ಮೂಲ ಕಲೆ, ಸಂಸ್ಕೃತಿ ಕಣ್ಮರೆ: ಶಾಸಕ ಮೇಟಿ ತೀವ್ರ ಕಳವಳ
ಬಾಗಲಕೋಟೆ: ಕಲೆ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಜನಪರ ಉತ್ಸವದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದು ಶಾಸಕ ಶ್ರೀ ಎಚ್. ವೈ. ಮೇಟಿ ಹೇಳಿದರು.
ತಾಲೂಕಿನ ಬೇವೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವದಲ್ಲಿ ಭಾಗಿ ಆಗಿ ಮಾತನಾಡಿದ ಅವರು, ಜನಪದ ಕಲೆಯು ಗ್ರಾಮೀಣ ಭಾಗದ ಬಡವರು, ಹಿಂದುಳಿದವರು ಮತ್ತು ಅನಕ್ಷರಸ್ಥರಲ್ಲಿ ಮಾತ್ರ ಉಳಿದಿದೆ. ಹಾಗಾಗಿ ಈ ಕಲೆಯನ್ನು
ಯುವ ಪೀಳಿಗೆಗೆ ಮುಂದುವರೆಸಿಕೊಂಡು ಹೋಗಲು ಅವರಿಗೂ ಕಲಿಸಬೇಕು. ಇಂದಿನ ಕಲೆಯಲ್ಲಿ ಯಾವುದೇ ಸಂಸ್ಕೃತಿ ಉಳಿದಿಲ್ಲ. ಹಿಂದೆ ನಮ್ಮ ಹಿರಿಯರು ನಮಗೆ ಹಲವಾರು ಜನಪದ ಹಾಡುಗಳನ್ನು ಕಲಿಸುತ್ತಿದ್ದರು. ಹಳ್ಳಿಗಳಲ್ಲಿ ನಾಟಕ, ಕೋಲಾಟ ಮತ್ತು ಭಜನೆ ಪದಗಳನ್ನು ನಾವು ಹಿಂದೆ ಕುಳಿತು ಕೇಳುತ್ತಿದ್ದೆವು. ಈಗ ಇಂಥಹ ಕಲೆಗಳು ನಶಿಸುತ್ತಿದ್ದು, ಅದನ್ನು ತಾವುಗಳು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು
ಜನಮನ ಸೆಳೆದ ಜನಪರ ಉತ್ಸವ’
ಗ್ರಾಮೀಣ ಸಂಸ್ಕೃತಿ ಸಂಪ್ರದಾಯ ಬಿಂಬಿಸುವ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಜನಪರ ಉತ್ಸವ ಜನಮನಸೂರೆಗೊಂಡಿತು. ಗಾನ ವೈವಿಧ್ಯತೆಗಳ ಗಾಯಕರ ಸಮೂಹ ಗಾಯನ ಜನಮನ ತಣಿಸಿತು. ಕಾರ್ಯಕ್ರಮದಲ್ಲಿ ಕಲಾವಿದರು ದೀಪ ನೃತ್ಯ, ತತ್ವ ಪದ, ಜಾನಪದ ಗೀತೆ, ಶಿವ ಭಜನೆ ಹಾಡು, ಸುಗಮ ಸಂಗೀತ , ಶಾಸ್ತ್ರೀಯ ಸಂಗೀತ , ಸಮೋಹ ನೃತ್ಯ , ಸಂಪ್ರದಾಯ ಪದ, ಶಹನಾಯಿ ವಾದನ, ವಚನ ಗಾಯನ, ಭಜನೆ ಪ್ರದರ್ಶನ ಮಾಡಿದರು. ಇದಕ್ಕೂ ಮುನ್ನ ಗ್ರಾಮದ ವಿವಿಧ ಬಿದಿಗಳಲ್ಲಿ ಕಲಾ ತಂಡಗಳ ಮೆರವಣಿಗೆಗೆ ಶಾಸಕ ಎಚ್. ವೈ ಮೇಟಿ, ಗ್ರಾಮದ ಮುಖಂಡರು, ಸಾರ್ವಜನಿಕರು ಜಗ್ಗಲಿಗಿ ಬಾರಿಸಿ ಚಾಲನೆ ನೀಡಿದರು. ಹಲಿಗಿವಾದನ , ತಮಟೆ, ಡೊಳ್ಳು ಕುಣಿತ, ಕಣಿವಾದನ, ಕರಡಿ ಮಜಲು ಮೆರವಣಿಗೆಯ ಮೆರಗು ಹೆಚ್ಚಿಸಿತು.ಈ ಸಂದರ್ಭದಲ್ಲಿ ಜಿ. ಜಿ. ಮಾಗನೂರು, ಎಂ. ಮ್. ವೈಜಾಪುರ. ರತನಕುಮಾರ್. ವೈಜಾಪುರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಹಾಗೂ ಇತರರಿದ್ದರು.