ಶ್ರೀಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳಿಗೆ ಅಯೋಧ್ಯೆಯಿಂದ ಆಹ್ವಾನ 

ಶ್ರೀಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳಿಗೆ ಅಯೋಧ್ಯೆಯಿಂದ ಆಹ್ವಾನ 


ಬಾಗಲಕೋಟೆ:  ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸಂಸ್ಥಾನಮಠದ ಭೋವಿ ಪೀಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರಿಗೆ ಜ.೨೨ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಪತ್ರಿಕೆ ಬಂದಿದೆ. ಶ್ರೀರಾಮತೀರ್ಥ ಟ್ರಸ್ಟ್ನಿಂದ ಶ್ರೀಗಳಿಗೆ ಆಹ್ವಾನ ಪತ್ರಿಕೆ ಬಂದಿದ್ದು, ಜ.೨೦ರಂದು ಅವರು ಅಯೋಧ್ಯೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. 
 ಒಟ್ಟು ನಾಲ್ಕು ದಿನಗಳ ಕಾಲ ಅಯೋಧ್ಯೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದು, ಸ್ಥಳೀಯ ಸಂಘ ಪರಿವಾರದ ಪ್ರಮುಖರು ಸಹ ಶ್ರೀಗಳನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿ ಬಂದಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ, ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಸಮಾರಂಭಕ್ಕೂ ಶ್ರೀಗಳಿಗೆ ಆಹ್ವಾನ ಪತ್ರಿಕೆ ಬಂದಿತ್ತು. ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದ ಶ್ರೀಗಳು, ಕಾರಣಾಂತರಗಳಿAದ ರಾಮಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಭಾಗಿ ಆಗಿರಲಿಲ್ಲ. ಈ ಬಾರಿ ಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗಲೇಬೇಕೆಂದು ಪರಿವಾರದ ಪ್ರಮುಖರು ಶ್ರೀಗಳನ್ನು ಕೋರಿದ್ದು, ಜ.೨೦ರಂದು ಶ್ರೀಗಳು ಪ್ರಯಾಣ ಬೆಳೆಸಲಿದ್ದಾರೆ. 
 ಆಹ್ವಾನದ ಕುರಿತು ಮಾತನಾಡಿದ ಅವರು, ರಾಮ ಮತ್ತು ಹನುಮ ದೇಶದ ಆಧ್ಯಾತ್ಮಿಕತೆಯಲ್ಲಿ ಆದರ್ಶರು. ರಾಮನನ್ನು ಹನುಮನನ್ನಾಗಿ ಕಂಡರೆ, ಹನುಮನನ್ನು ಭಕ್ತನಾಗಿ ಕಾಣಲಾಗುತ್ತದೆ. ಭಕ್ತ ಹನುಮನೂ ದೇವರಾಗಿರುವುದನ್ನು ನೋಡಿದರೆ ಪ್ರತಿಯೊಬ್ಬರ ಭಕ್ತರೂ ಅವರಿಬ್ಬರನ್ನು ಆದರ್ಶವಾಗಿ ಕಾಣಬೇಕು. ದೇಹ ದೇವಲಾಯವಾದಾಗ, ಆತ್ಮ ಪರಮಾತ್ಮ ಆಗುತ್ತದೆ. ರಾಮ-ಹನುಮರ ಆದರ್ಶ ಮನಸ್ಸಿಲ್ಲಿದ್ದರೆ ಬದುಕು ಚೆಂದ ಎಂದು ಹೇಳಿದರು. 
 ರಾಮ ಜನಿಸಿದ ಸ್ಥಳದಲ್ಲೇ ಮಂದಿರ ನಿರ್ಮಾಣವಾಗುತ್ತಿರುವುದು, ಅದಕ್ಕೆ ನಾವುಗಳು ಸಾಕ್ಷಿಯಾಗುತ್ತಿರುವುದು ಖುಷಿಯ ವಿಚಾರ. ದೇಶದ ೧೩೫ ಕೋಟಿ ಜನರಲ್ಲಿ ೬ ಸಾವಿರ ಜನರನ್ನು ಆಹ್ವಾನಿಸಲಾಗಿದೆ. ಧಾರ್ಮಿಕವಾಗಿ ಸಮಾಜಮುಖಿಯಾಗಿರುವವರಿಗೆ ಆಹ್ವಾನ ಬಂದಿದ್ದ, ಅದರಲ್ಲೂ ನಾವೂ ಒಬ್ಬರು ಎಂಬುದು ಹೆಮ್ಮೆಯ ಸಂಗತಿ ಎಂದರು. 
 ಶ್ರೀಗಳಿಗೆ ಅಯೋಧ್ಯೆಯಿಂದ ನೇರವಾಗಿ ಪತ್ರ ಬಂದಿದ್ದು, ಮುಖಂಡರಾದ ಅಶೋಕ ಲಿಂಬಾವಳಿ, ಗಂಗಾಧರ ಮುರನಾಳ, ಜಯಂತ ಕುರಂದವಾಡ, ಕಿರಣ ಪವಾಡ ಶೆಟ್ಟರ್, ಕುಮಾರಸ್ವಾಮಿ ಹಿರೇಮಠ, ಶಿವಕುಮಾರ ಮೇಲ್ನಾಡ, ವಿಜಯ ಸುಲಾಖೆ, ಸುರೇಶ ಮಾಗಿ, ಉನ್ನತ ಬೇವಿನಮಟ್ಟಿ, ರಾಜು ನಾಯಕ ಮತ್ತಿತರರು ತೆರಳಿ ಆಹ್ವಾನ ಪತ್ರಿಕೆಯನ್ನೂ ತಲುಪಿಸಿ. ಅಭಿಯಾನದ ಮಾಹಿತಿಯನ್ನು ಶ್ರೀಗಳಿಗೆ ವಿವರಿಸಿದರು.