ಹಣ್ಣು, ಹೂವಿನ ಕಲಾಕೃತಿಯಲ್ಲೂ ಕೋವಿಡ್ ವಾರಿಯರ್ಸ್ ಗಳಿಗೆ ಗೌರವ: ತೋಟಗಾರಿಕೆ ಮೇಳ ಚಿತ್ತಾಕರ್ಷಕ
ರೈತ ಉಪಯೋಗಕ್ಕಿಂತಲೂ ಆಕರ್ಷಣೆಗೆ ಆದ್ಯತೆ * ಹೊಸತನ ನೀಡಿದರಷ್ಟೇ ಮೇಳ ಪ್ರಯೋಜನಕಾರಿ ಎಂದ ರೈತರು
ನಾಡನುಡಿ ವಿಶೇಷ
ಬಾಗಲಕೋಟೆ ಜ.೨:
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರದಿಂದ ಆರಂಭಗೊಂಡಿರುವ ತೋಟಗಾರಿಕೆ ಮೇಳವು ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಬಣ್ಣದ, ಬಣ್ಣದ ಹೂವಿನಲ್ಲಿ ಜೀವ ಪಡೆದ ನವಿಲು, ಹಣ್ಣುಗಳ ಕಲಾಕೃತಿ ಮೂಲಕ ಕೋವಿಡ್ ವಾರಿರ‍್ಸ್ಗೆ ನಮನ.. ಜನರನ್ನು ಬೆರಗಾಗಿಸಿದ ಮತ್ಸ್ಯಲೋಕ... ಸೇನೆಗೆ ಸೇರ್ಪಡೆಗೊಂಡ ಮುಧೋಳ ಶ್ವಾನಗಳ ತಾಲೀಮು. ಹೀಗೆ ನಾನಾ ಬಗೆಯ ವಿಶೇಷತೆಗಳು ಮೇಳದಲ್ಲಿವೆ.
ಬೋನ್ಸಾಯ್ ಸೇರಿದಂತೆ ಅಲಂಕಾರಿಕ ಹೂವುಗಳು, ಕಲಾಕೃತಿಗಳು ಮೇಳದಲ್ಲಿ ಕಳೆದ ಬಾರಿಯಂತೆಯೇ ಕಂಡು ಬಂದಿವೆ. ಆದರೆ ಕೃಷಿಯನ್ನು ಅವಲಂಭಿಸುವ ರೈತ ಇವುಗಳ ಮೂಲಕ ಆದಾಯ ನೆಚ್ಚಿಕೊಳ್ಳಲು ಸಾಧ್ಯವಿಲ್ಲ ಹೀಗಾಗಿ ತರಕಾರಿ, ಹಣ್ಣುಗಳ ಬೀಜ ಮಾರಾಟ ಮತ್ತು ಪ್ರದರ್ಶನಕ್ಕೆ ಆದ್ಯತೆ ಸಿಗಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಪ್ರತಿ ಬಾರಿ ಮೇಳ ಹಮ್ಮಿಕೊಂಡಾಗಲೂ ಹೊಸ ಅವಿಷ್ಕಾರಗಳನ್ನು ಪರಿಚಯಿಸುವುದು ಕಷ್ಟವಾಗಬಹುದು. ಆದರೆ ತೋವಿವಿಯ ಸಂಶೋಧನೆ ಮೂಲಕ ಬೆಳಕು ಕಂಡ ರೈತರು, ಕಡಿಮೆ ಸ್ಥಳದಲ್ಲಿ ಹೆಚ್ಚು ಉತ್ಪಾದನೆ ಕಾಣುವ ಬೆಳೆಗಾರರು, ಅವರ ಉತ್ಪಾದನೆಗಳನ್ನು ಪರಿಚಯಿಸುವ ಕಾರ್ಯಕ್ಕಾದರೂ ವಿವಿ ಮುಂದಾಗಬೇಕೆಂಬ ಸಲಹೆ ವ್ಯಕ್ತವಾಗಿದೆ. ಕಳೆದ ಬಾರಿ ಪ್ರವಾಹದ ಹಿನ್ನೆಲೆಯಲ್ಲಿ ಸರಳವಾಗಿ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಆ ಮೇಳದಲ್ಲಿ ಇದ್ದ ವಸ್ತುಗಳೇ ಈ ಬಾರಿಯೂ ಇದ್ದು, ಕನಿಷ್ಠ ಪಕ್ಷ ವಿದ್ಯಾರ್ಥಿಗಳನ್ನು ಬಳಿಸಿಕೊಂಡು ಹೊಸತನ್ನು ನೀಡುವ ಪ್ರಯತ್ನವೂ ಆಗಿಲ್ಲ ಎಂಬ ವಿಚಾರವನ್ನು ಮೇಳದಲ್ಲಿ ಭಾಗವಹಿಸಿದ್ದ ಹಲವು ರೈತರು ಪತ್ರಿಕೆಯೊಂದಿಗೆ ಹಂಚಿಕೊಂಡರು.
ಬಿದಿರಿನ ಕಲಾಕೃತಿ, ಅಲಂಕಾರಿಕ ಹೂವುಗಳು, ಹಣ್ಣಿನಲ್ಲಿ ಕಲಾಕೃತಿಗಳು ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡು ಆಕರ್ಷಿಸಿದವು. ಇವುಗಳು ಜನರ ಗಮನಸೆಳೆಯಲು ಉತ್ತಮ ಪ್ರಯತ್ನ ಆದರೆ ಇವುಗಳು ರೈತರಿಗೆ ಹೇಗೆ ಸಾಕಾರಿಯಾಗುತ್ತವೆ ಎಂದು ಬಸವನಬಾಗೇವಾಡಿಯ ರೈತರ ಚನ್ನಬಸಪ್ಪ ಸಿಂಧೂರ ಪ್ರಶ್ನಿಸಿದರು.
ತೋಟಗಾರಿಕೆ ಮೇಳದ ಭಾಗವಾಗಿ ಅಕ್ವೇರಿಯಂಗಳ ಪ್ರದರ್ಶನವೂ ನಡೆಯುತ್ತಿದೆ. ಗಾಜಿನ ಭರಣಿಯಲ್ಲಿ ನಾನಾ ಬಗೆಯ ಮೀನುಗಳನ್ನು ಪ್ರದರ್ಶಿಸಲಾಗುತ್ತಿದ್ದು, ಗಮನಸೆಳೆಯುತ್ತಿವೆ. ರೆಡ್ ಆಸ್ಕರ್, ಟೈಗರ್ ಆಸ್ಕರ್. ಟೈಗರ್ ಬಾರ್, ಗೋಲ್ಡ್, ಬ್ಕ್ಯಾಕ್‌ಮೌಲಿ, ಸಿಲ್ವರ್ ಮೌಲ್ವಿ, ಗಫ್ಟಿ, ಶಾರ್ಕ್, ರೆಡ್‌ಪ್ಯಾರೆಟ್, ಕಿಸ್ಸಿಂಗ್ ಗೌರಮಿ, ಕ್ಯಾಟ್‌ಫಿಶ್ ಸೇರಿ ಹಲವು ಬಗೆಯ ಮೀನುಗಳು ಪ್ರದರ್ಶನಕ್ಕೆ ಲಭ್ಯವಿದೆ. ಮೀನು ಸಾಕಾಣಿಕೆಯ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರದರ್ಶನವೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇನ್ನು ಮುಧೋಳ ಶ್ವಾನ ಅಭಿವೃದ್ಧಿ ಕೇಂದ್ರದಿಂದ ಪಾಶ್ಮಿ ತಳಿಯ ೪ ವರ್ಷದ ಗಂಗಾ, ೧೧ ವರ್ಷದ ರ‍್ಯಾಕ್ಸಿ, ೧ ವರ್ಷದ ಅಲೆಕ್ಸಾ, ೩ ವರ್ಷದ ಜುಬೇದಾ ನಾಯಿಗಳನ್ನು ಪ್ರದರ್ಶಿಸಲಾಗುತ್ತಿದೆ.