ಯುಕೆಪಿಗೆ ಕಾಯಕಲ್ಪ ಸಿಗಲಿ.....

ಯುಕೆಪಿಗೆ ಕಾಯಕಲ್ಪ ಸಿಗಲಿ.....
ಕೃಷ್ಣಾ ಮೇಲ್ದಂಡೆ ಯೋಜನೆ ಉತ್ತರ ಕರ್ನಾಟಕದ ಬರ ನೀಗಿಸುವ ಮಹತ್ವಾಕಾಂಕ್ಷೆ ಯೋಜನೆ, ಸರಕಾರಗಳ ಇಚ್ಛಾಶಕ್ತಿ ಕೊರತೆ, ರಾಜ್ಯವ್ಯಾಪಿ ಧ್ವನಿಯಾಗದ ಕೃಷ್ಣೆಯ ಕೂಗು, ಕಾನೂನು ತೊಡಕುಗಳಿಂದಾಗಿ ನಿರ್ಧಿಷ್ಟ ರೂಪ ಪಡೆಯಲಾರದೇ ಟೈಟಾನಿಕ ಹಡಗಿನಂತೆ ಅರ್ಧಕ್ಕೆ ನಿಂತಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಆಲಮಟ್ಟಿ ಜಲಾಶಯ ೫೨೪.೨೫೬ ಮೀ.ಗೆ ಎತ್ತರಕ್ಕೆ ನಿರ್ಮಾಣಗೊಂಡು ರಾಜ್ಯದ ಪಾಲಿನ ನೀರಿನ ಸಂಗ್ರಹವಾಗುತ್ತಿತ್ತು. ಆದರೆ ಆಲಮಟ್ಟಿಯ ಎತ್ತರ ಮಹಾರಾಷ್ಟ್ರದ ಅಪಸ್ವರ, ಅಂಧ್ರದ ತಗಾದೆಯಿಂದಾಗಿ ಎರಡನೇ ನ್ಯಾಯಾಧೀಕರಣ ರಚನೆಗೆ ಕಾರಣವಾಗಿ ೫೧೯.೬೦ ಮೀ.ಗೆ ನಿರ್ಮಾಣಗೊಂಡು ಸಂಗ್ರಹವಾಗಿದ್ದು ೧೨೩ ಟಿಎಂಸಿ ನೀರು ಮಾತ್ರ ಅಂದರೆ ಅದಕ್ಕೆ ಪೂರಕವಾಗಿ ಏತ ನೀರಾವರಿ ಯೋಜನೆಗಳು, ಕಾಲುವೆಗಳು ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗದೇ ಕೊನೆಯ ಅಂಚಿನ ಭೂಮಿಗೆ ನೀರು ಹರಿದು ಬಂದಿಲ್ಲ. ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರ್ಗಿ ಜಿಲ್ಲೆಗಳಿಗೆ ನೀರು ಹರಿಸಲಾಗದೇ ಅರ್ಧಕ್ಕೆ ನಿಂತಿದೆ. ಈಗ ಬ್ರಿಜೇಶ್‌ಕುಮಾರ ನ್ಯಾಯಾಧೀಕರಣ ೧೩೦ ಟಿಎಂಸಿ ನೀರನ್ನು ಆಲಮಟ್ಟಿಗೆ ಹಂಚಿಕೆ ಮಾಡಿ ಜಲಾಶಯದ ಎತ್ತರಕ್ಕೆ ಅನುಮತಿ ನೀಡಿ ೧೦ ವರ್ಷಗಳು ಸಂದರೂ ನ್ಯಾಯಾಧೀಕರಣದ ತೀರ್ಪು ಕೇಂದ್ರ ಸರಕಾರದಿಂದ ಅಧಿಸೂಚನೆಯಾಗದ ಪರಿಣಾಮ ನೆನೆಗುದಿಗೆ ಬಿದ್ದಿದೆ. ಅರ್ಧಕ್ಕೆ ನಿಂತಿರುವ ಜಲಾಶಯ, ಕೋಯ್ನಾದಿಂದ ಹರಿದು ಬರುವ ನೀರು ಪ್ರವಾಹ ಸಂಕಷ್ಟವನ್ನು ಸೃಷ್ಟಿ ಮಾಡಿರುವದು ಸುಳೆನೂ ಅಲ್ಲ. ಆದರೂ ಮಹಾರಾಷ್ಟ್ರ ತಗಾದೆ ನಿಂತಿಲ್ಲ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಮಧ್ಯೆ ನೀರಿನ ಹಂಚಿಕೆ ವಿವಾದವು ಸುಪ್ರೀಂಕೋರ್ಟನಲ್ಲಿದ್ದು ಅದಕ್ಕಾಗಿ ಉಸ್ತುವಾರಿಗೆ ಮತ್ತೊಂದು ಮಂಡಳಿ ನೇಮಕವಾಗಿದೆ. ಈ ಮಂಡಳಿ ರಚನೆ ಕರ್ನಾಟಕ ರಾಜ್ಯಕ್ಕೆ ಬಾಧಕವಲ್ಲದಿದ್ದರೂ ಇನ್ನೂ ಹೊರಬೀಳದ ಅಧಿಸೂಚನೆ ಮಾತ್ರ ಕರ್ನಾಟಕವನ್ನು ಕಷ್ಟದಲ್ಲಿಟ್ಟಿದೆ. ಯಡಿಯೂರಪ್ಪ ಸರಕಾರ ೧೦ ಸಾವಿರ ಕೋಟಿ ರೂ.ಗಳನ್ನು ಒದಗಿಸುವದಾಗಿ ಮುಂಗಡಪತ್ರದಲ್ಲಿ ಹೇಳಿದ್ದರಾದರೂ ಕೋರೋನಾ ಅದನ್ನು ಕಟ್ಟಿ ಹಾಕಿದೆ. ಹಿಂದಿನ ಕಾಂಗ್ರೆಸ್ ಸರಕಾರ ೧೦ ಸಾವಿರ ಕೋಟಿ ರೂ.ಗಳ ವಾಗ್ದಾನ ಈಡೇರಿಕೆಯಾಗಲಿಲ್ಲ. ಈಗ ಯೋಜನಾ ವೆಚ್ಚ ಹೆಚ್ಚಾಗಿದೆ. ಕೇಂದ್ರ ಸರಕಾರ ತಂದಿರುವ ನೂತನ ಭೂಸ್ವಾಧೀನ ನೀತಿಯಿಂದಾಗಿ ಭೂಬೆಲೆ ವಿವಾದವೂ ಕಗ್ಗಂಟಿನಲ್ಲಿದೆ. ಇದೆಲ್ಲ ಕಾರಣಗಳಿಂದಾಗಿ ಆಲಮಟ್ಟಿ ಜಲಾಶಯ ಎತ್ತರ ಕನಸಿನ ಮಾತೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.
ಯಾವದೇ ರಾಜಕೀಯ ಪPಗಳು ಆಲಮಟ್ಟಿ ವಿವಾದವನ್ನು ಚುನಾವಣಾ ಪ್ರಣಾಳಿಕೆಯ ವಸ್ತುವನ್ನಾಗಿ ಮಾಡಿಕೊಂಡಿಲ್ಲ. ಇದು ಅಭಿವೃದ್ಧಿಯಾಗಲಿ, ರಾಜಕಾರಣದ ಚರ್ಚೆಯಲ್ಲಾಗಲಿ ಪ್ರಸ್ತಾಪವಾಗಿಲ್ಲ. ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಹದ ಅಧ್ಯಯನದ ಸಂದರ್ಭದಲ್ಲಿ ಸಾಲ ಮಾಡಿಯಾದರೂ ಹಣ ತಂದು ಯೋಜನೆಯನ್ನು ಪೂರ್ತಿಗೊಳಿಸುವ ಭರವಸೆಯ ಮಾತನ್ನು ಹೇಳಿದ್ದಾರೆ. ದೆಹಲಿಗೆ ತೆರಳಿ ಅಧಿಸೂಚನೆಗೆ ಆಗ್ರಹಿಸುವದಾಗಿಯೂ ಹೇಳಿದ್ದಾರೆ. ಇದು ಕೇವಲ ಕಣೊರೆಸುವ ತಂತ್ರವಾಗಬಾರದು, ಸರಕಾರದ ಮೇಲೆ ಒತ್ತಡ ಹೇರುವ ಹೋರಾಟ ಮನೋಭಾವ, ಇಚ್ಛಾಶಕ್ತಿಯನ್ನು ಅಚ್ಚುಕಟ್ಟು ಪ್ರದೇಶದ ಶಾಸಕರು ಬೆಳೆಸಿಕೊಳ್ಳಬೇಕು. ಜಾತಿ ರಾಜಕಾರಣದಿಂದಾಗಿ ಹೊರಬಂದು ಅಭಿವೃದ್ಧಿ ರಾಜಕಾರಣಕ್ಕಾಗಿ ಪಟ್ಟು ಹಿಡಿಯದಿದ್ದರೆ ಯುಕೆಪಿಗೆ ಭವಿಷ್ಯ ಇಲ್ಲ, ಅದಕ್ಕೆ ಕಾಯಕಲ್ಪ ಸಿಗಬೇಕಾದರೆ ಪಕ್ಷಾತೀತ ಹೋರಾಟದ ತೀವ್ರತೆ ಬೇಕಾಗಿದೆ.
- ಸಂ.