ಹಾರ್ದಿಕ್ ಪಟೇಲ್ ಹೋರಾಟದಂತೆ ನಮ್ಮದೂ ಕ್ರಾಂತಿ ..!

ಹಾರ್ದಿಕ್ ಪಟೇಲ್ ಹೋರಾಟದಂತೆ ನಮ್ಮದೂ ಕ್ರಾಂತಿ ..!

ಬಾಗಲಕೋಟೆ: ಲೋಕಸಭೆ ಚುನಾವಣೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಅವರಿಗೆ ಟಿಕೆಟ್ ಕೈ ತಪ್ಪಿದರೆ ಕುರುಬ ಸಮುದಾಯವನ್ನು ಪ್ರತಿನಿಧಿಸುವ ನನಗೆ ಟಿಕೆಟ್ ಸಿಗುವ ಭರವಸೆ ಇದೆ. ಜಿಲ್ಲೆಯ ನಾಯಕರು ಸಹ ಈ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ವೀರಣ್ಣ ಹಳೇಗೌಡರ ಹೇಳಿದ್ದಾರೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಗದ್ದಿಗೌಡರ ಅವರನ್ನು ನಾಲ್ಕು ಬಾರಿಗೆ ಸಂಸದರಾಗಿ ಆಯ್ಕೆ ಮಾಡಲು ಚುನಾವಣೆಯಲ್ಲಿ ಶ್ರಮಿಸಿದ್ದೇನೆ. ಈ ಬಾರಿ ನನ್ನದೆ ಸಮುದಾಯಕ್ಕೆ ಪಕ್ಷ ಟಿಕೆಟ್ ನೀಡಲು ಬಯಸಿದರೆ ನನ್ನ ಕೊಡುಗೆಯನ್ನು ಗಮನಿಸಿ ಪಕ್ಷ ಟಿಕೆಟ್ ನೀಡಬೇಕೆಂದು ಮನವಿ ಮಾಡಿಕೊಂಡರು. 
ಜಿಲ್ಲೆಯ ನಾಯಕರಾದ ಗೋವಿಂದ ಕಾರಜೋಳ, ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ ಅವರು ಸೇರಿದಂತೆ ಹಲವರು ಗದ್ದಿಗೌಡರ ಅವರಿಗೆ ಟಿಕೆಟ್ ದೊರೆಯದಿದ್ದರೆ ನನ್ನ ಹೆಸರು ಶಿಫಾರಸ್ಸು ಮಾಡುವ ಭರವಸೆ ನೀಡಿದ್ದಾರೆ. ಈಗಲೂ ಗದ್ದಿಗೌಡರ ಅವರಿಗೆ ಟಿಕೆಟ್ ತಪ್ಪಬೇಕೆಂದು ಬಯಸುವುದಿಲ್ಲ ಆದರೆ ಹೈಕಮಾಂಡ್ ತನ್ನದೇ ಲೆಕ್ಕಾಚಾರದಲ್ಲಿ ಬದಲಾವಣೆ ಮಾಡುವುದಾದರೆ ನನ್ನ ಪರಿಗಣಿಸಬೇಕು. ಗುಜರಾತ್‌ನಲ್ಲಿ ಹಾರ್ದಿಕ್ ಪಟೇಲ್ ಅವರು ತಮ್ಮ ಸಮುದಾಯಕ್ಕೆ ಹೋರಾಟ ರೂಪಿಸಿದಂತೆ ಕರ್ನಾಟಕದಲ್ಲಿ ಕುರುಬರಿಗೆ ಎಸ್‌ಟಿ ಮೀಸಲು ಹೋರಾಟದ ಕ್ರಾಂತಿ ಮಾಡಿರುವುದಾಗಿ ಹೇಳಿದರು.