೨ಎ ಮೀಸಲಾತಿಗೆ ಆಗ್ರಹ: ಡಿ.೨೨ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ
ಬಾಗಲಕೋಟೆ:
ಪಂಚಮಸಾಲಿ ೨ಎ ಮೀಸಲಾತಿಗೆ ಒತ್ತಾಯಿಸಿ ಡಿ.೨೨ ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಬಿಟಿಡಿಎ ಸದಸ್ಯ, ಪಂಚಮಸಾಲಿ ಸಮಾಜದ ಮುಖಂಡ ಮೋಹನ ನಾಡಗೌಡ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ, ಹಡಪದ ಸಮಾಜದಂಥ ಚಿಕ್ಕ ಸಮುದಾಯಗಳಿಗೂ ೨ಎ ಸ್ಥಾನಮಾನ ದೊರೆಯಬೇಕು. ನಮ್ಮ ಸಮಾಜಕ್ಕೂ ಸಿಗಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರ ದಿನಾಂಕವನ್ನು ಮುಂದೂಡುತ್ತಲೇ ಬಂದಿದೆ.ಈ ಬಾರಿ ಅಂತಿಮ ಹೋರಾಟವಾಗಿರಲಿದೆ. ಸಮಾವೇಶದಲ್ಲಿ ಕನಿಷ್ಠ ೨೫ ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದರು.
ಯುವ ಮುಖಂಡ ಮಂಜುನಾಥ ಪುರತಗೇರಿ ಮಾತನಾಡಿ, ಸವದತ್ತಿಯಲ್ಲಿ ಸೋಮವಾರ ಸಮಾವೇಶ ಮುಗಿದ ನಂತರ ಪಾದಯಾತ್ರೆ ಆರಂಭವಾಗಲಿದೆ. ಸರ್ಕಾರ ಮೀಸಲಾತಿ ಘೋಷಿಸಿದರೆ ಅಭಿನಂದನಾ ಸಮಾವೇಶ ನಡೆಯಲಿದೆ ಇಲ್ಲವಾದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದರು.
ಮುಖಂಡರಾದ ಎಸ್.ಎಸ್.ರಾಂಪೂರ, ಈರಪ್ಪ ಕೋಟಿ, ಸಂಗಮೇಶ ದೊಡ್ಡಮನಿ ಇದ್ದರು.