ಬಾಗಲಕೋಟೆ ಕ್ಷೇತ್ರದಲ್ಲಿ ಗೆಲುವು ನನ್ನದೇ: ಸಂಯುಕ್ತಾ ಪಾಟೀಲ 

ಬಾಗಲಕೋಟೆ ಕ್ಷೇತ್ರದಲ್ಲಿ ಗೆಲುವು ನನ್ನದೇ: ಸಂಯುಕ್ತಾ ಪಾಟೀಲ 
ಬಾಗಲಕೋಟೆ: 
ಕಾಂಗ್ರೆಸ್ ಹುರಿಯಾಳು ಸಂಯುಕ್ತಾ ಪಾಟೀಲ ಅವರು ಶನಿವಾರ ಶಕ್ತಿದೇವತೆ ಬಾದಾಮಿ ಶ್ರೀಬನಂಶಕರಿ ದೇವಿಗೆ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ಸಂಯುಕ್ತಾ ಅವರ ತಂದೆ ಸಚಿವ ಶಿವಾನಂದ ಪಾಟೀಲ ಕೂಡ ಚುನಾವಣಾ ಕಾರ್ಯದಲ್ಲಿ ಸಕ್ರಿಯರಾಗಿದ್ದು, ಶುಕ್ರವಾರ ಸಂಜೆ ಕೂಡಲಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. 

ವೀಣಾ ಕಾಶಪ್ಪನವರಗೆ ಟಿಕೆಟ್ ತಪ್ಪಿದ ಕಾರಣ ಜಿಲ್ಲೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಈ ಸಂಯುಕ್ತ ಪಾಟೀಲ ಜಿಲ್ಲೆಯ ಮುಖಂಡರುಗಳನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಈಗಾಗಲೇ ಹಿರಿಯ ನಾಯಕ ಎಸ್.ಆರ್.ಪಾಟೀಲ, ಬೀಳಗಿ ಶಾಸಕ ಜೆ.ಟಿ.ಪಾಟೀಲ, ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು,  ಪ್ರಬಲ ಆಕಾಂಕ್ಷಿಯಾಗಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಅವರನ್ನೂ ಭೇಟಿ ಮಾಡಿ ಚುನಾವಣಾ ಕಾರ್ಯಗಳಲ್ಲಿ ತಮ್ಮೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು. ಬಾದಾಮಿಯಲ್ಲಿ ದೇವಿ ದರ್ಶನಪಡೆದು ಹೊರಬಂದಾಗ ಅಪಾರ ಪ್ರಮಾಣದಲ್ಲಿ ಬೆಂಬಲಿಗರು ಸಂಯುಕ್ತಾ ಅವರೊಂದಿಗೆ ಇದ್ದರು. 

ಕಾಶಪ್ಪನವರ ಗಡುವು ಇಂದು ಮುಕ್ತಾಯ: ಕಳೆದ ಬಾರಿಯ ಸ್ಪರ್ಧೆಯೂ ಸೇರಿದಂತೆ ಜಿಲ್ಲೆಯಲ್ಲಿ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ವೀಣಾ ಕಾಶಪ್ಪನವರಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ತೀವ್ರವಾಗಿ ಅಸಮಾಧಾನಗೊಂಡಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಶಿವಾನಂದ ಪಾಟೀಲ ಕುಟುಂಬದ ವಿರುದ್ಧ ಪರೋಕ್ಷವಾಗಿ ಗುಡುಗಿದ್ದರು. ತಾಕತ್ತಿಲ್ಲದೇ ಟಿಕೆಟ್ ಕೇಳಿವರು ನಾವಲ್ಲ. ತಾಕತ್ತಿದ್ದರೆ ನಮ್ಮನ್ನು ಬಿಟ್ಟು ಚುನಾವಣೆ ಮಾಡಿ ನೋಡಿ ಎಂದು ಗುಟುರು ಹಾಕಿದ್ದರು. ಟಿಕೆಟ್ ಮರಳಿ ಪತ್ನಿಗೆ ನೀಡುವಂತೆ ಎರಡು ದಿನಗಳ ಕಾಲಾವಕಾಶವನ್ನು ಅವರು ಪಕ್ಷದ ನಾಯಕರಿಗೆ ನೀಡಿದ್ದು, ಅವರು ನೀಡಿದ್ದ ಗಡವು ರವಿವಾರ ಮುಕ್ತಾಯವಾಗಲಿದೆ. ಸೋಮವಾರ ಅವರು ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಬಾದಾಮಿಯಲ್ಲಿ ದೇವಿ ದರ್ಶನ ಪಡೆದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂಯುಕ್ತಾ ಅವರು ಜಿಲ್ಲೆಯಲ್ಲಿ ನನಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಜನ ತುಂಬು ಪ್ರೀತಿಯನ್ನು ನೀಡುತ್ತಿದ್ದು, ನನ್ನ ಗೆಲುವಿನ ಹಾದಿ ಸುಗಮವಿದೆ ಎನಿಸುತ್ತಿದೆ. ಜಿಲ್ಲೆಯ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆ ನಡೆಸಲಾಗುವುದು ಎಂದು ವಿವರಿಸಿದರು.