ಬದಲಾವಣೆ ಮಾರ್ಚ್ ಅಂತ್ಯಕ್ಕೂ ಆಗಬಹುದು, ಮುಂದಿನವಾರವೇ ಆಗಬಹುದು- ಯತ್ನಾಳ್ ಬಾಂಬ್
* ಡಿಕೆಶಿಗೆ ಧೈರ್ಯ ಇದ್ದರೆ ಸಿಡಿ ಬಿಡುಗಡೆಗೊಳಿಸಲಿ
ನಾಡನುಡಿ ನ್ಯೂಸ್
ಬಾಗಲಕೋಟೆ ಜ.೧೪:
ರಾಜ್ಯದಲ್ಲಿ ಬದಲಾವಣೆ ನಿಶ್ಚಿತ. ಅದು ಮಾರ್ಚ್ ಅಂತ್ಯಕ್ಕೆ ಆಗಬಹುದು ಅಥವಾ ಜ.೨೫ರಂದೇ ಆಗಬಹುದು ಕಾಯ್ದು ನೋಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿAದ ಹೊರಟ ಪಾದಯಾತ್ರೆಗೆ ಚಾಲನೆ ನೀಡಲು ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಂಕ್ರಾAತಿಯ ನಂತರ ನಮ್ಮ ಆಟ ಶುರುವಾಗುತ್ತದೆ ಎಂದು ಹೇಳಿದ್ದೆ. ಈಗ ಆರಂಭವಾಗಿದೆ ಕಾಯ್ದು ನೋಡಿ ಎಂದರು.
ಯಡಿಯೂರಪ್ಪನವರ ಮನೆಯಲ್ಲಿ ನಡೆದಿರುವ ಬೆಳವಣಿಗೆಗಳ ಸಿಡಿಯನ್ನು ಈಗ ಮಂತ್ರಿಯಾದ ಮೂವರು ನನಗೆ ತಂದು ತೋರಿಸಿದ್ದರು. ನೋಡಲಾಗದಂಥ ದೃಶ್ಯಗಳಿವೆ. ಅವರ ಮೊಮ್ಮಗನೇ ಅದನ್ನು ಮಾಡಿದ್ದಾನೆ. ಕಾಂಗ್ರೆಸ್ಸಿನವರು ಆ ಸಿಡಿಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ಗೆ ವಿರೋಧ ಪಕ್ಷದ ನಿಜವಾದ ಕಾಳಜಿ ಇದ್ದರೆ ಆ ಸಿಡಿಯನ್ನು ಹೊರಹಾಕಲಿ ಎಂದು ಸವಾಲು ಹಾಕಿದರು. ನನ್ನಲ್ಲಿ ಆ ಸಿಡಿ ಇಲ್ಲ ಎಂದು ಅವರು ಎಚ್.ವಿಶ್ವನಾಥರ ಆರೋಪಕ್ಕೆ ಸ್ಪಷ್ಟಿಕರಣ ನೀಡಿದರು.
ಅವರ ಆಪ್ತ ಸಹಾಯಕನಿಗೆ ರಾಜಕೀಯ ಸ್ಥಾನಮಾನ ನೀಡಿದ್ದು ಏಕೆ, ಮಂತ್ರಿ ಪಟ್ಟಕ್ಕೆ ಮಾನದಂಡ ಏನು ಎಂಬುದನ್ನು ಯಡಿಯೂರಪ್ಪ ಹೇಳಲಿ ಎಂದು ಸವಾಲು ಹಾಕಿದ ಅವರು ಯಡಿಯೂರಪ್ಪ ರಾಜೀನಾಮೆ ಕೊಟ್ಟರೆ ಯಾವ ಮಠಗಳೂ ಹೋರಾಟ ಮಾಡುವುದಿಲ್ಲ. ಇದೆಲ್ಲ ಮಾಧ್ಯಮದ ಸೃಷ್ಠಿ ಅವರನ್ನು ರಾಜಾಹುಲಿ ಎಂದು ಬಿಂಬಿಸಿದ ಮಾಧ್ಯಮಗಳ ಬಗ್ಗೆಯೂ ಅವರು ಕಿಡಿಕಾರಿದರು. ಯುವರಾಜನ ಜತೆಗೆ ಒಡನಾಟದ ಬಗ್ಗೆ ನೀವು ಸುದ್ದಿ ಮಾಡಿದ್ದೀರಿ..ಮುಂದೇನಾಯ್ತು.. ಯಾಕೆ ಸುಮ್ಮನಾಗಿದ್ದೀರಿ ಎಂದು ಮಾಧ್ಯಮಗಳನ್ನೇ ಯತ್ನಾಳ್ ಪ್ರಶ್ನಿಸಿದ್ದಾರೆ. ಸಿಡಿಗಳ ಬಗ್ಗೆ ನನಗೆ ಯಾರು ಹೇಳಿದರು ಎಂಬುದನ್ನು ಸೂಕ್ತ ಕಾಲದಲ್ಲಿ ತಿಳಿಸುತ್ತೇನೆ. ಇದರ ಬಗ್ಗೆ ಮುಕ್ತ ತನಿಖೆ ಆಗಬೇಕಿದ್ದರೆ ಯಡಿಯೂರಪ್ಪನವರು ಅದನ್ನು ಸಿಬಿಐಗೆ ಒಪ್ಪಿಸಲಿ ಎಂದು ಆಗ್ರಹಿಸಿದರು.