ಪ್ರವಾದಿ ಕುರಿತು ವಿದಾತ್ಮಕ ಹೇಳಿಕೆ :ಬಾಗಲಕೋಟೆ ಮುಸ್ಲಿಂ ಯೂನಿಟಿಯಿಂದ ಪ್ರತಿಭಟನೆ

ಪ್ರವಾದಿ ಕುರಿತು ವಿದಾತ್ಮಕ ಹೇಳಿಕೆ :ಬಾಗಲಕೋಟೆ ಮುಸ್ಲಿಂ ಯೂನಿಟಿಯಿಂದ ಪ್ರತಿಭಟನೆ
ಬಾಗಲಕೋಟೆ:ಪ್ರವಾದಿ ಮೊಹಮ್ಮದರ ಕುರಿತು ಮಹಾರಾಷ್ಟ್ರದ ಸ್ವಾಮಿ ರಾಮಗಿರಿ ಗುರು ನಾರಾಯಣ ಗಿರಿ ಅವರು ನೀಡಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಾಗಲಕೋಟೆ ಮುಸ್ಲಿಂ ಯೂನಿಟಿಯಿಂದ ಶುಕ್ರವಾರ ನವನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನವನಗರದ ಅಂಬೇಡ್ಕರ್ ಭವನ ಮುಂಭಾಗದಿAದ ಹೊರಟ ಮೆರವಣಿಗೆಯಲ್ಲಿ ಪಾಲ್ಗೊಂಡ ಮುಸ್ಲಿಂ ಸಮುದಾಯದವರು  ಸ್ವಾಮಿ ರಾಮಗಿರಿ ಗುರು ನಾರಾಯಣ ಗುರಿ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಶಿರಡಿ ಮೂಲದ ಸ್ವಾಮಿ ರಾಮಗಿರಿ ಗುರು ನಾರಾಯಣ ಗುರಿ ಮಹಾರಾಜರು ಆ.೧೫ ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆ ಸಿನ್ನಾರ ತಾಲೂಕಿನ ಶಹಾ ಪಂಚಾಲೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾದಿ ಮೊಹಮ್ಮದರ ಕುರಿತಾಗಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಅವರ ಮೇಲೆ ಕ್ರಮಕೈಗೊಳ್ಳಬೇಕೆಂದು ನೀಡಿರುವ ಮನವಿಯಲ್ಲಿ ದೂರಿದ್ದಾರೆ. 
ಭಾರತ ಸೆಕ್ಯುಲರ್ ರಾಷ್ಟ್ರವಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಕೋಮುವಾದವನ್ನು ಪೋಷಿಸುತ್ತಿರುವುದರ ಪರಿಣಾಮ ಈ ರೀತಿಯ ಹೇಳಿಕೆಗಳು ಕೇಳಿ ಬರುತ್ತಿವೆ. ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸುವ ಕೆಲಸ ನಿರಂತರವಾಗಿ ದೇಶದಲ್ಲಿ ನಡೆದಿದೆ ಎಂದು ಆಪಾದಿಸಿದ್ದಾರೆ. 
ಸ್ವಾಮಿ ರಾಮಗಿರಿಗುರು ನಾರಾಯಣಗಿರಿ ಮಹಾರಾಜ ಮೇಲೆ ಭಾರತೀಯ ನ್ಯಾಯ ಸಂಹಿತಾ ಕಾಯ್ದೆ ೩೦೨, ೩೫೩, ೧೯೬ ಅಡಿ ಕ್ರಮಕೈಗೊಳ್ಳಬೇಕು. ಅಲ್ಲದೇ ದ್ವೇಷಭರಿತ ಭಾಷಣಗಳ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿದಂತೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಜಾಫರ್ ಬೇಪಾರಿ, ಸಿಕಂದರ್ ಅಥಣಿ, ಅಯ್ಯುಬ್ ಪುಣೇಕಾರ, ಮಲೀಕ್ ಬಾಗವಾನ, ಅಯ್ಯುಬ್ ಬಾಗವಾನ, ಎ.ಎ.ದಂಡಿಯಾ, ಮೌಲ್ವಿ ಉಮರ್ ಫಾರೂಕ್, ಅಹ್ಮದ ಮಸರೂರ, ರಫಿಕ್ ಉಮರಿ, ಜಾಕೀರ ಮೊಕಾಶಿ ಇತರರು ನೇತೃತ್ವ ವಹಿಸಿದ್ದರು.