ಕೃಷಿ‌ ಪರಿಕರ‌ ಮಾರಾಟ ಮಳಿಗೆಗಳ ಮೇಲೆ ಕೃಷಿ‌ ಇಲಾಖೆ ಅಧಿಕಾರಿಗಳ ದಾಳಿ

ಜಿಲ್ಲೆಯ ಕೃಷಿ ಪರಿಕರ ಮಾರಾಟ ಮಳಿಗೆಗಳ ತಪಾಸಣೆಯನ್ನು ಕೃಷಿ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ. ಹಲವೆಡೆ ನಿಯಮ ಉಲ್ಲಂಘನೆ ‌ಕಂಡು ಬಂದಿದ್ದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೃಷಿ‌ ಪರಿಕರ‌ ಮಾರಾಟ ಮಳಿಗೆಗಳ ಮೇಲೆ ಕೃಷಿ‌ ಇಲಾಖೆ ಅಧಿಕಾರಿಗಳ ದಾಳಿ

ನಾಡನುಡಿ ನ್ಯೂಸ್
ಬಾಗಲಕೋಟೆ:

ಜಿಲ್ಲೆಯ ಕೃಷಿ ಇಲಾಖೆಯ ವಿಚಕ್ಷಣಾ ತಂಡ ಜಿಲ್ಲೆಯ ವಿವಿದೆಡೆ ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಇತ್ತೀಚೆಗೆ ದಾಳಿ ಮಾಡಿ ನಿಯಮ ಮೀರಿ ಮಾರಾಟ ಮಾಡುತ್ತಿದ್ದ ಮಳಿಗೆಗಳಲ್ಲಿನ ಕಳೆನಾಶಕ, ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಜಪ್ತಿ ಮಾಡಿದೆ.


        ಮಹಾಲಿಂಗಪೂರದ ವೆಂಕಟೇಶ್ವರ ಫರ್ಟಿಲೈಜರ್ ಮಾರಾಟ ಮಳಿಗೆಯಲ್ಲಿ ಕೀಟನಾಶಕ ಕಾಯ್ದೆ ಉಲ್ಲಂಘನೆ ಹಿನ್ನಲೆಯಲ್ಲಿ 57 ಲೀಟರ್ ಕಳೆನಾಶಕವನ್ನು ಜಪ್ತಿ ಮಾಡಿದರೆ, ಹುನಗುಂದ ಪಟ್ಟಣದ ಸಂಗಮೇಶ್ವರ ಫರ್ಟಿಲೈಜರ್‍ನಲ್ಲಿ 184 ಕೆಜಿ ಬಿತ್ತನೆ ಬೀಜ, ಬಾಗಲಕೋಟೆ ನಗರದ ಬಸವೇಶ್ವರ ಟ್ರೇಡಿಂಗ ಕಂಪನಿ ಮಾರಾಟ ಮಳಿಗೆಯಲ್ಲಿ 94 ಕೆಜಿ ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಜಪ್ತಿ ಮಾಡಿಕೊಂಡಿದೆ. 
        ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೆ ರಸಗೊಬ್ಬರ ನಿಯಂತ್ರಣ ಆದೇಶ 1985, ಕೀಟನಾಶಕ ಕಾಯ್ದೆ 1968 ಹಾಗೂ ಕೀಟನಾಶಕ ನಿಯಮಗಳು 1971 ಮತ್ತು ಬೀಜ ನಿಯಂತ್ರಣ ಆದೇಶ 1983 ಗಳಲ್ಲಿನ ಅಂಶಗಳ ಪ್ರಕಾರ ಕೃಷಿ ಪರಿಕರಗಳ ಮಾರಾಟ ಮಾಡಲು ವಿಚಕ್ಷಣಾ ತಂಡ ಸೂಚಿಸಿತು. ಅಲ್ಲದೇ ಪ್ರಮುಖ ಅಂಶಗಳಾದ ಅಧಿಕೃತ ಮಾರಾಟ ಪರವಾನಿಗೆ ಪಡೆಯದೇ ಕೃಷಿ ಪರಿಕರ ವಹಿವಾಟು ಮಾಡತಕ್ಕದ್ದಲ್ಲ, ಪರವಾನಿಗೆಯಲ್ಲಿ ನಮೂದಿಸಿರುವ ಸ್ಥಳದಲ್ಲಿಯೇ ಕೃಷಿ ಪರಿಕರ ದಾಸ್ತಾನು ಮಾಡುವುದು, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಅನಧಿಕೃತ ದಾಸ್ತಾನು ಮಾಡುವುದಾಗಲಿ ಅಥವಾ ಇನ್ನಿತರೆ ಕಾರಣಗಳಿಗಾಗಿ ಕೃತಕ ಅಭಾವ ಸೃಷ್ಠಿಸಬಾರದು ಎಂದು ತಂಡ ತಿಳಿಸಿತು. 


           ಕೃಷಿ ಪರಿಕರಗಳನ್ನು ಖರೀದಿಸುವ ರೈತರಿಗೆ ಕಡ್ಡಾಯವಾಗಿ ನಿಗಧಿತ ನಮೂನೆಯ ರಶೀಧಿಯನ್ನು ನೀಡುವುದು, ಬಿತ್ತನೆ ಬೀಜವನ್ನು ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಾನೂನು ಶಿಕ್ಷಾರ್ಹ ಅಪರಾಧ, ರಸಗೊಬ್ಬರಗಳನ್ನು ಸರ್ಕಾರದಿಂದ ನಿಗಧಿಪಡಿಸಿದ ಗರಿಷ್ಠ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು, ಮಾರಾಟ ಮಳಿಗೆಗಳಲ್ಲಿ ಕೃಷಿ ಪರಿಕರವಾರು ದಾಸ್ತಾನು ಹಾಗೂ ದರಗಳನ್ನು ನಮೂದಿಸಿ ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸುವದರ ಜೊತೆಗೆ ವಿತರಕರು ರಸಗೊಬ್ಬರ ಮಾರಾಟವನ್ನು ಕಡ್ಡಾಯವಾಗಿ ಪಿಓಎಸ್ ಯಂತ್ರದಲ್ಲಿ ನಮೂದಿಸಿ ರೈತರಿಗೆ ವಿತರಣೆಯನ್ನು ಮಾಡಲು ತಿಳಿಸಿತು.
        ಕೃಷಿ ವಿಚಕ್ಷಣಾ ತಂಡದದಲ್ಲಿ ಕೃಷಿ ಉಪನಿರ್ದೇಶಕ ಎಸ್.ಬಿ.ಕೊಂಗವಾಡ, ಸಹಾಯಕ ಕೃಷಿ ನಿರ್ದೇಶಕರಾದ ಡಿ.ಜಿ.ಮಳೇದ, ಎಸ್.ಬಿ.ಹಳ್ಳೊಳ್ಳಿ, ಪಾಂಡಪ್ಪ ಲಮಾಣ ಸೇರಿದಂತೆ ಇತರರು ಇದ್ದರು. 


ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡದಂತೆ, ಈ ಬಗ್ಗೆ ದೂರುಗಳು ಬಂದಲ್ಲಿ ಕಠಿಣಕ್ರಮ ಕೈಗೊಳ್ಳಲಾಗುತ್ತಿದ್ದು, ನಿಯಮಗಳನ್ನು ಮೀರಿ ವಹಿವಾಟು ನಡೆಸಿದರೆ ಅಂತಹ ಕೃಷಿ ಪರಿಕರ ಮಾರಾಟಗಾರರ ಪರವಾನಿಗೆಯನ್ನು ಸಹ ರದ್ದು ಪಡಿಸಿ ಲಭ್ಯವಿರುವ ದಾಸ್ತಾನನ್ನು ಜಪ್ತಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು.
ಡಾ.ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ

(ಜಾಹೀರಾತು: ಶ್ರೇರೇಣುಕಾ ಸ್ವೀಟ್ಸ್)