ಯತ್ನಾಳ, ಚಕ್ರವರ್ತಿ ವರ್ಷಕ್ಕೊಮ್ಮೆಯಾದರೂ ನನ್ನ ಕ್ಷೇತ್ರಕ್ಕೆ ಬರಲಿ

ಯತ್ನಾಳ, ಚಕ್ರವರ್ತಿ ವರ್ಷಕ್ಕೊಮ್ಮೆಯಾದರೂ ನನ್ನ ಕ್ಷೇತ್ರಕ್ಕೆ ಬರಲಿ
ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ ನನ್ನನ್ನು ಬೈದಷ್ಟು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳು ಬರಲಿವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. 
ಮಂಗಳವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಬಸನಗೌಡ ಪಾಟೀಲ ಯತ್ನಾಳ, ಚಕ್ರವರ್ತಿ ಸೂಲಿಬೆಲೆ ಅಂಥವರು ವರ್ಷಕ್ಕೆ ಒಮ್ಮೆಯಾದರೂ ನನ್ನ ಕ್ಷೇತ್ರಕ್ಕೆ ಭೇಟಿ ನೀಡಿದರೆ ನಮ್ಮ ಕಾರ್ಯಕರ್ತರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾರೆ ಆಗ ನಮ್ಮ ಮತಗಳಿಕೆಯೂ ಹೆಚ್ಚಾಗುತ್ತದೆ ಎಂದು ಹೇಳಿದರು. ನಾಟಕ ಕಂಪನಿಯವ್ರು ೧೦ ರೂ. ಕೊಟ್ಟರೆ ೧೦೦ ರೂಪಾಯಿ ಕೊಟ್ಟಿದ್ದಾರೆ ಎಂದು ಹೇಳುವಂತೆ ಈ ಯತ್ನಾಳ ಹೇಳಿಕೆಯೂ ಇರುತ್ತದೆ ಎಂದು ವ್ಯಂಗ್ಯವಾಡಿದರು. 

ಒಕ್ಕಲಿಗ ಮತ ಸೆಳೆಯೋಕೆ ತಾವೇ ಸಿಎಂ ಆಗುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ ಇಂಗಿತ ವ್ಯಕ್ತಪಡಿಸಿರುವ ವಿಚಾರಕ್ಕೆ ಉತ್ತರಿಸಿದ ಅವರು,ನಮ್ಮನ್ನು ನೋಡಿ ಮತ ಹಾಕಿ ಎಂದು ಎಲ್ಲರೂ ಹೇಳ್ತಾರೆ. ನಾನು ಸಿಎಂ ಆಗುತ್ತೇನೆ ಮತ ನೀಡಿ ಎಂದಾಗ ನಮ್ಮನ್ನು ನೋಡಿ ಮತ ಬರುವ ವಿಶ್ವಾಸವಿರುತ್ತದೆ ಆದರೆ ಸಿಎಂ ಆಗೋದು, ಬಿಡೋದು ಅಂತಿಮವಾಗಿ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು. ಸಿಎಂ ವಿಚಾರ ಈಗ ಅಪ್ರಸ್ತುತ. ಒಬ್ಬರು ಈಗಾಗಲೇ ಇದ್ದಾರೆ, ಅವರೇ ಇರುತ್ತಾರೆ. ನಾವೂ ಕೂಡ ಒಳ್ಳೆ ದಿನ ಬರುತ್ತದೆ ನಾನೂ ಸಿಎಂ ಆಗುತ್ತೇನೆ ಎಂದು ಭಾವಿಸಿರುತ್ತೇನೆ. ಅದೆಲ್ಲ ಸ್ವಾಭಾವಿಕ. ಯಾವುದೇ ಬೆಳವಣಿಗಗಳು ಆಗೋದಿಲ್ಲ. ಐದು ವರ್ಷ ನಮ್ಮ ಸರ್ಕಾರವೇ ಇರುತ್ತದೆ ಎಂದರು.