ಜಮೀನಿಗಾಗಿ ತಂದೆಯನ್ನೇ ಕೊಲೆ ಮಾಡಿಸಿದ ಭೂಪ
ಬಾಗಲಕೋಟೆ : ಆಸ್ತಿಗಾಗಿ ತಂದೆಯನ್ನೆ ಪುತ್ರ ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ತಾಲೂಕಿನ ರಾಂಪೂರ ಗ್ರಾಮದಲ್ಲಿ ವರದಿಯಾಗಿದೆ.
ತಿಮ್ಮಾಪುರ ಗ್ರಾಮದ ಚೆನಪ್ಪ ತುಂಬರಮಟ್ಟಿ ಕೊಲೆಯಾದ ದುರ್ದೈವಿ. ಪುತ್ರ ಚೆನ್ನಬಸಪ್ಪ ತುಂಬರಮಟ್ಟಿ, ಆತನ ಪತ್ನಿ ಶಿವಬಸವ್ವ ಹಾಗೂ ಚೆನ್ನಬಸಪ್ಪನ ಆಪ್ತ ರಮೇಶ ಮನಗೂಳಿ ಬಂಧಿತ ಆರೋಪಿಗಳು. ಈ ಮೂವರು ನಿಡಗುಂದಿ ಮೂಲದ ಮಹಾಂತೇಶ ಮರಡಿಮಠ ಎಂಬಾತನಿಗೆ ಕೊಲೆಗಾಗಿ ೩ ಲಕ್ಷ ರೂ.ಗಳಿಗೆ ಸುಪಾರಿ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚೆನ್ನಪ್ಪ ತುಂಬರಮಟ್ಟಿ ಶವ ಜ.೨೫ರಂದು ರಾತ್ರಿ ರಾಂಪೂರದ ರೈಲ್ವೆ ಹಳಿ ಬಳಿ ಪತ್ತೆಯಾಗಿತ್ತು. ಪ್ರಕರಣದ ಜಾಡು ಹಿಡಿದ ಹೊರಟ ಪೊಲೀಸರಿಗೆ ಪುತ್ರನೇ ಕೊಲೆ ಆರೋಪಿ ಎಂಬುದು ಗೊತ್ತಾಗಿದೆ. ಪುತ್ರ ಚೆನ್ನಬಸಪ್ಪ ತಂದೆಯ ೩೨ ಎಕರೆ ಪೂರ್ಣವಾಗಿ ತನಗೆ ಸೇರಬೇಕೆಂದು ಬಯಸಿದ್ದ ಅದಕ್ಕಾಗಿ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ. ಜಮೀನು ತನಗೆ ಸಿಗುವುದು ಅನುಮಾನವಾದಾಗ ಪತ್ನಿ, ತನ್ನ ಆಪ್ತನ ಜತೆಗೆ ಸೇರಿ ಸುಪಾರಿ ನೀಡುವ ಮಟ್ಟಕ್ಕೆ ಇಳಿದಿದ್ದಾರೆ. ಮೂವರು ಪೊಲೀಸ್ ವಶದಲ್ಲಿದ್ದು, ಎಸ್‌ಪಿ ವೈ.ಅಮರನಾಥ ರೆಡ್ಡಿ, ಡಿವೈಎಸ್‌ಪಿ ಪಂಪನಗೌಡ, ಗ್ರಾಮೀಣ ಸಿಪಿಐ ಆರ್.ಎಚ್.ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.