ಕೆರೂರದಲ್ಲಿ ಮತ್ತೆ ಶಾಂತಿ ಕದಡುವ ಯತ್ನ..!
ಹಿಂಜಾವೇ ವರಿಷ್ಠ ಜಗದೀಶ ಕಾರಂತರ ಭಾಷಣ ಬಳಸಿ ಅವಹೇಳನ ಮಾಡಿದ ಮೂವರ ಮೇಲೆ ದೂರು ದಾಖಲಾಗಿದೆ.
ಬಾಗಲಕೋಟೆ:
ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಅವರ ಭಾಷಣದ ತುಣುಕು ಬಳಸಿ ಅವಹೇಳನ ಮಾಡಿರುವ ಮೂವರ ಮೇಲೆ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ಜಗದೀಶ ಕಾರಂತರು ಆಡಿದ ಮಾತುಗಳನ್ನು ತಿರುಚಿ ಜಗತ್ತಿನಲ್ಲಿ ಇಸ್ಲಾಂ ಅತ್ಯಂತ ಬಲಶಾಲಿ ಎಂಬ ರೀತಿಯಲ್ಲಿ ಅವರ ಹೇಳಿಕೆಯನ್ನು ಬಳಸಿ ಇಸ್ಲಾಮಿಕ್ ಧ್ವಜ ಹಾರಾಟದ ವಿಡಿಯೋ ಮಾಡಿದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
ಇದನ್ನು ಗಮನಿಸಿರುವ ರಾಚಪ್ಪ ಕುಂಬಾರ ಎಂಬುವವರು ಆರೋಪಿಗಳಾದ ಅಫ್ರೀದ್ ಮೆಹಬೂಬಸಾಬ್ ಕಲಬುರಗಿ, ಶಾರುಖ್ ಮಕಾಂದಾರ, ಸಾದಿಕ್ ಕಳ್ಳಿಮನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಕೆರೂರು ಪಟ್ಟಣ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಮತ್ತೆ ಕೋಮು ಪ್ರಚೋದನೆ ನೀಡುವ ವಿಡಿಯೋ ಹರಿಬಿಡಲಾಗಿದೆ. ಇವುಗಳ ಹಿಂದೆ ಕಾಣದ ಶಕ್ತಿಗಳು ಕೆಲಸ ಮಾಡುತ್ತಿರುವ ಬಗ್ಗೆ ಹಿಂದೂಪರ ಸಂಘಟನೆಗಳ ಮುಖಂಡರು ದೂರುತ್ತಿದ್ದಾರೆ.