ಶಾಂತಿಯುತ ಗಣೇಶೋತ್ಸವ ಆಚರಣೆಗೆ ಡಿಸಿ ಕೆ.ಎಂ.ಜಾನಕಿ ಮನವಿ 

 ಶಾಂತಿಯುತ ಗಣೇಶೋತ್ಸವ ಆಚರಣೆಗೆ ಡಿಸಿ ಕೆ.ಎಂ.ಜಾನಕಿ ಮನವಿ 


ಬಾಗಲಕೋಟೆ:  ಜಿಲ್ಲೆಯಾದ್ಯಂತ ಶಾಂತಿ ಸೌಹಾರ್ಧತೆಯಿಂದ ಮತ್ತು ಅಷ್ಟೇ ಸಂಭ್ರಮ ಸಡಗರದಿಂದ ಗಣೇಶ ಉತ್ಸವ ಆಚರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. 


  ಜಿಲ್ಲಾ ಪಂಚಾಯತ್‌ದ ಹಳೆಯ ಸಭಾಂಗಣದಲ್ಲಿ ರವಿವಾರದಂದು ಜರುಗಿದ ಗಣೇಶೋತ್ಸವ ಶಾಂತಿ ಪಾಲನಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾರ್ವಜನಿಕ ಗಣಪತಿಗಳನ್ನು  ಇಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಹಕಾರ ನೀಡಲಿದ್ದು, ಗಜಾನನ ಪ್ರತಿಷ್ಠಾಪನಾ ಮಂಡಳಿಗಳು ಸಹ ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಸಹಕಾರ ನೀಡುವ ಮೂಲಕ ಅತ್ಯಂತ್ಯ ವಿಜ್ರಂಬಣೆಯಿAದ ಈ ವರ್ಷವೂ ಗಣೇಶೋತ್ಸವ ಆಚರಿಸಬೇಕು ಎಂದರು.

 
  ಪಿಓಪಿ ಗಣಪತಿಗಳ  ಪ್ರತಿಷ್ಠಾಪನೆಗೆ ಅವಕಾಶವಿರುವದಿಲ್ಲ. ಪರಿಸರ ಸ್ನೇಹಿ ಗಣಪತಿಗಳನ್ನೇ ಪೂಜಿಸಿ ಭಕ್ತಿಭಾವ ತೋರಿಸಿರಿ. ಗಣೇಶ ಮೂರ್ತಿ ಪ್ರತಿಷ್ಠಾಪನಾ ಮತ್ತು ವಿಸರ್ಜನೆಯ ಮೆರವಣಿಗೆಯಲ್ಲಿ  ಗಜಾನನ ಉತ್ಸವ ಮಂಡಳಿಗಳು ಸ್ವಯಂ ಪ್ರೇರಣೆಯಿಂದ ಡೊಳ್ಳು ಕುಣಿತ, ಕಂಸಾಳೆ ಕರಡಿ ಮಜಲುಗಳಿಗೆ ಆಧ್ಯತೆ ನೀಡಿದಲ್ಲಿ ಜಿಲ್ಲೆಯಲ್ಲಿರುವ ಕಲಾವಿದರಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ತಿಳಿಸಿದರು.  


  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಅಮರನಾಥ ರೆಡ್ಡಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿ ಸ್ಥಾಪನಾ ಪೂರ್ವದಲ್ಲಿ  ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ವಿದ್ಯುತ್ ಅವಗಡ ಮತ್ತು ಜೀವಹಾನಿ ಸಂಭವಿಸದಿರಲಿ ಎಂಬ ಮುಂಜಾಗೃತೆ ಹಾಗೂ ನಗರದ ಸ್ವಚ್ಚತೆ ನಿರ್ವಹಣೆಯ ಹಿತದೃಷ್ಠಿಯಿಂದ ಅನುಮತಿ ಪಡೆಯುವುದು ಅವಶ್ಯವಾಗಿರುತ್ತದೆ. ಮೈಕ್ ಗಳಿಗೂ ಅನುಮತಿ ಪಡೆಯಬೇಕಾಗಿದ್ದು ಈ ಕುರಿತು ಎಲ್ಲ ಗಣೇಶ ಮಂಡಳಿಯವರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು. 


 ಜಿಲ್ಲೆಯಲ್ಲಿ ೨೨೫೦ಕ್ಕೂ ಹೆಚ್ಚು ಗಣೇಶ ಮೂರ್ತಿ ಸ್ಥಾಪಿಸಲಾಗುತ್ತದೆ ಎಂಬ ಮಾಹಿತಿ ಇದ್ದು, ಯುವ ಸಮೂಹ ಎಚ್ಚರಿಕೆಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಗಣಪತಿ ಹಬ್ಬವನ್ನು ಆಚರಿಸಬೇಕು. ಏನಾದರೂ ಸಮಸ್ಯೆಯಾದಲ್ಲಿ ಪೊಲೀಸರ ಗಮನಕ್ಕೆ ತರಬೇಕು. ಕಾನೂನಿನ ವಿರುದ್ಧ ಹೋಗಬಾರದು. ನಗರ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮರಾಗಳಿದ್ದು, ಇವುಗಳ ಮೂಲಕ ಇಲಾಖೆ ಎಲ್ಲ ಗಮನಿಸುತ್ತದೆ. ಮೆರವಣಿಗೆ ಸಂದರ್ಭದಲ್ಲಿ ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಳ್ಳಬಾರದು. ನಿಗದಿಪಡಿಸಿದ ಅವಧಿಯೊಳಗೇ ಗಣೇಶಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜಿಸುವ ಕೆಲಸ ಮಾಡಬೇಕು. ಉಳಿದಂತೆ ಪೊಲೀಸ್ ಇಲಾಖೆ ಹಬ್ಬಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದು ಸಾರ್ವಜನಿಕರ ಸಹಕಾರ ಕೂಡ ಇಲಾಖೆಗೆ ಅತ್ಯವಶ್ಯವಾಗಿದೆ ಎಂದರು. 
  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಪರಿಸರ ಇಲಾಖೆ ಅಧಿಕಾರಿ ರಾಜಶೇಖರ ಪುರಾಣಿಕ, ತಹಶೀಲ್ದಾರ್ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ರಮೇಶ ಜಾಧವ ಹಾಗೂ ವಿವಿಧ ಗಜಾನನ ಉತ್ಸವ ಮಂಡಳಿ ಪಧಾಧಿಕಾರಿಗಳು ಇದ್ದರು.