ಕಳೆದ ವರ್ಷ ೨೦೧೯ ರಲ್ಲಿ ಉಂಟಾದ ಜಲಪ್ರಳಯದ ಕರಾಳ ಚಿತ್ರಣಗಳು ಮಾಸುವ ಮುನ್ನವೇ ಮತ್ತೆ ಜಿಲ್ಲೆಯಲ್ಲಿ ಜಲಪ್ರಳಯದ ಲಕ್ಷಣಗಳು ಗೋಚರಿಸುತ್ತಿವೆ. ಕೃಷ್ಟಾ ತಟದ, ಮಹಾರಾಷ್ಟ್ರದಲ್ಲಿ ಸುರಿಯುವ ಮಳೆಯಿಂದ ನದಿ, ಡ್ಯಾಂಗಳು ತುಂಬಿ ಹರಿಯುತ್ತವೆ ಜೊತೆಗೆ ಜಿಲ್ಲೆಯಲ್ಲಿಯೂ ವರುಣ ಅರ್ಭಟಿಸಿದ್ದಾನೆ, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಜನಜೀವನ ಅಸ್ತವ್ಯಸ್ತಗೊಳಿಸುವ ಜೊತೆಗೆ ನದಿ ತೀರದ ಪ್ರದೇಶದ ಜನತೆಗೆ ಪ್ರವಾಹದ ಆತಂಕ ತಂದೊಡ್ಡಿದೆ. ಜಿಲ್ಲೆಯಲ್ಲಿ ಹರಿಯುವ ಕೃಷ್ಣೆ, ಘಟಪ್ರಭೆ ಹಾಗೂ ಮಲಪ್ರಭೆ ಕಳೆದ ಬಾರಿ ತುಂಬಿ ಹರಿದಂತೆ ಈ ಬಾರಿಯು ತುಂಬಿ ಹರಿಯುತ್ತಿವೆ. ಪರಿಣಾಮ ಜಿಲ್ಲೆಯ ನದಿ ತಟದ ಹಲವು ಗ್ರಾಮಗಳು ಮುಳುಗಡೆಯಾಗಿವೆ, ಇನ್ನೂ ಹಲವು ಗ್ರಾಮಗಳು ಆತಂಕವನ್ನು ಎದುರಿಸುತ್ತಿವೆ, ಗ್ರಾಮ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆಗಳು ತುಂಬಿ ಹರಿಯುತ್ತಿರುವ ಪರಿಣಾಮ ಸಂಪರ್ಕ ಕಡಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ, ಪ್ರವಾಹದ ಆತಂಕ ಎದುರಾಗಿದೆ, ಇದನ್ನು ಎದುರಿಸಲು ಜಿಲ್ಲಾಡಳಿತವೂ ಸನ್ನದ್ಧಗೊಂಡು, ನದಿ ತಟದ ಪ್ರದೇಶದ ಜನತೆಗೆ ಈಗಾಗಲೇ ಮುನ್ನೆಚ್ಚರಿಕೆ ನೀಡಿ ಸುರಕ್ಷಿತ ಸ್ಥಳಗಳಿಗೆ ತೆರಳು ಸೂಚಿಸಿದೆ.
ಜಮಖಂಡಿ, ಮುಧೋಳ, ಬಾದಾಮಿ ತಾಲೂಕಿನಲ್ಲಿ ಪ್ರವಾಹದ ಆತಂಕ ಹೆಚ್ಚಿದೆ. ಈ ತಾಲೂಕಿನ ನದಿತಟದ ಗ್ರಾಮಗಳು ಪ್ರವಾಹ ಎದುರಾದಾಗ ಪ್ರತಿ ಸಲ ಸಮಸ್ಯೆ ಎದುರಿಸುತ್ತಿವೆ, ಆಗ ಅಷ್ಟೆ ಕ್ರಮಗಳು ಜಾರಿಯಾಗುತ್ತಿವೆ ವಿನಃ ಶಾಶ್ವತ ಪರಿಹಾರ ಮಾತ್ರ ಇನ್ನೂ ಆ ಜನತೆಗೆ ಗಗನಕುಸುಮವಾಗಿದೆ.
ಘಟಪ್ರಭಾ ಕ್ಯಾಚಮೆಂಟ್ ಏರಿಯಾಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಘಟಪ್ರಭಾ ನದಿಗೆ ೭೦ ಕ್ಯೂಸೆಕ್ಸ್ ನೀರು ರವಿವಾರ ಹರಿದು ಬರುತ್ತಿದೆ. ಹಿಡಕಲ್ ಡ್ಯಾಮ್‌ನಿಂದ ೪೦ ಸಾವಿರ, ಹಿರಣ್ಯಕೇಶಿಯಿಂದ ೧೩ ಸಾವಿರ, ಬಳ್ಳಾರಿ ನಾಲೆಯಿಂದ ೯ ಸಾವಿರ ಹಾಗೂ ಹಳ್ಳಕೊ ಳ್ಳಗಳಿಂದ ಒಟ್ಟಾರೆಯಾಗಿ ೭೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವದರಿಂದ ಅಲ್ಲಿ ಆತಂಕ ಸೃಷ್ಟಿಯಾಗಿದೆ.
ಮುಧೋಳ ತಾಲೂಕಿನ ಮಿರ್ಜಿ ಸೇತುವೆ, ಮಾಚಕನೂರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಹಲವು ಗ್ರಾಮಗಳ ರಸ್ತೆಗಳು ಮುಳುಗಿದ್ದರಿಂದ ಸಂಪರ್ಕ ಕಡಿತಗೊಂಡಿದೆ. ಬಾದಾಮಿ ತಾಲೂಕಿನ ಗೋವ ನಕೊಪ್ಪ ಗ್ರಾಮದ ಹಳೆಯ ಸೇತುವೆ ಜಲಾವೃತವಾಗಿದೆ.
ಈಗಾಗಲೇ ಮಲಪ್ರಭಾ ನದಿ ಅಂಚಿನಲ್ಲಿರುವ ಬಾದಾಮಿ ತಾಲೂಕಿನ ಗೋವಿನಕೊಪ್ಪ ಗ್ರಾಮಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ ಕ್ಯಾ. ಡಾ. ರಾಜೇಂದ್ರ, ಲೋಕೇಶ ಜಗಲಾಸರ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರವಾಹ ಎದುರಾದಾಗ ಭೇಟಿ ನೀಡುವದು, ಪರಿಶೀಲಿಸುವದು ಸಾಮಾನ್ಯವಾಗಿಬಿಟ್ಟಿದೆ, ಆದರೆ ಪ್ರವಾಹ ಉಂಟಾದಾಗ ಈ ನದಿ ತಟದ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಮಾತ್ರ ಇನ್ನೂ ಗಗನಕುಸುಮವಾಗಿದೆ. ಮೊದಲು ಈ ಜನತೆಗೆ ಶಾಶ್ವತ ಪರಿಹಾರ ಕಲ್ಪಿಸುವತ್ತ ಜಿಲ್ಲಾಡಳಿತ, ಸರಕಾರ ಮುಂದಾಗಬೇಕು. ಒಮ್ಮೆ ಬರ, ಮತ್ತೊಮ್ಮೆ ನೆರೆಹಾವಳಿಯಿಂದ ತತ್ತರಿಸಿರುವ ಜಿಲ್ಲೆಯ ನದಿ ತಟದ ಪ್ರದೇಶದ ಜನತೆಗೆ ಶಾಶ್ವತ ಪರಿಹಾರ ಸಿಗಬೇಕು, ಅದಕ್ಕಾಗಿ ಸರಕಾರ ಮುಂದಾಗಬೇಕೆಂಬುದು ಆಶಯ.
- ಸಂ.