ಹಬ್ಬದ ಸವಿ ಹೆಚ್ಚಿಸಲಿವೆ ಈ ತರಹೇವಾರಿ ತಿನಿಸುಗಳು..!
ನಾಡನುಡಿ ದೀಪಾವಳಿ ಪಾಕಶಾಲೆ ೭ ದಿನಗಳ ಕಾಲ ೨೫ಕ್ಕೂ ಅಧಿಕ ಬಗೆಯ ತಿಂಡಿ, ತಿನಿಸುಗಳ ರೆಸಿಪಿಗಳನ್ನು ನೀಡಿದೆ. ಅನೇಕ ಓದುಗರ ಮೆಚ್ಚುಗೆಗೂ ಈ ಅಂಕಣ ಕಾರಣವಾಗಿದೆ. ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕು ತರಲಿ ಎಂದು ಆಶಿಸುತ್ತಾ ಇಂದಿನ ರೆಸಿಪಿಗಳನ್ನೂ ಟ್ರೈ ಮಾಡಿ.
ಸಾಬುದಾನ ಬೊಂಡಾ
ಸಾಮಗ್ರಿ:
ನೀರಿನಲ್ಲಿ ೫-೬ ಗಂಟೆ ನೆನೆಸಿದ ಸಾಬುದಾನ - 2 ಕಪ್, ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ 4, ಶೇಂಗಾ ಪುಡಿ 4 ಚಮಚ, ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು 2 ಚಮಚ,, ಉಪ್ಪು ರುಚಿಗೆ ತಕ್ಕಷ್ಟು, ಲಿಂಬೆ ಹಣ್ಣಿನ ರಸ - ೨ ಚಮಚ, ಎಣ್ಣೆ ಕರಿಯಲು, ಶುಂಠಿ ಮೆಣಸಿನ ಕಾಯಿ ಪೇಸ್ಟ್ ½ ಚಮಚ
ಮಾಡುವ ವಿಧಾನ: ಮೊದಲು ೫ - ೬ ಗಂಟೆ ನೀರಿನಲ್ಲಿ ನೆನೆಸಿದ ಸಾಬುದಾನವನ್ನು ( ಸಬ್ಬಕ್ಕಿ) ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ ,ಶೇಂಗಾ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು , ಶುಂಠಿ ಮೆಣಸಿನಕಾಯಿ ಪೇಸ್ಟ್ ಮತ್ತು ಲಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಪಡ್ಡು ತವಾದಲ್ಲಿ ಸ್ವಲ್ಪ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ ತೆಗೆದರೆ ಸಾಬುದಾನ ಬೊಂಡ ಸಿದ್ಧ.
ಕಡ್ಲೆಕಾಳು ಆಂಬೊಡೆ
ಸಾಮಗ್ರಿ
ಕಡ್ಲೆಕಾಳು (ನೆನೆಸಿದ್ದು ) 1ಕಪ್, ಅಕ್ಕಿ ಹಿಟ್ಟು 2 ಚಮಚ,
ಉಪ್ಪು ರುಚಿಗೆ ತಕ್ಕಷ್ಟು, ಒಣಮೆಣಸಿನಕಾಯಿ 4, ತೆಂಗಿನಕಾಯಿ ತುರಿ 3 ಚಮಚ, ಚಿಕ್ಕದಾಗಿ ಹೆಚ್ಚಿದ ಶುಂಠಿ ಸ್ವಲ್ಪ, ಇಂಗು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ,
ಎಣ್ಣೆ ಕರಿಯಲು
ಮಾಡುವ ವಿಧಾನ
ನೆನೆಸಿದ ಕಡ್ಲೆಕಾಳುನ್ನು ನೀರು ಬಸಿದು ಒಣಮೆಣಸಿನಕಾಯಿ, ಇಂಗು, ಶುಂಠಿ, ತೆಂಗಿನಕಾಯಿ ಬೆರೆಸಿ, ನೀರು ಹಾಕದೆ, ತರಿಯಾಗಿ ರುಬ್ಬಿಕೊಳ್ಳಿ. ಅದಕ್ಕೆ ಕೊತ್ತಂಬರಿ ಸೊಪ್ಪು, ಉಪ್ಪು, ಅಕ್ಕಿ ಹಿಟ್ಟು ಹಾಕಿ, ಕಲಸಿ, ಆಂಬೊಡೆ ಆಕಾರದಲ್ಲಿ ಮಾಡಿ ಬಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವತನಕ ಕರಿದರೆ ಗರಿಗರಿಯಾದ ಅಂಬೊಡೆ ಸಿದ್ಧ.
ಆಲೂ ರಿಬ್ಬನ್ಸ್
ಸಾಮಗ್ರಿಗಳು
ಆಲೂಗಡ್ಡೆ (ಬೇಯಿಸಿದ್ದು) 2, ಕಾರ್ನ್ ಫ್ಲೋರ್ 1 ಕಪ್, ಮೈದಾಹಿಟ್ಟು ½ ಕಪ್, ಕಡಲೆಬೇಳೆಹಿಟ್ಟು ½ ಕಪ್, ಹುರಿದ ಶೇಂಗಾಬೀಜ ದ ತರಿ 4 ಚಮಚ, ಓಂಕಾಳು ( ಅಜ್ವೈನ) ೧ ಚಮಚ, ಅಚ್ಚ ಕಾರದ ಪುಡಿ 1 ಚಮಚ, ಬೇಕಿಂಗ್ ಪೌಡರ್ ½ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ
ಮಾಡುವ ವಿಧಾನ:ಬೇಯಿಸಿದ ಆಲೂಗಡ್ಡೆಯನ್ನು ತುರಿದು ಅದಕ್ಕೆ ಉಳಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿ ಹದಕ್ಕೆ ಕಲಿಸಿಟ್ಟು ಕೊಳ್ಳಿ. ಅದನ್ನು ತೆಳ್ಳಗೆ ಚಪಾತಿ ತರಹ ಲಟ್ಟಿಸಿ ಉದ್ದುದ್ದವಾಗಿ ರಿಬ್ಬನ್ ಆಕಾರದಲ್ಲಿ ಕತ್ತರಿಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆದರೆ ಆಲೂ ರಿಬ್ಬನ್ಸ್ ಸಿದ್ಧ. ಗ್ರೀನ್ ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಸರ್ವ್ ಮಾಡಿ.