ಕನ್ನಡ ಕಬೀರ ಇಬ್ರಾಹಿಂ ಸುತಾರ ನಿಧನ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್ ಅವರು 10 ಮೇ 1940ರಂದು ಜನಸಿದಿರು.ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡುತ್ತಿರುವ ತತ್ವಪದಕಾರರು ಮತ್ತು ಪ್ರವಚನಕಾರರು.

ಕನ್ನಡ ಕಬೀರ ಇಬ್ರಾಹಿಂ ಸುತಾರ ನಿಧನ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ನಾಡನುಡಿ ನ್ಯೂಸ್
ಬಾಗಲಕೋಟೆ
ಅರ್ಥಗರ್ಭಿತ ಮಾತು, ತತ್ವಗಳ ಬೋಧನೆ ಮೂಲಕ ಭಾವೈಕ್ಯತೆಯ ಹರಿಕಾರರಾಗಿದ್ದ ಪದ್ಮಶ್ರೀ ಇಬ್ರಾಹಿಂ ಸುತಾರಾ (೭೬)ಅವರು ಶನಿವಾರ ಬೆಳಗ್ಗೆ ಮಹಾಲಿಂಗಪುರದಲ್ಲಿ ನಿಧನ ಹೊಂದಿದರು.

ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಶನಿವಾರ ಬೆಳಗ್ಗೆ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಇಬ್ರಾಹಿಂ ಸುತಾರಾ ಅಗಲಿದ್ದಾರೆ.

ತಮ್ಮ ವಿಶಿಷ್ಟ ವಾಗ್ಝರಿಯ ಮೂಲಕ ಮನೆಮಾತಾಗಿದ್ದ ಸುತಾರಾ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಶರಣರು, ಸೂಫಿ ಸಂತರ ಕುರಿತಾಗಿ ಅಧ್ಯಯನ ಮಾಡಿದ್ದ ಅವರು ಎಲ್ಲ ಧರ್ಮಗಳು ಶಾಂತಿಯನ್ನೇ ಬೋಧಿಸಿವೆ ಎಂಬುದನ್ನು ಮನೋಜ್ಞವಾಗಿ ನಿರೂಪಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿದ್ದರು.

ಅವರ ನಿಧನದಿಂದ ಸಾಂಸ್ಕೃತಿಕ, ಆಧ್ಯಾತ್ಮಿಕ ಲೋಕ ಬಡವಾಗಿದೆ.

ಗಣ್ಯರ ಸಂತಾಪ: ಇಬ್ರಾಹಿಂ ಸುತಾರಾ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತೇರದಾಳ ಶಾಸಕ ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡರ, ಮೇಲ್ಮನೆ ಮಾಜಿ ವಿಪಕ್ಷ ನಾಯಕ ಎಸ್ಸಾರ್ ಪಾಟೀಲ, ವಿಪ ಸದಸ್ಯ ಪಿ.ಎಚ್.ಪೂಜಾರ, ಶಾಸಕ ಡಾ.ವೀರಣ್ಣ ಚರಂತಿಮಠ, ರಾಜ್ಯದ ಸಚಿವರು, ಗಣ್ಯರು ಕಂಬನಿ‌ ಮಿಡಿದಿದ್ದಾರೆ.

ಸಕಲ ಸರ್ಕಾರಿ ಗೌರವ:ಇಬ್ರಾಹಿಂ ಸುತಾರಾ ಅವರ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಮಖಂಡಿ ಉಪವಿಭಾಗಾಧಿಕಾರಿಗಳಿಗೆ ಕುಟುಂಬಸ್ಥರೊಂದಿಗೆ ಮಾತನಾಡಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿರುವುದಾಗಿ ಸಚಿವ ಗೋವಿಂದ ಕಾರಜೋಳ‌ ತಿಳಿಸಿದರು.