ಶಂಕರನಾಗ ಸೀತಾರಾಮು ಚಿತ್ರದಂತೆ ಬಾಗಲಕೋಟೆಯಲ್ಲಿ ನಡೆಯಿತು ಮಿದುಳು ಜೋಡಣೆ
ಬದಲಿ ಮಿದುಳು ಜೋಡಣೆಯ 'ಸೀತಾರಾಮು' ಚಿತ್ರ ಅಂದಿನ ಆಕರ್ಷಣೆಯಾದರೆ, ಬಾಗಲಕೋಟೆಯ ಮೆಡಿಕಲ್ ಕಾಲೇಜಿನ ಸಾಧನೆ ಇಂದಿನ ಆಕರ್ಷಣೆ! ಈ ಬಗ್ಗೆ ಹಿರಿಯ ಸಿನೆಮಾ ಪತ್ರಕರ್ತ ಗಣೇಶ ಕಾಸರಗೋಡು ಅವರು ಸಿದ್ಧಪಡಿಸಿರುವ ವಿಶೇಷ ವರದಿ ಇಲ್ಲಿದೆ ಓದಿ.
◆ ಮೊಟ್ಟ ಮೊದಲು ಶಂಕರನಾಗ್ ಮತ್ತು ಮಂಜುಳಾ ನಟಿಸಿದ 'ಸೀತಾರಾಮು' ಚಿತ್ರದ ಈ ಒನ್ ಲೈನ್ ಸ್ಟೋರಿ ಓದಿ ಬಿಡಿ : ಪರಸ್ಪರ ಪ್ರೀತಿಸುವ ಯುವಜೋಡಿಯೊಂದು ಮದುವೆಯಾಗಲು ನಿರ್ಧರಿಸುತ್ತಾರೆ, ಆದರೆ ಆ ಹೊತ್ತಿಗೆ ಹುಡುಗನ ಕೊಲೆಯಾಗುತ್ತದೆ. ಹುಡುಗಿಗೆ ಹುಚ್ಚು ಹಿಡಿಯುತ್ತದೆ. ಆಗ ಹುಡುಗನ ವೈದ್ಯ ಗೆಳೆಯನೊಬ್ಬ, ಸತ್ತ ತನ್ನ ಸ್ನೇಹಿತನ ಮೆದುಳನ್ನು ಹುಡುಗಿಗೆ ಕಸಿ ಮಾಡಿಸುತ್ತಾನೆ. ಹುಡುಗಿಯ ರೂಪದಲ್ಲಿ ಸತ್ತ ನಾಯಕ ತನ್ನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ...
- 1979ರಲ್ಲಿ ಅಂದರೆ ಇಂದಿಗೆ ಸರಿಯಾಗಿ 42 ವರ್ಷಗಳ ಹಿಂದೆ ತೆರೆ ಕಂಡು ಸೂಪರ್ ಹಿಟ್ ಆದ ಸಿನಿಮಾ 'ಸೀತಾರಾಮು'.
◆ ಈಗ 2021ರ ಕಡೆ ಬರೋಣ. ಇದು ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿ. ಈ ಸುದ್ದಿಯ ಬೆನ್ನು ಹತ್ತಿ ಹೋದಾಗ ಕೆಲವು ಕುತೂಹಲಕರ ವಿಷಯ ಬಹಿರಂಗವಾಯಿತು. ಅದರ ವಿವರ ಇಲ್ಲಿದೆ : ಇದು ಬಾಗಲಕೋಟೆಯ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ನಡೆದ ಪವಾಡ ಸದೃಶ ಆಪರೇಷನ್'ನ ವಿವರ. ಡಾ|ಸಂಜೀವ ಕೊಳಗಿ ಮತ್ತು ಡಾ|ಅಜಯ್ ಹೇರೂರ ಟೀಮ್'ನವರ ಸಾಹಸದ ಕಥೆಯಿದು. ಸತ್ತ ವ್ಯಕ್ತಿಯ ಮಿದುಳನ್ನು ಕೃತಕವಾಗಿ ಸಕ್ರಿಯಗೊಳಿಸಿ ಪ್ರಾಯೋಗಿಕ ಕಲಿಕೆಗೆ ಬಳಸುವ ಪ್ರಯೋಗವಿದು. ಇದು ಇಡೀ ದೇಶದಲ್ಲೇ ಪ್ರಥಮ ಎಂದು ಹೇಳಲಾಗಿದೆ...
- ಮೇಲಿನ ಎರಡು ಸುದ್ದಿಗಳ ಸಾಮ್ಯತೆಯನ್ನು ಒಮ್ಮೆ ಗಮನಿಸಿ ನೋಡಿ! 2021ರಲ್ಲಿ ನಡೆದ ಈ ಪ್ರಯೋಗದ ಸಾಧ್ಯತೆಯನ್ನು 42 ವರ್ಷಗಳ ಹಿಂದೆಯೇ ಸಿನಿಮಾವೊಂದರಲ್ಲಿ ಬಳಸಿಕೊಳ್ಳಲಾಗಿದೆ ಅಂದರೆ, 'ಸೀತಾರಾಮು' ಚಿತ್ರದ ತಾಂತ್ರಿಕ ಟೀಮಿನ ಬಗ್ಗೆ ಹೆಮ್ಮೆ ಮೂಡದಿರದು.
'ಮಧು ಆರ್ಟ್ ಫಿಲಂಸ್' ಲಾಂಛನದಲ್ಲಿ ಎ. ಎಲ್.ಅಬ್ಬಾಯಿನಾಯ್ಡು ನಿರ್ಮಿಸಿರುವ 'ಸೀತಾರಾಮು' ಚಿತ್ರದ ನಿರ್ದೇಶಕರು ವಿ.ಸೋಮಶೇಖರ್. ಕಥೆ, ಚಿತ್ರಕಥೆ ಬರೆದವರು ಆ ಕಾಲದಲ್ಲಿ ಸ್ಟಾರ್ ಕಥೆಗಾರರಾಗಿದ್ದ ಎಂ.ಡಿ.ಸುಂದರ್. ನೀವು ನಂಬಲಿಕ್ಕಿಲ್ಲ : ಗಂಧದಗುಡಿ, ಶಂಕರ್ ಗುರು, ನಾನಿನ್ನ ಬಿಡಲಾರೆ, ಸೋದರರ ಸವಾಲ್, ಕಳ್ಳಕುಳ್ಳ, ಕೆರಳಿದ ಸಿಂಹ, ಆಟೋರಾಜಾ...ಮೊದಲಾದ ಸೂಪರ್ ಡೂಪರ್ ಹಿಟ್ ಸಿನಿಮಾಗಳಿಗಾಗಿ ಕಥೆ ಬರೆದವರು ಇದೇ ಎಂ.ಡಿ.ಸುಂದರ್! ಮೂಲತಃ ತೆಲುಗಿನವರಾದರೂ ಕನ್ನಡ ಚಿತ್ರರಂಗಕ್ಕೆ ತಮ್ಮ ಅದ್ಭುತ ಕಥೆಗಳ ಮೂಲಕ ಮಾರುಕಟ್ಟೆ ತಂದು ಕೊಟ್ಟವರು.
42 ವರ್ಷಗಳ ಹಿಂದೆ ಈ ಸಿನಿಮಾ ತೆರೆಕಂಡಾಗ ಪತ್ರಿಕೆಗಳು ಮೂದಲಿಸಿ ಬರೆದಿದ್ದನ್ನು ಮತ್ತು ಪತ್ರಕರ್ತರು ಕಾಲೆಳೆದುದನ್ನು ಹಿರಿಯ ಪತ್ರಕರ್ತರಾದ ಯಗಟಿ ಮೋಹನ್ ಸ್ವಾರಸ್ಯಕರವಾಗಿ ಬಣ್ಣಿಸುವುದನ್ನು ನೀನು ನೋಡಬೇಕು! ಇಂಥಾ ಬದಲಿ ಮಿದುಳು ಜೋಡಣೆಯ ಕಥೆಯೇ ಹಾಸ್ಯಾಸ್ಪದ ಎಂದು ಬುದ್ದಿಜೀವಿಗಳು ಗೊಣಗುತ್ತಿರುವಂತೆಯೇ 'ಸೀತಾರಾಮು' ಚಿತ್ರ ನೂರು ದಿನ ಪ್ರದರ್ಶಿತವಾಗಿ ದಾಖಲೆ ನಿರ್ಮಿಸಿತು...
ಈಗ ಬಾಗಲಕೋಟೆಯ ಮೆಡಿಕಲ್ ಕಾಲೇಜಿನ ಬದಲಿ ಮಿದುಳು ಜೋಡಣೆಯ ಈ ವೈಜ್ಞಾನಿಕ ವಿದ್ಯಾಮಾನವನ್ನು ಕಂಡವರು ಮೂಗಿನ ಮೇಲೆ ಬೆರಳಿಡುವುದು ಗ್ಯಾರಂಟಿ! ಹಾಗಿದ್ದರೆ ಆ ಕಾಲದಲ್ಲೇ ಇಂಥಾದ್ದೊಂದು ಕಥೆ ಬರೆದ ಎಂ.ಡಿ.ಸುಂದರ್ ಅವರ ಮಿದುಳು 'ಅಸಾಮಾನ್ಯ ಕಥೆಗಾರ'ನ ಮಿದುಳು ಎಂದು ಧಾರಾಳವಾಗಿ ಹೇಳಬಹುದು!