ನವನಗರದ ೧೦೫೧೬ ಖಾಲಿ ನಿವೇಶನಗಳ ಮಾಲೀಕರೆ ಕೂಡಲೇ ಡಿಪಿಆರ್ ಕಾರ್ಡ್ ಪಡೆದುಕೊಳ್ಳಿ..!

ನವನಗರದ ೧೦೫೧೬ ಖಾಲಿ ನಿವೇಶನಗಳ ಮಾಲೀಕರೆ ಕೂಡಲೇ ಡಿಪಿಆರ್ ಕಾರ್ಡ್ ಪಡೆದುಕೊಳ್ಳಿ..!

        ಬಾಗಲಕೋಟೆ: ಬಾಗಲಕೋಟೆ ನಗರದ ಆಸ್ಥಿಗಳ ಅಳತೆ ಕಾರ್ಯವನ್ನು ಈಗಾಗಲೇ ಪೂರೈಸಿದ್ದು, ನವನಗರದ ಯುನಿಟ್-೧ ಮತ್ತು ೨ರಲ್ಲಿ ಖಾಲಿ ಇರುವ ೧೦೫೧೬ ನಿವೇಶನದಾರರು  ನಗರ ಮಾಪನ ಕರಡು ಆಸ್ತಿ ಪತ್ರಗಳನ್ನು ಕಚೇರಿಯಿಂದ ಸ್ವೀಕರಿಸಬೇಕೆಂದು ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕಿ ನಜ್ಮಾ ಪೀರಜಾದೆ ಸೂಚಿಸಿದ್ದಾರೆ.


 ನಗರದ ಯುಪಿಓಆರ್ ಕಚೇರಿಯಲ್ಲಿ ವಿಚಾರಣಾಧಿಕಾರಿಗಳು ತಪಾಸಕರ ಹಾಗೂ ಭೂಮಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಗಲಕೋಟೆ ನಗರಾಸ್ಥಿಗಳ ಡಿಪಿಆರ್ ತಯಾರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಸುಮಾರು ೧೦೫೧೬ ಖಾಲಿ ನಿವೇಶನಗಳು ಇರುವದರಿಂದ ಹಕ್ಕುದಾರರು, ಮಾಲಿಕರ ಖಾಯಂ ವಿಳಾಸ ಲಭ್ಯವಿರದ ಕಾರಣ ಕರಡು ನಗರಾಸ್ಥಿ ಪ್ರತಿಗಳನ್ನು ವಿತರಿಸಲಾಗಿರುವದಿಲ್ಲ. ಈ ಕುರಿತು ಭೂದಾಖಲೆಗಳ ಉಪ ನಿರ್ದೇಶಕರು ಈಗಾಗಲೇ ಪತ್ರಿಕಾ ಪ್ರಕಟಣೆ ನೀಡಿದ್ದರೂ ಸಹ ಸದರಿ ಖಾಲಿ ನಿವೇಶನಗಳ ಹಕ್ಕುದಾರರು ಡಿಪಿಆರ್ ತೆಗೆದುಕೊಂಡು ಹೋಗಿರುವದಿಲ್ಲವೆಂದರು.
 ಸದರಿ ಡಿಪಿಆರ್‌ಗಳನ್ನು ಯುಪಿಓಆರ್ ಕಚೇರಿ, ಬಾಗಲಕೋಟೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಹೊಸ ಜಿಲ್ಲಾ ಪಂಚಾಯತಿ ಸಭಾಂಗಣ ಎದುರಿಗೆ ರೂ.ನಂ.೨೪೫ರಲ್ಲಿ ಸಾರ್ವಜನಿಕರ ಪರಿಶೀಲನೆಗಾಗಿ ಇಡಲಾಗಿದ್ದು, ಆಸ್ತಿ ಮಾಲಿಕರು ಕಚೇರಿಯ ಅವಧಿಯಲ್ಲಿ ಬಂದು ತಮ್ಮ ಆಸ್ತಿಗಳ ಕರಡು ಪತ್ರವನ್ನು ಒಂದು ವಾರದಲ್ಲಿ ಪಡೆದುಕೊಳ್ಳಲು ತಿಳಿಸಿದ್ದಾರೆ. ತಪ್ಪಿದಲ್ಲಿ ಲಭ್ಯವಿರುವ ದಾಖಲೆಗಳ ಮೇರೆಗೆ ಅಂತಿಮ ನಗರಾಸ್ಥಿ ಪತ್ರಗಳನ್ನು ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಭೂದಾಖಲೆ ಇಲಾಖೆಯ ಉಪನಿರ್ದಶಕ ರವಿಕುಮಾರ ಎಂ, ಸಹಾಯಕ ನಿರ್ದೇಶಕರು ಹಾಗೂ ಭೂಮಾಪನ ಸಿಬ್ಬಂದಿಗಳು ಹಾಜರಿದ್ದರು.