ಮುಸ್ಲಿಂ ಯೂನಿಟಿ ನೋಂದಣಿ ನಿರಾಕರಿಸಿದ ಅಧಿಕಾರಿ: ಅಧಿಕಾರಿಯಿಂದ ಉದ್ದೇಶಪೂರ್ವಕ ಗುರಿ ಎಂದ ಮುಖಂಡರು
ಕರ್ನಾಟಕ ಮುಸ್ಲಿಂ ಯೂನಿಟಿ ಸಂಘಟನೆ ನೋಂದಣಿಗೆ ಜಿಲ್ಲಾ ಸಂಘ ಸಂಸ್ಥೆಗಳ ನಿಬಂಧಕ ಮಲ್ಲಿಕಾರ್ಜುನ ನಿರಾಕರಿಸಿದ್ದಾರೆ. ಈಗ ಅವರ ಅಮಾನತಿಗೆ ಸಂಘಟನೆ ಆಗ್ರಹಿಸಿದೆ.
ಬಾಗಲಕೋಟೆ: ಕರ್ನಾಟಕ ಮುಸ್ಲಿಂ ಯೂನಿಟಿ ಸಂಘಟನೆಯನ್ನು ಸಂಘ-ಸಂಸ್ಥೆಗಳ ನೋಂದಣಿ ಕಾಯ್ದೆಯ ಅಡಿಯಲ್ಲಿ ನೋಂದಣಿ ನಿರಾಕರಿಸಿದ ಜಿಲ್ಲಾ ಸಂಘ ಸಂಸ್ಥೆಗಳ ನಿಬಂಧಕ ಮಲ್ಲಿಕಾರ್ಜುನ ವಿರುದ್ಧ ಹೋರಾಟ ಮಾಡುವದಾಗಿ ಕೆ.ಎಂ.ಯೂ ರಾಜ್ಯಾಧ್ಯಕ್ಷ ಜಬ್ಬಾರ ಕಲಬುರ್ಗಿ ಹೇಳಿದ್ದಾರೆ.
ಪತ್ರಿಕಾ ಹೇಳಿಕೆಯೊಂದನ್ನು ನೀಡಿ ಈ ಅಧಿಕಾರಿ ವಿಧಿಬದ್ಧವಾಗಿ ನೀಡಲಾಗಿರುವ ಅಧಿಕಾರ ದುರುಪಯೋಗ ಮಾಡಿಕೊಂಡು ಜನಾಂಗೀಯ ದ್ವೇಶ ಸಾಧಿಸಲು ತನ್ನ ಅಧಿಕಾರದ ದುರ್ಬಳಕೆ ಮಾಡಿಕೊಂಡು ದಿಕ್ಕು ತಪ್ಪಿಸುವ ಹೇಳಿಕೆ ಮೂಲಕ ನಮ್ಮ ಪ್ರಸ್ತಾವನೆ ತಿರಸ್ಕರಿಸಿರುವುದು ಈತನ ಮತಾಂಧತೆ ಮತ್ತು ಕೋಮುವಾದವನ್ನು ಪುಷ್ಠಿ ಕರಿಸುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ಮುಸ್ಲಿಂ ಯೂನಿಟಿ ಎಂಬ ಹೆಸರಿನಲ್ಲಿ ಅಂಥಹದ್ದು ಏನೀದೆ ಎಂಬುದರ ಕುರಿತು ಯಾವುದೆ ಸ್ಪಷ್ಟ ಅಭಿಪ್ರಾಯ ಈ ಅಧಿಕಾರಿ ತಿಳಿಸಿಲ್ಲ ಸಂಘ-ಸAಸ್ಥೆಗಳ ಯಾವ ಕಾಯ್ದೆಯ ಯಾವ ಕಲಂ ಅಡಿ “ಯೂನಿಟಿ” ಶಬ್ದವನ್ನು ನಿಷೇದಿಸಲಾಗಿದೆ ಎಂಬ ಸ್ಪಷ್ಟ ಅಭಿಪ್ರಾಯ ತಿಳಿಸದೆ ಸಮಯ ವ್ಯರ್ಥ ಮಾಡಲು ಹಿಂಬರಹ ನೀಡಿ ಅನ್ಯಾಯ ಮಾಡಿದ್ದಾರೆ ಎಂದು ದೂರಿದ್ದಾರೆ.
ಈಗಾಗಲೇ ಈ ಅಧಿಕಾರಿ ವಿರುದ್ಧ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ರಜೀಷ್ಠಾರ ಹಾಗೂ ಅಲ್ಪಸಂಖ್ಯಾತರ ಆಯೋಗ ಮತ್ತು ಜಿಲ್ಲಾಧಿಕಾರಿಗಳು ಬಾಗಲಕೋಟ ರವರಿಗೆ ಆಗಿರುವ ಅನ್ಯಾಯದ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಲಾಗಿದ್ದು ನ್ಯಾಯಾಲಯದ ಮೂಲಕವೂ ಕಾನೂನಾತ್ಮಕ ಹೋರಾಟ ನಡೆಸುವದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಭಾರತದ ಸಂವಿಧಾನವು ಅಲ್ಪಸಂಖ್ಯಾತರಿಗೆ ತಮ್ಮ ಜೀವನ ವಿಧಾನವನ್ನು ರಕ್ಷಿಸಲು, ಶೈಕ್ಷಣಿಕ ಧಾರ್ಮಿಕವಾಗಿ ಒಗ್ಗಟ್ಟಾಗಲು ಸಂಘ-ಸಂಸ್ಥೆಗಳನ್ನು ಹೊಂದಲು ನೀಡಿರುವ ಅವಕಾಶವನ್ನು, ವಂಚಿತಗೊಳಿಸಲು ಪ್ರಯತ್ನಪಟ್ಟಿದ್ದು ಕಾನೂನು ಬಾಹಿರವಾಗಿದೆ.
ಮುಸ್ಲಿಂ ಸಮುದಾಯವನ್ನು ನೇರವಾಗಿ ಗುರಿಯಾಗಿಸಿರುವುದು ಗಂಭೀರ ಹಾಗೂ ದ್ವೇಶದಿಂದ ಕೂಡಿದ ಕ್ರಮವಾಗಿದ್ದು ಸರ್ಕಾರ ಈ ಅಧಿಕಾರಿಯನ್ನು ತಕ್ಷಣಕ್ಕೆ ಅಮಾನತ್ತು ಮಾಡಬೇಕು ಮತ್ತು ಜಿಲ್ಲೆಯಿಂದ ಬೇರಡೆಗೆ ವರ್ಗಮಾಡಬೇಕು ಎಂದು ಆಗ್ರಹಿಸಿದ್ದು ಈ ಅಧಿಕಾರಿ ವಿರುದ್ಧ ನಿರಂತರ ರಾಜ್ಯಾಧ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.