ಜಗನಾಥರ‌ ಭಾಷಣ, ಬದರಿನಾಥರ‌ ನಾಗರಿಕ.. ವೃತ್ತಿ ಬದುಕಿಗೆ ದಾರಿ ಮಾಡಿದ ಟಿಎಸ್ಪಿ..!

ಪತ್ರಿಕೋದ್ಯಮದಲ್ಲಿ ಸುದೀರ್ಘ ನಲವತ್ತು ವರ್ಷಗಳ‌ ಅನುಭವ ಹೊಂದಿರುವ ಪತ್ರಿಕೆ‌‌ ಸಂಪಾದಕ ರಾಮ ಮನಗೂಳಿ‌ ಅವರು ವೃತ್ತಿ ಆರಂಭದ ದಿನಗಳನ್ನು‌ ಮೆಲಕು ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಾಜಕಾರಣ, ನಾಗರಿಕ ಪತ್ರಿಕೆ‌ ಆರಂಭದ ಹಿಂದಿನ‌‌ ಕಥೆಯನ್ನು ಇಲ್ಲಿ‌‌ ವಿವರಿಸಿದ್ದಾರೆ ಓದಿ.

ಜಗನಾಥರ‌ ಭಾಷಣ, ಬದರಿನಾಥರ‌ ನಾಗರಿಕ.. ವೃತ್ತಿ ಬದುಕಿಗೆ ದಾರಿ ಮಾಡಿದ ಟಿಎಸ್ಪಿ..!

ನಾಗರಿಕ,ಬಾಗಲಕೋಟೆ ಮುದ್ರಣ ಆರಂಭಿಸಿದ್ದು....

೧೯೭೫ ರ ತುರ್ತುಸ್ಥಿತಿ, ಅದರ ಮುಕ್ತಿ ೧೯೭೮ ರ ಲೋಕಸಭೆ ಚುನಾವಣೆ,ನಂತರ ನಡೆದ ವಿಧಾನಸಭೆ ಚುನಾವಣೆಗೆ ನಾನು ಮತದಾರನೂ ಅಲ್ಲ,ವರದಿಗಾರನೂ ಅಲ್ಲ ನಾನೊಬ್ಬ ಮೂಕ ಪ್ರೇಕ್ಷಕ ರಾತ್ರಿ ಒಂದು ಗಂಟೆ ವರೆಗೆ ಕಾಯ್ದು ಸಿ.ಎಂ.ಇಬ್ರಾಹಿಂ, ಜಗನ್ನಾಥ ರಾವ ಜೋಶಿ,ನಿಜಲಿಂಗಪ್ಪ, ಆರೀಫ  ಬೇಗ ಅವರ ಭಾಷಣ ಕೇಳಿ ಕಾಂಗ್ರೆಸ್ ವಿರೋಧಿ ನಿಲುವು ತುಂಬಿಕೊಂಡವನು ಈ ಭಾಷಣಗಳು ನನ್ನಲ್ಲಿ ರಾಷ್ಟ್ರೀಯ ವಿಚಾರ ಧಾರೆ,ತಾತ್ವಿಕ ನಿಲುವುಗಳು ಬೆಳೆಯಲು ಕಾರಣವಾದವು ಅದೆಲ್ಲ ಮುಂದೆ ಬರುತ್ತೆ,ಕೆಲವು  ವ್ಯಕ್ತಿಗಳ ಬಗ್ಗೆ ಆಗಾಗ್ಗೆ ಪ್ರಸ್ತಾಪಿಸುತ್ತೆನೆ ಅವೆಲ್ಲವೂ ರೋಚಕ,ರೋಮಾಂಚನಕಾರಿ,ಕೆಲವೊಮ್ಮೆ ವಿಷಾದ,ಇನ್ನೂ ಕೆಲವೊಮ್ಮೆ ಸಂತಸದ ಸಂದರ್ಭವಾಗಲಿವೆ.ಆದರೆ ೧೯೭೮ ಡಿಸೆಂಬರ ೨೦ ರಿಂದ ೨೮ ರ ಬೆಳವಣಿಗೆಗಳನ್ನು ಕಲ್ಪಿಸಿಕೊಂಡಾಗ ಅದು ರೋಮಾಂಚನ ಮೂಡಿಸಿತು ಅದನ್ನು ನೆನಪಿಸಿಕೊಂಡವರಿಗೂ ಹಾಗೆ ಆಗುತ್ತದೆ ಅದು ಮುಂದೆ ನೋಡೋಣ.

(ಜಗನ್ನಾಥರಾಯರ ಭಾಷಣದ ಸಂಗ್ರಹ ಚಿತ್ರ ಕೃಪೆ:ಇಂಟರ್ ನೆಟ್)

ನಾನು ಹುಟ್ಟಿದ್ದು ೧೯೬೨ ಎಪ್ರಿಲ್ ೨೮ ಆದರೆ ಶಾಲಾ ದಾಖಲೆ ಪ್ರಕಾರ ಮೇ ೧೯೬೧ ಬಾಗಲಕೋಟೆಯಲ್ಲಿ ಬಾಲ್ಯದ ಬದುಕು ಅಕ್ಕನ ಬಳಗದಲ್ಲಿ ಆರಂಭವಾಗಿ ವಿಜಯಪೂರಕ್ಕೆ ಸ್ಥಳಾಂತರ ನಮ್ಮ ಅಜ್ಜ ಭೀಮರಾವ ಕುರಂದವಾಡ ( ನಮ್ಮ ತಂದೆ ರಾಮಾಚಾರ್ಯ ಮನಗೂಳಿ ಅವರ ಮನೆಗೆ ದತ್ತು ಬಂದವರು) ಅವರ ಆರೈಕೆ ಗಾಗಿ ನಾನು,ಹಿರಿಯ ಅಣ್ಣ ಶ್ರೀನಿವಾಸ,ರಾಘವೇಂದ್ರ, ತಾಯಿಯೊಂದಿಗೆ ವಿಜಯಪೂರಕ್ಕೆ ಹೋದರೆ ಅಕ್ಕ ಬಾಗಲಕೋಟೆಯಲ್ಲಿ ಅಜ್ಜಿ,ಚಿಕ್ಕಪ್ಪ ವೈ.ಎಸ್.ಕಲಕೇರಿ ಅವರ ಆರೈಕೆ ಯಲ್ಲಿ ಬೆಳೆದಳು.ವಿಜಯಪೂರದ ಕೆ.ಬಿ.ಎಸ್.ನಂಬರ ೫ ರಲ್ಲಿ ಪ್ರಾಥಮಿಕ ಶಿಕ್ಷಣ ಈ ಶಾಲೆಗೆ ಬಸನಗೌಡ ಪಾಟೀಲ,ಎಮ್.ಬಿ.ಪಾಟೀಲ,ಶಿವಾನಂದ ಪಾಟೀಲ ವಿದ್ಯಾರ್ಥಿಗಳು ಎಂಬುದು ಈಗಷ್ಟೇ ಗೊತ್ತು. ನಾನು ವಿಜಯಪೂರದಲ್ಲಿದ್ದಾಗ ಶಾಂತೂ ಗುರಡ್ಡಿ,ಜಗದೀಶ್ ಯಳಮೇಲಿ ಅವರೆಲ್ಲ ಯುವ ಮುಖಂಡರು ಆಗ ಶಿಕ್ಷಣ ಸಚಿವ ಬದರಿನಾರಾಯಣ ವಿರುದ್ದ ಹೋರಾಟ ನಡೆದ ನೆನಪು.

   (ಬಾಗಲಕೋಟೆಯ ಶಂಕ್ರಪ್ಪ ಸಕ್ರಿ ಹೈಸ್ಕೂಲ್)

೧೪-೬-೧೯೭೨ ರಲ್ಲಿ ೫ನೇಯ ತರಗತಿ ಮುಗಿಸಿ ವಿಜಯಪುರದಿಂದ ಬಾಗಲಕೋಟೆಗೆ ಆಗಮನ ಸಕ್ರಿ ಹೈಸ್ಕೂಲನಲ್ಲಿ ೬ ಹಾಗು ೭ ನೇಯ ತರಗತಿ ಕಲತೆ ಮುಲಾಜಿಲ್ಲದೆ ಹೇಳುತ್ತೆನೆ ನಾನು ಅನುತ್ತೀರ್ಣನಾಗಿ ಆ  ಶಾಲೆ ತೊರೆದು ವಲ್ಲಭಭಾಯಿ ಚೌಕಿಯಲ್ಲಿರುವ ಪುಟಾಣಿ ಶಾಲೆಗೆ ಬಂದೆ ಅಲ್ಲಿ ಮಹೇಶ ಅಥಣಿ,ನಿಂಗಣ್ಣ ಓಬಳೆಪ್ಪನವರ ಸಂಗಾತಿಗಳಾದರು,ಆಗ ನನಗೆ ಕಲಿಸಿ ಮಾರ್ಗದರ್ಶನ ಮಾಡಿದ ಎ.ಎಸ್.ಹಿರೇಮಠ ಅವರು ಈಗಲೂ ಎದುರಾದಾಗ ನನಗೆ ಪೂಜ್ಯತಾ ಭಾವ ಬರುತ್ತದೆ.
೮-೬-೧೯೭೫ ರಲ್ಲಿ ಎಂಟನೇಯ ತರಗತಿಗೆ ಪುನಃ ಸಕ್ರಿ ಹೈಸ್ಕೂಲ್ ಪ್ರವೇಶ ಪಡೆದೆ,ಈ ಅವಧಿಯಲ್ಲಿ ಡಾ.ನಾ.ಸು.ಹರ್ಡೆಕರ,ಮಹಾರಾಜ್ ಜಯಚಾಮರಾಜೇಂದ್ರ ಒಡೆಯರ  ನಿಧನ ಹೊಂದಿದರು,ನಾವು ವಿಜಯಪುರದಲ್ಲಿದ್ದಾಗ ಅಂದು ತುಳಸಿ ಲಗ್ನ ಬಹುಶಃ ೧೯೭೧ ಇರಬಹುದು ರಾತ್ರಿ ಏಕಾಏಕಿ ನಮ್ಮ ಮನೆಗಳಿದ್ದ ವಠಾರದ ಮೇಲೆ ಕಲ್ಲು ಬಿದ್ದವು ಏನೊ ಅಪಶಕುನ ಎನಿಸಿತು ಬೆಳಿಗ್ಗೆ ಹೊತ್ತಿಗೆ ಜಮಖಂಡಿಯಲ್ಲಿದ್ದ ನಮ್ಮ ಕಾಕು ಉಷಾತಾಯಿ ನಿಧನಹೊಂದಿದ್ದರು ಅವರು ಜಯಂತನ ತಾಯಿ ,ಉಷಾಕಾಕು ನಮ್ಮೆಲ್ಲರ ಮೇಲೆ ಅತೀವ ಪ್ರೀತಿ, ಅವರ ಟೈಪಿಂಗ  ಶೈಲಿ ದೋಷರಹಿತವಾಗಿತ್ತು ಅವರ ನಿಧನ ತುಂಬಲಾರದ ಹಾನಿ. ಹಸುಗೂಸು ಜಯಂತ ನಮ್ಮ ಮನೆ ಮಡಿಲು ಸೇರಿದ ನಮ್ಮ ಅಜ್ಜಿ ಅವನ ಆರೈಕೆ ಗೆ ನಿಂತಳು ನಮ್ಮ ಅಕ್ಕ ಸುನಂದಗೆ ಅವನೆಂದರೆ ಪಂಚಪ್ರಾಣ ಈಗಲೂ ಸಹ.ಈ ದುರಂತ ಇಷ್ಟಕ್ಕೆ ನಿಲ್ಲಲಿಲ್ಲ ಮುಂದೆ ೧೫ ಅಕ್ಟೋಬರ್ ೧೯೭೬ ನಮ್ಮ ತಾಯಿ ವಿಜಯನಿಗೆ ಜನ್ಮ ಕೊಟ್ಟು ಅಸುನೀಗಿದಳು ತಾಯಿಯ ಮಡಿಲಲ್ಲಿ ಸದಾ ಬದಕು ಕಂಡಿದ್ದ ನಾನು ಅಕ್ಷರಶಃ ಬೀದಿ ಪಾಲಾಗಿದ್ದೆ ಅಂದು ನನ್ನಣ್ಣ ನನ್ನನ್ನು ತಬ್ಬಿಕೊಂಡು ಅತ್ತಿದ್ದ ಅಂದನಿಂದ ಈಗಲೂ ಅವನೆ  ನನಗೆ ತಂದೆ ತಾಯಿ ಎಲ್ಲ. ಮುಂದೆ ಇನ್ನೊಬ್ಬ ಕಾಕು ನಿಧನಹೊಂದಿದರು ನಾವು ನಾಲ್ವರು.ಜಯಂತ,ನಮ್ಮ ಕಾಕಾ ಅಂದರೆ ನಮ್ಮ ಅಪ್ಪನ ಮೌಶಿ ಮಗ ಯಲಗೂರ ಕಾಕಾನ ಮೂವರು ಮಕ್ಕಳು ಪುಷ್ಷಾ,ಲತಾ,ಸುಧೀರ ಎಲ್ಲರೂ ಒಂದಾಗಿ ಬದುಕಿದೆವು ಸುನಂದಾ,ಪುಷ್ಷ,ಲತಾ  ಇವರೆ ನಮ್ಮ ಆರೈಕೆ ಮಾಡಿದರು ಒಬ್ಬೊಬ್ಬರೆ ಮದುವೆಯಾಗಿ ಹೋದರು,ಹಾಗೆ ಸೊಸೆಯಂದಿರು ಬಂದರು.

   ನಮ್ಮ ತಮ್ಮ ವಿಜಯ ವಿಜಯಪುರದ ಸೋದರತ್ತೆ ಸುಬ್ಬಾ ಅತ್ತ್ಯಾ ಅವರಿಗೆ  ಪ್ರೀತಿಯ ಮಗನಾದ ನಮ್ಮ ಅಕ್ಕ ಅದೆ ಮನೆ ಸೊಸೆಯಾದಳು. ಅವಳು ಮದುವೆಯಾಗಿ ಹೋದಾಗ ನಾನು ಮತ್ತೊಮ್ಮೆ ಅನಾಥನಾಗಿದ್ದೆ. ಆ ಮನೆಯಲ್ಲಿ ನಮ್ಮ ಭಾವ ರಮೇಶ ಮಾಮಾ ಆತನ ಸಹೋದರರು ಅರವಿಂದ,ಆನಂದ,ಅವರ ಸಹೋದರಿಯರು ಪುಟ್ಟಕ್ಕ,ವೀಣಾ,ವಿದ್ಯಾ ಅವರ ತಂದೆ ಬಿ.ಎನ್. ಮುತಾಲಿಕದೇಸಾಯಿ,ನಮ್ಮಪ್ಪನ ಇನ್ನೊಬ್ಬ ಸಹೋದರಿ ವತ್ಸಲಾ ಅತ್ತ್ಯಾ ಅವರ ಯಜಮಾನರಾದ ಎಸ್.ಪಿ.ಮನಗೂಳಿ ಅವರ ಕಾಳಜಿಗೆ ಬೆಲೆ ಕಟ್ಟಲಾಗದು.

     ಇರಲಿ ನಮ್ಮತಾಯಿ ಸತ್ತ ಮೇಲೆ  ಬಾಗಲಕೋಟೆ ನಮ್ಮ ಬದಕು ಯಾತನೆ ಯಾರಿಗೂ ಬರಬಾರದು ಆದರೆ ನನ್ನ ಮನಸ್ಸು ಮಾತ್ರ ಪತ್ರಿಕೆ ಓದುವದು,ಆಕಾಶವಾಣಿ ವಾರ್ತೆ ಕೇಳುವದು,ಚರ್ಚೆಮಾಡುವದರ ಬಗ್ಗೆ ಇರುತಿತ್ತು ೮-೬-೧೯೭೫ ರಲ್ಲಿ ಎಸ್.ಎಸ್.ಎಲ್.ಸಿ ಪಾಸಾದೆ ಈ ಶಾಲಾ ಅವಧಿ ಸಕ್ರಿ ಹೈಸ್ಕೂಲ್ ಗ್ಯಾದರಿಂಗ ಅಂದರೆ ಭಾರಿ ಫೇಮಸ್ ಹೀಗೆ ಒಂದು ಗ್ಯಾದರಿಂಗನಲ್ಲಿ  ರಾತ್ರಿ ಹೊತ್ತು ವಲ್ಲಭಭಾಯಿ ಚೌಕಿ ಬಳಿಯ ಗಣ್ಯರ ಕುಟುಂಬದ ಹತ್ತು ವರ್ಷದ ಬಾಲಿಕೆಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಂದು ಹಾಕಿದ ಘಟನೆ  ಇಂದಿಗೂ ಮರೆಯಲಾಗುತ್ತಿಲ್ಲ.
     ೧೯೭೮/೭೯,೭೯/ ೮೦ ರಲ್ಲಿ ಸಕ್ರಿ ಪಿ.ಯು.ಕಾಲೇಜನಲ್ಲಿ ವಾಣಿಜ್ಯ ಪಿ.ಯು.ಮುಗಿಸಿದೆ ನೆನಪಿರಲಿ ಪಿ.ಯು.ಸಿ.ಪ್ರಥಮ ವರ್ಷ ಓದುತ್ತಿರುವಾಗಲೆ ನಾನು ನಾಗರಿಕ ಸೇರಿದ್ದು.

     ಗದುಗಿನ ದಿ.ಹಣಮಂತಾಚಾರ್ಯ ಹೊಂಬಾಳಿ ಅವರು ಆರಂಭಿಸಿದ ನಾಗರಿಕ ಪತ್ರಿಕೆಗೆ ಬದರೀನಾಥ ಹೊಂಬಾಳಿ ಅವರು ಸಂಪಾದಕರು ಈ ಪತ್ರಿಕೆ ಜಾಹಿರಾತು, ಬ್ಲಾಕ ಮೇಲ್ ಮಾಡಲು ಹುಟ್ಟಿಕೊಂಡದ್ದಲ್ಲ. ಅದು ಗದುಗಿನ ಸಾತ್ವಿಕ,ತಾತ್ವಿಕ ರಾಜ ಕಾರಣಕ್ಕೆ ಹುಟ್ಟಿಕೊಂಡಿದ್ದು ಅದಕ್ಕೆ ಅದರದೆ ಆದ ಕಾರಣ ಇತ್ತು ಕೆ.ಎಚ್.ಪಾಟೀಲರು ಈ ಪತ್ರಿಕೆ ಅಭಿಮಾನಿ ಪೋಷಕರು ರಾಮಕ್ರಷ್ಣ ಜಮಾದಾರ,ಜಗನ್ನಾಥ ಮಾಸ್ತರ,ಡಿ.ಕೆ  ಜಮಾದಾರ ಮುಂದೆ ಅವರ ಸೋದರಳಿಯ ಜೊತೆಗೆ ಪ್ರಸಾದ ಬಸರೂರ ಇನ್ನೂ ಕೆಲವರ ಅದರ ಆಸ್ತಿ .ನಾಗರಿಕಕ್ಕೆ ಬಾಗಲಕೋಟೆ ಪ್ರವೇಶ ಕನಸು ಮನಸ್ಸಿನಲ್ಲಿರಲಿಲ್ಲ ಹಾವೇರಿ ಮುದ್ರಣ ಆರಂಭವಾಗಿತ್ತು ೧೯೭೮ ರ ಹಾವೇರಿ ಶಾಸಕರು ಈ ನಗರಕ್ಕೆ ಇದು  ಬೇಡ ಎಂದು ಅಡ್ಡಿಮಾಡಿದಾಗ ನಾಗರಿಕ ಬಂದದ್ದು ಬಾಗಲಕೋಟೆಗೆ .


     ನಾಗರಿಕ ಪತ್ರಿಕೆಯ ಮೊದಲ ಮುಖ್ಯಸ್ಥರು ವಸಂತ ರಾಜಪುರೋಹಿತರು ಅವರು ಈಗ ಎಚ್.ಕೆ ಪಾಟೀಲರ ಆಪ್ತ ಸಹಾಯಕರು  ಇಲ್ಲಿ ಏಕೊ ಮನಸ್ಸು ಒಗ್ಗಲಿಲ್ಲ ಗದಗಕ್ಕೆ ಹೋಗಿ ಹೊಂಬಾಳಿ ಅವರು ಆರಂಭಿಸಿದ ಅರ್ಚನಾ ಝರಾಕ್ಸ ಸಾರಥಿಯಾದರು ಮುಂದೆ ಎಚ್.ಕೆ.ಪಾಟೀಲ ಬಳಗ ಸೇರಿದರು.
  ನಾಗರಿಕ ಮೊದಲು ಬಾಗಲಕೋಟೆ ವಿದ್ಯಾರಣ್ಯ ಮುದ್ರಣಾಲಯದಲ್ಲಿ ಆರಂಭವಾಯಿತು ಏನೊ ಕಾರಣಕ್ಕೆ ಸ್ವಲ್ಪೆ ದಿನದಲ್ಲಿ ಬಾಬುರಾವ ಕೆರೂರ ಅವರ ಚಂದ್ರಿಕಾ ಮುದ್ರಣಾಲಯ ಪ್ರವೇಶಿತು,ಬಾಬುರಾವ ಸಾಹುಕಾರ   ಹೆಸರಿಗೆ ತಕ್ಕಂತೆ ಮನಸ್ಸಿನಿಂದಲೂ ಸಾಹುಕಾರರು ಇಲ್ಲಿ ಸಂಪಾ್ಕರಾಗಿ ಬಂದವರು ಟಿ.ಎಸ್.ಪಾಟೀಲರು ಇವರು ಕುರ್ತಕೋಟಿ ಗೌಡರು,ಕೆ.ಎಚ್.ಪಾಟೀಲ, ಎಚ್.ಕೆ ಪಾಟೀಲ,ಡಿ.ಆರ್.ಪಾಟೀಲ ,ಮೂಲಿಮನಿ ಮಾರ್ತಂಡಪ್ಪನವರಿಗೆ ಆಪ್ತರು,ವಿಶಾಲ ಕರ್ನಾಟಕದಿಂದ ನಾಗರಿಕ ಬಾಗಲಕೋಟೆ ಸಂಪಾದಕರು,ಅತ್ಯಂತ ತೂಕದ ಮನುಷ್ಯ,ನೇರ ಮಾತು,ಅಪ್ಪಟ ಬರಹಗಾರ ಯಾವ ಒತ್ತಡಕ್ಕೂ ಬಗ್ಗದ ಮನುಷ್ಯ ಅವರ ಕೈಯಲ್ಲಿ ತರಬೇತಿ ಪಡೆದು ಅನುಭವ ಪಡೆದಿರುವದು ನನ್ನ ಭಾಗ್ಯ.


    ದಿ.ಬದರಿನಾಥ ಹೊಂಬಾಳಿ ಅವರ ಸಹೋದರಿಯ ಗಂಡ ಅನಂತರಾವ ದೇಶಪಾಂಡೆ ಚಿಮ್ಮಲಗಿಯಿಂದ ನನಗೆ ಆಪ್ತರು ಇವರ ಹಿರಿಯ ಸಹೋದರ ನಾರಾಯಣರಾಯರು ಎಂದರೆ ಹಿರಿಯರಾದ ಗೋಪಾಲ ಆಲೂರ ಅವರ ಪತ್ನಿ ,ಸುಧೀಂದ್ರ ಚಿಮ್ಮಲಗಿ ಅವರ ಪತ್ನಿ ವೀಣಾ,ಡಾ ಉಮ್ಮರ್ಜಿ ಅವರ ಪತ್ನಿ ಇವರ ಪುತ್ರಿಯರು ಇವರ ಏಕೈಕ ಸಹೋದರ ಅರವಿಂದ ಸ್ನೇಹ ಜೀವಿ ಅವರು ನದಿಯಲ್ಲಿ ಮುಳುಗಿ ಆಕಸ್ಮಿಕವಾಗಿ ನಿಧನ ಹೊಂದಿದರ ಸಂಬಂಧಗಳನ್ನು ನೆನಪಿಸಲು ಇದೆಲ್ಲ ಪ್ರಸ್ತಾವನೆ ಅಗತ್ಯ ಇಂತಹ ಸಂಬಂಧಗಳ ಹಿನ್ನಲೆ ನಾನು ನಾಗರಿಕ ಪತ್ರಿಕೆಯನ್ನು  ಪ್ರವೇಶಸಿದ್ದೆ. ೧೯೭೮ ಡಿಸೆಂಬರ ೨೮ ರಂದು ವೃತ್ತಿ ಆರಂಭಿಸಿದಾಗ ಏನೆಲ್ಲ ನಡೆದಿತ್ತು ಎಂಬುದನ್ನು ಮುಂದೆ ಹೇಳುವೆ.
     ಇಂದಿನ ವಿವರಣೆ ಪೂರ್ಣ ವೈಯುಕ್ತಿಕ ಆಗಿದೆ ಎಂಬುದು  ನನ್ಮ ಭಾವನೆ ಅಸಂಬದ್ಧ, ಅಸಮಂಜಸ ಎನಿಸಿದರೂ  ಸಹಿಸಿಕೊಳ್ಳಿ ಮುಂದೆ ಇದೆಲ್ಲ ಪುನರಾವರ್ತನೆ ಆಗುವದಿಲ್ಲ ಎಂಬುದು ನನ್ನ ವಾಗ್ದಾನ.

ಮುಂದವರಿಯಲಿದೆ 

ಧನ್ಯವಾದ

                          
                   ರಾಮ‌‌ ಮನಗೂಳಿ