ಡಿಸಿಸಿ ಬ್ಯಾಂಕ್ ಚುನಾವಣೆ: ಏಕಾಂಗಿ ಆದ್ರಾ ಕಾಶಪ್ಪನವರ..?
*ಡಿಸಿಸಿ ಬ್ಯಾಂಕ್ ಚುನಾವಣೆ ಗೆದ್ದು ಸೋತ ವಿಜಯಾನಂದ *ಸ್ವಪಕ್ಷೀಯರಿಂದಲೇ ಅವರಿಗಾಯ್ತಾ ಹಿನ್ನಡೆ..?
ನಾಡನುಡಿ ವಿಶೇಷ
ಬಾಗಲಕೋಟೆ:
ರಾಜಕಾರಣದಲ್ಲಿ ಘರ್ಜನೆ,ವಿವಾದಗಳ ಮೂಲಕವೇ ಹೆಚ್ಚು ಸುದ್ದಿ ಆಗುವ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಏಕಾಂಗಿ ಆದ್ರಾ..? ಅವರನ್ನು ಮನವೋಲಿಸುವ ಕಾರ್ಯಕ್ಕೂ ಕನಿಷ್ಠ ಅವರ ಪಕ್ಷ ಮುಂದಾಗಲಿಲ್ಲವೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.
(ನಾಮಪತ್ರ ಸಲ್ಲಿಕೆಗೆ ಸೂಚಕರಾಗುವಂತೆ ನಿರ್ದೇಶಕರಾದ ಮುರುಗೇಶ ಕಡ್ಲಿಮಟ್ಟಿ ಹಾಗೂ ನಂದಕುಮಾರ ಪಾಟೀಲ ಅವರನ್ನು ವಿಜಯಾನಂದ ಕಾಶಪ್ಪನವರ ಕೋರುತ್ತಿರುವುದು)
ಕಳೆದ ಬಾರಿ ಒಪ್ಪಂದದಂತೆ ಎರಡೂವರೆ ವರ್ಷದ ಅವಧಿಗೆ ವಿಜಯಾನಂದ ಕಾಶಪ್ಪನವರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಬೇಕಿತ್ತು, ಅವರ ಪತ್ನಿಗೆ ಜಿಪಂ ಸ್ಥಾನದ ಅವಕಾಶ ಸಿಕ್ಕಿದರಿಂದ ಬ್ಯಾಂಕ್ ಗದ್ದುಗೆ ಮೇಲಿನ ಆಸೆಯನ್ನು ಅವರು ಕೈ ಬಿಟ್ಟಿದ್ದರು. ಆದರೆ ಹೆಚ್ಚು ತುರುಸು ಕಂಡ ಹುನಗುಂದ ಪಿಕೆಪಿಎಸ್ ನಿಂದ ಅವರು ಮರು ಆಯ್ಕೆ ಗೊಂಡ ನಂತರ ಅವರ ಅಧ್ಯಕ್ಷ ಗಾದೆಯ ಕನಸು ಚಿಗುರು ಒಡೆದಿತ್ತು. ಆ ಸ್ಥಾನಕ್ಕಾಗಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿ ಅನೇಕರಿಗೆ ದುಂಬಾಲು ಬಿದ್ದಿದ್ದರು. ಆದರೆ ಪಕ್ಷದಲ್ಲಿ ಮತ್ತೊಮ್ಮೆ ಅವಕಾಶ ವಂಚಿತರಾದ ಅವರು ಅಧ್ಯಕ್ಷ ಸ್ಥಾನ ತಮಗೆ ಬೇಕೇ,ಬೇಕೆಂದು ಪಟ್ಟು ಹಿಡಿದು ನಾಮಪತ್ರ ಸಲ್ಲಿಕೆಗೆ ಮಂಗಳವಾರ ಮುಂದಾಗಿದ್ದರು.
ಅಲ್ಲಿ ನಡೆದ ಘಟನೆಯೊಂದು ಅವರು ಏಕಾಂಗಿ ಆಗಿರೋದನ್ನು ಬಿಂಬಿಸುವಂತೆ ಇದೆ.
(ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಂತರ ತಮ್ಮ ಬೆಂಬಲಿಗರೊಂದಿಗೆ ವಿಜಯಾನಂದ ಕಾಶಪ್ಪನವರ ಚರ್ಚಿಸುತ್ತಿರುವುದು)
ಕಾಂಗ್ರೆಸ್ ನಲ್ಲಿ ಕಾಶಪ್ಪನವರ ಕುಟುಂಬ ನಾಲ್ಕಾರು ದಶಕಗಳಿಂದಲೂ ಇದ್ದು, ಪಕ್ಷದಲ್ಲಿ ತಮ್ಮದೇ ಬೆಂ ಬಲಿಗರು, ವರ್ಚಸ್ಸು ಹೊಂದಿದ್ದಾರೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವರು ಆಗಮಿಸಿದಾಗ ಯಾರೊಬ್ಬರು ಸೂಚಕರಾಗಲು ಒಪ್ಪದಿರುವುದು ಅವರು ಏಕಾಂಗಿ ಆದ್ರಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಮುರುಗೇಶ ಕಡ್ಲಿಮಟ್ಟಿ ಗೆಲುವಿನ ಹಿಂದೆ ಕಾಶಪ್ಪನವರ ಕೊಡುಗೆಯೂ ಇದೇ ಎಂಬ ಮಾತು ಕೇಳಿ ಬಂದಿತ್ತು. ಅದೇ ವಿಶ್ವಾಸದಿಂದಲೇ ಏನೋ ಕಾಶಪ್ಪನವರ ಸೂಚಕರಾಗುವಂತೆ ಮುರುಗೇಶ ಅವರನ್ನು ಕರೆದಾಗ ಅವರು ಸಹಿ ಹಾಕಲಿ ಬಾರದೆ ನಿರಾಕರಿಸಿದರು.
ಪಕ್ಷದಲ್ಲಿನ ಹಲವು ನಾಯಕ ಅವಿರೋಧ ಆಯ್ಕೆಗೆ ಶ್ರಮಿಸಿದ್ದೇನೆ ಎಂದಿದ್ದ ಕಾಶಪ್ಪನವರ ಟಿಎಪಿಸಿಎಂಸ್ ನಿರ್ದೇಶಕ ನಂದಕುಮಾರ ಪಾಟೀಲ ಅವರನ್ನೂ ಸೂಚಕರಾಗುವಂತೆ ಆಹ್ವಾನಿಸಿದ್ದಾರೆ. ಅವರೂ ಸಹಿ ಹಾಕಲು ನಿರ್ಧರಿಸಿ "ಪ್ಲೀಸ್ ಬೇಡ" ಎಂದಿದ್ದಾರೆ.
ಈ ಎಲ್ಲ ಘಟನೆಗಳು ತೀವ್ರ ಇರಿಸುಮುರಿಸು ತಂದಿದ್ದು,ಕಾಶಪ್ಪನವರ ತೀವ್ರ ಆಕ್ರೋಶಗೊಳ್ಳಲು ಕಾರಣವಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಅವರದೇ ಸಮುದಾಯದ ಅನುಕಂಪವೂ ಅವರ ಕಡೆ ವಾಲುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಇದೇ ವೇಳೆ ಜಿಲ್ಲೆಯ ನಾಯಕರ ವಿರುದ್ಧ ಸಿಡಿಮಿಡಿಗೊಂಡಿರುವ ಅವರು ಒಂದೇ ವ್ಯಕ್ತಿಗೆ, ಒಂದೇ ಸಮುದಾಯಕ್ಕೆ ಪದೇ, ಪದೆ ಅವಕಾಶ ನೀಡುವುದು ಸಾಮಾಜಿಕ ನ್ಯಾಯ ಕಾಪಾಡಿದಂತೆ ಆಗುವುದಿಲ್ಲ. ಈ ಅನ್ಯಾಯವನ್ನು ಜಿಲ್ಲೆಯಾದ್ಯಂತ ಸಂಚರಿಸಿ ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ ಎಂದು ಗುಡುಗಿದ್ದಾರೆ.