ಶ್.. ಸದ್ದು ಮಾಡಬೇಡಿ ಹುಷಾರ್...!
ಬಾಗಲಕೋಟೆ: ವಿದ್ಯಾಗಿರಿಯಲ್ಲಿರುವ ಬಸವೇಶ್ವರ ಇಂಜನಿಯರಿAಗ್ ಕಾಲೇಜು ಸರ್ಕಲ್‌ನಲ್ಲಿ ಇನ್ನು ಮುಂದೆ ಪಟಾಕಿ ಸಿಡಿಸುವಂತ್ತಿಲ್ಲ, ಧ್ವನಿವರ್ಧಕ ಹಾಕುವಂತ್ತಿಲ್ಲ...!
ಹೌದು ವಿದ್ಯಾಗಿರಿ ಕಾಲೇಜು ಸರ್ಕಲ್ ಇನ್ನು ಮುಂದೆ ಶಾಂತಿವಲಯವಾಗಿರಲಿದೆ. ಅಲ್ಲಿರುವ ಪಕ್ಷಿ ಸಂಕುಲ ರಕ್ಷಣೆಗಾಗಿ ಮದುವೆ ಸೀಸನ್‌ಗಳಲ್ಲಿ ನಿತ್ಯ ನಡೆಯುವ ಮೆರವಣಿಗೆಗಳು ಈ ಸರ್ಕಲ್‌ನಲ್ಲಿ ಡಿಜೆ ಹಚ್ಚುವುದು ಹಾಗೂ ಪಟಾಕಿ ಸಿಡುವುದನ್ನು ನಿರ್ಬಂಧಿಸಲಾಗಿದೆ. ಆ ಮೂಲಕ ವಿದ್ಯಾಗಿರಿಯ ಹಿರಿಯ ಯೋಗಪಟು ಸಂಗಣ್ಣ ಕುಪಸ್ತ್ ಅವರ ಈವರೆಗಿನ ಹೋರಾಟಕ್ಕೆ ಗೆಲುವು ಸಿಕ್ಕಿದೆ.
ವಿದ್ಯಾಗಿರಿ ಕಾಲೇಜು ವೃತ್ತವನ್ನು ಶಾಂತಿ ವಲಯವನ್ನಾಗಿಸಬೇಕು. ಅಲ್ಲಿಯ ಮರಗಳಲ್ಲಿರುವ ಸಾವಿರಾರು ಗಿಳಿಗಳ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಹಲವು ವರ್ಷಗಳಿಂದ ಜಿಲ್ಲಾಡಳಿತಕ್ಕೆ ಅವರು ಮನವಿ ಮಾಡುತ್ತಲೇ ಬಂದಿದ್ದರು. ಈಗ ಅವರ ಮನವಿಗೆ ಸ್ಪಂದನೆ ಸಿಕ್ಕಿದ್ದು, ವಿದ್ಯಾಗಿರಿ ಕಾಲೇಜು ವೃತ್ತವನ್ನು ಶಾಂತಿವಲಯವನ್ನಾಗಿಸಿ ನಗರಸಭೆ ಪೌರಾಯುಕ್ತ ರಮೇಶ ಜಾಧವ ಆದೇಶಿಸಿದ್ದಾರೆ.
ವಿದ್ಯಾಗಿರಿಯಲ್ಲಿ ಮಂಗಲ ಕಾರ್ಯಾಲಯಗಳು ಹೆಚ್ಚಾಗಿದ್ದು, ಮದುವೆ ಸೀಸನ್‌ಗಳಲ್ಲಿ ಜೋರಾದ ಡಿಜೆ ಸದ್ದು, ಪಟಾಕಿಯೊಂದಿಗೆ ಮೆರವಣಿಗೆಗಳು ನಿತ್ಯವೂ ಜರುಗುತ್ತವೆ. ಕಾಲೇಜ್ ಸರ್ಕಲ್‌ನಲ್ಲಿ ಜನರ ಗಮನಸೆಳೆಯಲು ಆಕಾಶದತ್ತ ಹಾರುವ ರಾಕೆಟ್ ಪಟಾಕಿಗಳನ್ನು ಸಿಡಿಸಲಾಗುತ್ತದೆ. ಆದರೆ ಜನರ ಸಂಭ್ರಮ ಅಲ್ಲಿರುವ ಅಪರೂಪದ ಪಕ್ಷಿ ಸಂಕುಲಕ್ಕೆ ಜೀವ ಕಂಟಕವಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಾಂತಿ ವಲಯ ಘೋಷಣೆಗೆ ಅವರು ಒತ್ತಾಯಿಸಿದ್ದರು. ಈಗ ಅದಕ್ಕೆ ಸ್ಪಂದನೆ ವ್ಯಕ್ತವಾಗಿದ್ದು, ವಿದ್ಯಾಗಿರಿ ಜನರೂ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.