ರನ್ನ ಸಕ್ಕರೆ ಕಾರ್ಖಾನೆ: ಆಡಳಿತ ಮಂಡಳಿ ರಾಜೀನಾಮೆ, ಸಕ್ಕರೆ ಹರಾಜು ಆರಂಭ..!
ಬಾಗಲಕೋಟೆ ಜು.೧೮:
ಮುಧೋಳ ಬಳಿಯ ತಿಮ್ಮಾಪುರ ರನ್ನನರಗದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ೧೧ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ ಮೊರಬ ಅವರಿಗೆ ನಿರ್ದೇಶಕರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆಂದು ಇಲ್ಲಿಗೆ ತಲಿಪಿರುವ ವರದಿಗಳು ತಿಳಿಸಿವೆ. ಕೋವಿಡ್ ಕಾರಣ ಇನ್ನೂ ಆರಂಭವಾಗದ ಕಾರ್ಖಾನೆ ಹಂಗಾಮು, ಪಾವತಿಯಾಗಬೇಕಿರುವ ರೈತರ ಬಾಕಿ, ಕಾರ್ಮಿಕರ ವೇತನ ಬಾಕಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ರಾಮಣ್ಣ ತಳೆವಾಡ ಅವರ ನೇತೃತ್ವದಲ್ಲಿನ ೧೧ ನಿರ್ದೇಶಕರು ಪದತ್ಯಾಗ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರೈತರಿಗೆ ಸುಮಾರು ೩೮ ಕೋಟಿ ರೂ. ಬಾಕಿ ಪಾವತಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಾರ್ಖಾನೆಯಲ್ಲಿರುವ ಸಕ್ಕರೆ ಸಂಗ್ರಹದ ಗೋದಾಮನ್ನು ಜಪ್ತಿ ಮಾಡಿದ್ದು, ಜು.೧೫ರಿಂದ ಸಕ್ಕರೆ ಹರಾಜು ಆರಂಭವಾಗಿದ್ದು, ಎಸ್೧ ಪ್ರತಿ ಕ್ವಿಂಟಾಲ್‌ಗೆ ೩೧೩೦ ರೂ., ಎಸ್೨ ಪ್ರತಿ ಕ್ವಿಂಟಾಲ್‌ಗೆ ೩೧೨೫,ಎಂ೩೦ ಪ್ರತಿ ಕ್ವಿಂಟಾಲ್‌ಗೆ ೩೧೭೦ ರೂ.ಗಳಂತೆ ಹರಾಜಾಗಿದ್ದು, ಸುಮಾರು ೧.೪೦ ಲಕ್ಷ ಕ್ವಿಂಟಾಲ್ ಸಕ್ಕರೆ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಪೂರ್ಣಪ್ರಮಾಣದ ಸಕ್ಕರೆ ಹರಾಜಿನ ನಂತರ ರೈತರ ಬಾಕಿ ಪಾವತಿಗೆ ಕ್ರಮಕೈಗೊಳ್ಳಲಾಗುತ್ತಿದ್ದು, ಈಗ ರಾಜೀನಾಮೆ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.