ಸಾರ್ವಜನಿಕ ಹಿತಾಸಕ್ತಿ ಇಲ್ಲದ RTI ಅರ್ಜಿ ತಿರಸ್ಕರಿಸಬಹುದು

ಮಾಹಿತಿ ಹಕ್ಕು ಕಾಯ್ದೆ ಕುರಿತಾದ ಕಾರ್ಯಾಗಾರದಲ್ಲಿ ಕಾಯ್ದೆ ದುರಪಯೋಗಪಡಿಸಿಕೊಳ್ಳುವ ಪ್ರಸಂಗಗಳ ಬಗ್ಗೆಯೂ ಬೆಳಕು ಚೆಲ್ಲಲಾಯಿತು.ಅರ್ಜಿಯೊಂದು ಸಲ್ಲಿಕೆಯಾದಾಗ ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲದಿದ್ದರೆ ಅಂಥ ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸಬಹುದು

ಸಾರ್ವಜನಿಕ ಹಿತಾಸಕ್ತಿ ಇಲ್ಲದ RTI ಅರ್ಜಿ ತಿರಸ್ಕರಿಸಬಹುದು

ಬಾಗಲಕೋಟೆ: ಮಾಹಿತಿ ಹಕ್ಕು ಅಧಿನಿಯಮ ಕುರಿತು ಪ್ರತಿಯೊಬ್ಬ ಅಧಿಕಾರಿ, ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಅಧಿಕಾರಿಗಳು ಕಡ್ಡಾಯವಾಗಿ ಅರಿತುಗೊಳ್ಳುವುದು ಅಗತ್ಯವಾಗಿದೆ ಎಂದು ವಿಷಯ ತಜ್ಞ ಡಾ.ಶೇಖರ ಸಜ್ಜನರ ಹೇಳಿದರು.

             ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿ ಗುರುವಾರ ಮಾಹಿತಿ ಹಕ್ಕು ಅಧಿನಿಯಮ-2005 ಕುರಿತು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಅಧಿಕಾರಿಗಳಿಗೆ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಕಾಯ್ದೆಯನ್ನು ಸರಿಯಾಗಿ ತಿಳಿದುಕೊಂಡು ಕಾರ್ಯನಿರ್ವಹಿಸಿದರೆ ಯಾವುದೇ ರೀತಿಯ ಸಮಸ್ಯೆ ಎದುರಾಗುವದಿಲ್ಲ. ಮಾಹಿತಿ ಲಭ್ಯವಿಲ್ಲದಿದ್ದರೆ ನಿಗದಿತ ಅವಧಿಯಲ್ಲಿ ಅರ್ಜಿದಾರರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
           ದೇಶದಲ್ಲಿ ಪ್ರತಿ ವರ್ಷ ಅಂದಾಜು 50 ಲಕ್ಷ ಹಾಗೂ ರಾಜ್ಯದಲ್ಲಿ 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಅದರಲ್ಲಿ ಶೇ.3 ರಷ್ಟು ಮೇಲ್ಮನವಿಗೆ ಸಲ್ಲಿಕೆಯಾಗುತ್ತಿವೆ. ಭೌತಿಕವಾಗಿ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಲಭ್ಯವಿರುವ ಮಾಹಿತಿಯನ್ನು ಇರುವ ಮಾದರಿಯಲ್ಲಿ ಮಾತ್ರ ನೀಡಬಹುದಾಗಿದೆ. ಮೂರನೇ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ ನೀಡುವಂತಿಲ್ಲ. ಮೂರನೇ ವ್ಯಕ್ತಿಯ ಸಮ್ಮತಿ ಇದ್ದಲ್ಲಿ ಮಾತ್ರ ನೀಡಬಹುದಾಗಿದೆ. ಯಾವುದೇ ರೀತಿಯ ಅಭಿಪ್ರಾಯಗಳನ್ನು ನೀಡುವಂತಿಲ್ಲ. ಸಾರ್ವಜನಿಕ ಹಿತಾಸಕ್ತಿ ಇಲ್ಲದಿರುವ ಅರ್ಜಿಗಳನ್ನು ಮಾಹಿತಿ ಅಧಿಕಾರಿಗಳು ತಿರಸ್ಕರಿಸಬಹುದಾಗಿದೆ ಎಂದರು.
              ಒಂದು ವಿಷಯಕ್ಕೆ ಸಂಬಂಧಿಸಿದ ಒಂದು ವರ್ಷದ ಮಾಹಿತಿಯನ್ನು ನೀಡಬಹುದಾಗಿದೆ. ಆದರೆ ಒಂದಕ್ಕಿಂತ ಹೆಚ್ಚು ವರ್ಷಗಳ ಮಾಹಿತಿಯನ್ನು ಕೇಳುವಂತಿಲ್ಲ. ನಿಯಮಾವಳಿ ಅನುಸಾರ ಎ, ಬಿ, ಸಿ, ಡಿ, ಇ ಕೆಟಗರಿ ಪ್ರಕಾರ ಸರಕಾರಿ ದಾಖಲೆಗಳನ್ನು ಸಂರಕ್ಷಿಸಿ ಇಡಬೇಕು. ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಹಿತಿಯನ್ನು ಅರ್ಜಿದಾರರಿಗೆ ನೀಡುವ ಅಗತ್ಯವಿರುವದಿಲ್ಲ. ಅರ್ಜಿದಾರ ಮಾಹಿತಿ ಅಧಿಕಾರಿಗಳಿಗೆ ನಿರ್ದೇಶನ, ಸಲಹೆ, ಮಾರ್ಗದರ್ಶನ ನೀಡಲು ಅಥವಾ ಪ್ರಶ್ನೆ ಕೇಳಲು ಅವಕಾಶವಿಲ್ಲ. ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಮಾಹಿತಿಯನ್ನು ನೀಡಬೇಕಾಗಿಲ್ಲ ಎಂದರು.
            ಸರಕಾರಿ ನೌಕರರ ವೇತನ ಅಥವಾ ಸೇವೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬಹುದು. ಆದರೆ ವೇತನ ಪ್ರಮಾಣ ಪತ್ರ ವ್ಯಯಕ್ತಿಕ ಮಾಹಿತಿಯಾಗಿರುವದರಿಂದ ಅದನ್ನು ನೀಡುವಂತಿಲ್ಲ. ಒಂದು ಅರ್ಜಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ 150 ಶಬ್ದಗಳಲ್ಲಿ ಮಾತ್ರ ಕೇಳಬೇಕು. ದಾಖಲೆಗಳ ಪರಿವೀಕ್ಷಣೆಗೆ ಅವಕಾಶವಿದ್ದು, ಪ್ರಾರಂಭದ ಒಂದು ಗಂಟೆ ಉಚಿತವಾಗಿದ್ದು, ನಂತರ ಅರ್ಧ ಗಂಟೆಗೆ 10 ರೂಗಂತೆ ಶುಲ್ಕ ನೀಡಬೇಕಾಗುತ್ತದೆ. ಅರ್ಜಿದಾರ ಕೇಳಿದ ಮಾಹಿತಿ 30 ದಿನಗಳ ಒಳಗಾಗಿ ರವಾನೆ ಮಾಡಬೇಕು. ಆ ಪತ್ರ ಅರ್ಜಿದಾರರಿಗೆ ಎಷ್ಟು ದಿನಕ್ಕಾದರು ಮುಟ್ಟಬಹುದು ಎಂದರು.
            ಕಾಮಗಾರಿ ಪರಿವೀಕ್ಷಣೆಗೆ ಅವಕಾಶವಿದ್ದು, ಕಾಮಗಾರಿಗಳಲ್ಲಿ ಬಳಸುವ ಕಡಿ ಮತ್ತು ಸಿಮೆಂಟ್‍ನ ಸ್ಯಾಂಪಕ್ ಕೇಳಿದಾಗ ಶುಲ್ಕ ಪಡೆದು ನೀಡಬಹುದಾಗಿದೆ. ಅಂಗನವಾಡಿ ಪರಿಶೀಲನೆ, ಶಾಲಾ ಶಿಕ್ಷಕರ ಕೆಲಸದ ಬಗ್ಗೆ ಪರಿಶೀಲನೆ ಮಾಡಲು ಅವಕಾಶವಿರುವದಿಲ್ಲ. ಬಿಪಿಎಲ್ ಕಾರ್ಡ ಹೊಂದಿರುವವರಿಗೆ 100 ಪುಟಗಳಷ್ಟು ಉಚಿತವಾಗಿ ನೀಡಬಹುದಾಗಿದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಎಫ್‍ಐ.ಆರ್ ಪ್ರತಿ ನೀಡಬಹುದು ಆದರೆ ಆಪಾದನ ಪತ್ರ ನೀಡುವಂತಿಲ್ಲ. ಚಾಲನಾ ಪತ್ರದ ಮಾಹಿತಿಯನ್ನು ನೀಡಬಹುದಾಗಿದೆ.ಮಾಹಿತಿ ಹಕ್ಕು ಕಾಯ್ದೆ ಕುರಿತು ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರಲ್ಲದೇ ಸಂದೇಶಗಳನ್ನು ಸಹ ಪರಿಹರಿಸಿದರು. 
             ಯುಕೆಪಿಯ ಮಹಾವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಪಾಲ್ಗೊಂಡಿದ್ದರು.