ಜಿಲ್ಲೆಯಲ್ಲಿ ಕಳ್ಳಭಟ್ಟಿಗ ಸಾರಾಯಿಗೆ ಅವಕಾಶವಿಲ್ಲ: ಡಿಸಿ ಖಡಕ್ ವಾರ್ನಿಂಗ್

ಜಿಲ್ಲೆಯಲ್ಲಿ ಕಳ್ಳಭಟ್ಟಿಗ ಸಾರಾಯಿಗೆ ಅವಕಾಶವಿಲ್ಲ: ಡಿಸಿ ಖಡಕ್ ವಾರ್ನಿಂಗ್

ಕಳ್ಳಭಟ್ಟಿ ಸಾರಾಯಿಗೆ ಅವಕಾಶವಿಲ್ಲ: ಡಿಸಿ ಖಡಕ್ ವಾರ್ನಿಂಗ್

ಬಾಗಲಕೋಟೆ ಡಿ.೩೦ : ಜಿಲ್ಲೆಯ ವಿವಿಧ ಇಲಾಖೆಯೊಂದಿಗೆ ಸಮನ್ವತೆ ಸಾಧಿಸಿಕೊಂಡು ಬಾಗಲಕೋಟೆ ಜಿಲ್ಲೆಯನ್ನು ಕಳ್ಳಭಟ್ಟಿ ಮುಕ್ತ ಜಿಲ್ಲೆಯನ್ನಾಗಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.
           ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಳ್ಳಬಟ್ಟಿ ನಿರ್ಮೂಲನೆ ಕುರಿತು ಜರುಗಿದ ಜಿಲ್ಲಾ ಮಟಟ್ಟ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳ್ಳಬಟ್ಟಿ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಕಳ್ಳಬಟ್ಟಿ ತಯಾರಿಕೆ ವ್ಯಾಪ್ತಿಯಲ್ಲಿ ಗ್ರಾಮ ಸಭೆ, ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರನ್ನು ಆಹ್ವಾನಿಸಿ ಇಂತಹ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿಗಳ ಮನಪರಿವರ್ತನೆಗೆ ಅಗತ್ಯ ಕ್ರಮವಹಿಸಲು ಸೂಚಿಸಿದರು.
             ಕಳ್ಳಭಟ್ಟಿ, ವಿಷಪೂರಿತ ಮದ್ಯ ತಯಾರಿಕೆ, ಸಾಗಾಟ ಮತ್ತು ಮಾರಾಟದಂತಹ ಅಕ್ರಮಗಳು ಕಂಡುಬಂದಲ್ಲಿ ಕೂಡಲೇ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರು ಸಹ ಮಾಹಿತಿ ನೀಡಿದಲ್ಲಿ ಅಂತಹ ವ್ಯಕ್ತಿಗಳಿಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹಧನ ಸಹ ನೀಡಲಾಗುವುದೆಂದು ಸಾರ್ವಜನಿಕರಲ್ಲಿ ವ್ಯಾಪಕವಾದ ಪ್ರಚಾರ ಕೈಗೊಳ್ಳಲು ತಿಳಿಸಿದರು. ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಕಳ್ಳಭಟ್ಟಿ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಮಾರಾಟ ಮೇಲೆ ನಿಗಾ ವಹಿಸಲು ತಿಳಿಸಿದರು.
             ಅಬಕಾರಿ ಕಾಯ್ದೆಯಡಿ ಹಿಡುವಳಿದಾರ, ಕಂದಾಯ ವಸೂಲು ಮಾಡುವ ಅಧಿಕಾರಿ ಮತ್ತು ಗ್ರಾಮ ಮಟ್ಟದ ಅಧಿಕಾರಿ, ನೌಕರರು ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಚುನಾಯಿತಿ ಪ್ರತಿನಿಧಿಗಳು ಅವರ ಕಾರ್ಯವ್ಯಾಪ್ತಿಯಲ್ಲಿ ನಡೆಯುವ ಅಬಕಾರಿ ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ಹೊಂದಿರುತ್ತಾರೆ. ಈ ಬಗ್ಗೆ ವಲಯ ಅಬಕಾರಿ ನಿರೀಕ್ಷಕರು ತಿಳುವಳಿಕೆ ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. 
             ಅಬಕಾರಿ ಉಪ ಆಯುಕ್ತರು ಶಿವಲಿಂಗಪ್ಪ ಬನಹಟ್ಟಿ ಅವರು ಜಿಲ್ಲೆಯಲ್ಲಿ ಒಟ್ಟು 297 ನವೀಕರಣಗೊಂಡು ಕಾರ್ಯನಿರ್ವಹಿಸುತ್ತಿರುವ ಸನ್ನದುಗಳಿವೆ. ಅಬಕಾರಿ ಇಲಾಖೆ ರಾಜಸ್ವವನ್ನು ಸಂಗ್ರಹಿಸುವದರ ಜೊತೆಗೆ ಕಳ್ಳಭಟ್ಟಿ, ವಿಷಪೂರಿತ ಮದ್ಯವನ್ನು ತಡೆಗಟ್ಟುವುದು ಪ್ರಮುಖ ಸವಾಲಾಗಿದೆ. ಕಳ್ಳಭಟ್ಟಿ, ವಿಷಪೂರಿತ ಮದ್ಯಸೇವನೆಯಿಂದ ಹೊರ ರಾಜ್ಯ ಹಾಗೂ ಕರ್ನಾಟಕ ರಾಜ್ಯದಲ್ಲಿ ಸಂಭವಿಸಿದ ದುರಂತಗಳ ಕುರಿತು ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಇಂತಹ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ತಿಳಿಸಿದರು. 
            ಕಳ್ಳಭಟ್ಟಿ ಸೇವನೆಯಿಂದ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರವಹಿಸಲಾಗುತ್ತಿದೆ. ಬಾದಾಮಿ ವಲಯದಲ್ಲಿ ಕೆಂದೂರ ತಾಂಡಾದ ಆರೋಪಿಗಳ ಮೇಲೆ ದಾಖಲಿಸಿದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ 1ರಲ್ಲಿ ಇಬ್ಬರು ಆರೋಪಿಗಳಿಗೆ ಹಾಗೂ ಇನ್ನೊಂದು ಪ್ರಕರಣದಲ್ಲಿ ಒಬ್ಬ ಆರೋಪಿಗಳಿಗೆ 1 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ.ಗಳ ದಂಡ ವಿಧಿಸಿ ಬಾದಾಮಿ ಜೆ.ಎಂ.ಎಫ್‍ಸಿ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಇಲಾಖೆಯಿಂದ ಜಾರಿ ಮತ್ತು ತನಿಖಾ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ ಎಂದರು.
           ಎಪ್ರೀಲ್-23 ದಿಂದ ನವೆಂಬರ-23ರ ವರೆಗೆ ಕಳ್ಳಭಟ್ಟಿ ಕೇಂದ್ರಗಳ ಮೇಲೆ ಒಟ್ಟು 1493 ದಾಳಿ ನಡೆಸಿದ್ದು, ಈ ಪೈಕಿ 86 ಪ್ರಕರಣ ದಾಖಲಿಸಲಾಗಿದೆ. ಒಟ್ಟು 451.700 ಲೀಟರ ಕಳ್ಳಭಟ್ಟಿ ಸಾರಾಯಿ, 330 ಲೀಟರ್ ಬೆಲ್ಲದ ಕೊಳೆ ವಶಪಡಿಸಿಕೊಳ್ಳಲಾಗಿದೆ. 20 ದ್ವಿಚಕ್ರ ವಾಹನಗಳನ್ನು ಸಹ ಜಪ್ತ ಮಾಡಿಕೊಳ್ಳಲಾಗಿದೆ. ದಾಳಿ ಕಾರ್ಯಾಚರಣೆ ಕುರಿತು ಪಿಪಿಟಿ ಮೂಲಕ ವಿವರವಾಗಿ ಮಾಹಿತಿ ನೀಡಿದರು.
            ಸಭೆಯಲ್ಲಿ ಅಬಕಾರಿ ಅಧೀಕ್ಷಕ ಶಾಂತೇಶ ಕಮತರ, ಅಬಕಾರಿ ಉಪ ಅಧೀಕ್ಷಕ ಹನಮಂತಪ್ಪ ಭಜಂತ್ರಿ ಸೇರಿದಂತೆ ಜಿಲ್ಲೆಯ ಎಲ್ಲ ವಲಯಗಳ ಅಬಕಾರಿ ನಿರೀಕ್ಷಕರು ಹಾಗೂ ಉಪ ನಿರೀಕ್ಷಕರು ಉಪಸ್ಥಿತರಿದ್ದರು.