ್ಸೆ ಪಡೆದು ಗುಣಮುಖನಾಗಿದ್ದ, ಗುಣಮುಖವಾದ ಮೇಲೆ ನನ್ನೊಡೆನೆ ಹೇಳಿಕೊಂಡಿದ್ದ ಯಾಕೋ ಈ ಹಾವು ನನ್ನ ಮೇಲೆ ಕೋಪಿಸಿಕೊಂಡಿತ್ತು ಎಂದು. ಆದರೆ ಇಂದು ಎರಡನೇ ಅದೇ ಪ್ರಭೇದದ ನಾಗರ ಹಾವೊಂದು ತೀವ್ರವಾಗಿ ಕೋಪಿಸಿಕೊಂಡು ಇವನ ಜೀವವನ್ನೆ ತಗೆದುಕೊಂಡಿತು.ಬರಿ ಗೈಯಿಂದ ಹಾವು ಹಿಡಿಯುತ್ತಿದ್ದ ಈತನಿಗೆ ಭಯವೇ ಇರಲಿಲ್ಲ, ಆದರೂ ಸಹ ಅನೇಕ ಬಾರಿ ಜಿಲ್ಲಾಡಳಿತದ ವಿರುದ್ಧ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟಿಸಿದ್ದಾನೆ, ಬಾಗಲಕೋಟೆ ಮುಳುಗಡೆ ನಗರಿಯಾಗಿದ್ದರಿಂದ ಇಲ್ಲಿ ಹಾವುಗಳ ಒಡಾಟ ಸಹಜ, ಇದರಿಂದ ಜನರಿಗೆ ಅನುಕೂಲವಾಗುಂತೆ ಕೆಲಸ ಮಾಡುತ್ತಿದ್ದ ಈತನಿಗೆ ಹಾವು ಹೊಡಿಯುವ ಕಿಟ್ ಅವಶ್ಯಕತೆ ಇತ್ತು, ಸುಮಾರು ೬೦ ಸಾವಿರ ವೆಚ್ಚವಾಗುವ ಈ ಕಿಟ್ ಅರಣ್ಯ ಇಲಾಖೆ ಹಾವು ಹಿಡಿಯುವ ತಜ್ಞರಿಗೆ ಉಚಿತವಾಗಿ ಕೊಡುತ್ತದೆ, ಆ ಕಿಟ್ ಬಗ್ಗೆ ಬೇಡಿಕೆಯಿಟ್ಟು ಅನೇಕಬಾರಿ ಹೋರಾಟ ಮಾಡಿದ್ದ, ಅರಣ್ಯ ಇಲಾಖೆಯ ಅಸಡ್ಡೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯೇ ಈತನ ಸಾವಿಗೆ ಕಾರಣವಾಗಿಬಿಟ್ಟಿತೆನೋ ಅನ್ನೋ ಮಾತು ಇವನ ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದೆ.. ಅರಣ್ಯ ಇಲಾಖೆ ಹಾವು ಹಿಡಿಯುವ ಕಿಟ್ಟ ಕೊಟ್ಟಿದ್ದರೆ ಇವತ್ತು ನಮ್ಮ ಡ್ಯಾನಿಯ ಜೀವ ಉಳಿಯುತ್ತಿತ್ತೆನೋ ಅನ್ನೋ ವಿಚಾರ ಎಲ್ಲ ಮನದಲ್ಲಿ ಬರುತ್ತಿದೆ.
ಒಂದು ಬಾರಿಯಂತೂ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಹಾವು ತನ್ನ ಜೊತೆ ಇಟ್ಟುಕೊಂಡೆ ಪ್ರತಿಭಟಿಸಿದ್ದಾನೆ, ಆದರೂ ಜಿಲ್ಲಾಡಳಿತ ಕಣ್ತೆರೆಯಲಿಲ್ಲ.
ಸಾಮಾಜಿಕ ಕಾರ್ಯಕರ್ತ, ಯುವಾ ಬ್ರಿಗೇಡ್ ಸಂಸ್ಥಾಪಕ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆಯ ಆಪ್ತನಾಗಿದ್ದ ಈತ ಬಾಗಲಕೋಟೆಗೆ ಚಕ್ರವರ್ತಿ ಆಗಮಿಸುತ್ತಿದ್ದಾರೆಂದರೆ ಸಾಕು ಎಲ್ಲ ಕೆಲಸವನ್ನು ಬದಿಗಿಟ್ಟು ಅವರೊಟ್ಟಿಗೆ ನಿಂತುಕೊಳ್ಳುತ್ತಿದ್ದ. ಸ್ವಾಮಿ ವಿವೇಕಾನಂದರ ಮತ್ತಮ್ಮೊ ದಿಗ್ವಿಜಯ ಯಾತ್ರೆಯ ಸಮಾರೋಪ ಬಾಗಲಕೋಟೆಯಲ್ಲಾದಾಗ ವಿವಿಧ ಕೆಲಸಗಳ ಜವಾಬ್ದಾರಿ ತಗೆದುಕೊಂಡು ಅನೇಕ ಬ್ಯಾಡ್ಜಗಳು, ನೆನಪಿನ ಕಾಣಿಗಳನ್ನು ಸ್ವತಃ ತಯಾರಿಸಿಕೊಟ್ಟಿದ್ದ, ಚಕ್ರವರ್ತಿಯವರಿಗೆ ಇವನ ನಿಧನ ವಿಷಯ ತಿಳಿದಾಗ ಧಿಘ್ಬ್ರಾಂತರಾದರು.
ಹೀಗೆ ಅನೇಕ ದೇಶಭಕ್ತ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದ ಈತನಿಗೆ ರಾಜ್ಯದ ಅನೇಕ ಮಹನೀಯರು ಆಪ್ತರಾಗಿದ್ದರು. ಇವನಲ್ಲಿರುವ ದೇಶ ಭಕ್ತಿಯನ್ನು ಕಂಡು ಪುಳಕಿತರಾಗಿತ್ತಿದ್ದರು.
ಇವನಲ್ಲಿರುವ ರಚನಾತ್ಮಕ ಹೊಸ ಹೊಸ ಅನೇಕ ಯೋಜನೆಗಳು ಇವನ ಜೊತೆಗೆ ಮಣ್ಣಾದವು. ಬಾಗಲಕೋಟೆಯ ಸಾಧಕರನ್ನು ಜನರಿಗೆ ಮುಟ್ಟಿಸುವಲ್ಲಿ ವಿಶೇಷವಾದ ಯೋಜನೆಯನ್ನೊಂದನ್ನು ಹಾಕಿಕೊಂಡಿದ್ದ, ಅದಕ್ಕೆ ಬೇಕಾದ ಕೆಳ ಮಟ್ಟದ ಎಲ್ಲ ಕೆಲಸಗಳನ್ನು ಮಾಡಿದ್ದ, ಸಾಧಕರ ಕಟ್ಟೆ ಎನ್ನುವ ಹೆಸರಿನಲ್ಲಿ ಕಾರ್ಯಕ್ರಮವೊಂದನ್ನು ಯೋಚಿಸಿದ್ದ. ಹೀಗೆ ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದ ಈತನ ಜೊತೆ ಅವೆಲ್ಲವೂ ಮಣ್ಣಾದವು. ಇವನ ಆಪ್ತ ವಲಯದಲ್ಲಿ ಕೊನೆಯಲ್ಲಿ ಮೂಡುವ ಪ್ರಶ್ನೆಯೊಂದೆ ಅರಣ್ಯ ಇಲಾಖೆ ಹಾವು ಹಿಡಿಯವ ಕಿಟ್ ಕೊಟ್ಟಿದ್ದರೆ ಈತ ಇವತ್ತು ನಮ್ಮೊಂದಿಗೆ ಇರುತ್ತಿದ್ದ.. ಇನ್ನುಮುಂದೆ ಹಾವು ಕಂಡಾಗ ಮಾತ್ರ ಇವನು ನನಪಿಗೆ ಬರೆದೇ ಇರಲು ಸಾಧ್ಯವಿಲ್ಲ.. ಹಾವಿದ್ದಲ್ಲಿ ಈತ ಇರುತ್ತಿದ್ದ, ಹಾವಿನ ಜೊತೆ ಇರುತ್ತಿದೆ, ಹಾವಿನಿಂದಲೇ ಮಣ್ಣಾದ..