ಪ್ರವಾಹ ನರ್ತನ: ಪ್ರಾಣಿಗಳ ಆಕ್ರಂದನ, ಮನೆ ತೊರೆದು ಕಣ್ಣೀರಿಡುತ್ತ ತೆರಳಿದ ಜನ
ಕೃಷ್ಣೆ, ಘಟಪ್ರಭೆ, ಮಲಪ್ರಭೆ ನದಿಗಳಲ್ಲಿ ಮತ್ತೆ ಪ್ರವಾಹ ಶುರುವಾಗಿದ್ದು, ಹಲವೆಡೆ ಪ್ರಾಣಿ, ಪಕ್ಷಗಳು ಜೀವ ಬಿಟ್ಟಿವೆ. ಬುಧವಾರ ಬಾದಾಮಿ ತಾಲೂಕಿನ ಚೋಳಚಗುಡ್ಡದಲ್ಲಿ ರಾಷ್ಟಪಕ್ಷಿ ಪ್ರವಾಹಕ್ಕೆ ಸಿಲುಕಿತ್ತು. ನಂತರ ಸ್ಥಳೀಯರು ಅದನ್ನು ರಕ್ಷಿಸಿದರು.
ನಾಡನುಡಿ ವಿಶೇಷ
ಬಾಗಲಕೋಟೆ:
ಜನರ ಮನಸ್ಸಿನಿಂದ ಕಳೆದ ವರ್ಷದ ಜಲಪ್ರಳಯದ ಆಘಾತ ಮರೆಯಾಗುವ ಮುನ್ನವೇ ಜಿಲ್ಲೆಯಲ್ಲಿ ಮತ್ತೆ ನದಿಗಳು ಉಕ್ಕಿಹರಿಯಲು ಆರಂಭಿಸಿವೆ. ಇದರಿಂದಾಗಿ ನದಿಪಾತ್ರದ ಹಳ್ಳಿಗಳ ಜನ ಪ್ರತಿನಿತ್ಯ ಆತಂಕದಲ್ಲಿ ದಿನಕಳೆಯುವ ಸ್ಥಿತಿಯಿದ್ದು, ಇದರ ಹೊಡೆತಕ್ಕೆ ಪ್ರಾಣಿಪಕ್ಷಿಗಳು ಸಹ ಬಲಿಯಾಗುತ್ತಿವೆ.
ಕೃಷ್ಣೆ, ಘಟಪ್ರಭೆ, ಮಲಪ್ರಭೆ ನದಿಗಳಲ್ಲಿ ಮತ್ತೆ ಪ್ರವಾಹ ಶುರುವಾಗಿದ್ದು, ಹಲವೆಡೆ ಪ್ರಾಣಿ, ಪಕ್ಷಗಳು ಜೀವ ಬಿಟ್ಟಿವೆ. ಬುಧವಾರ ಬಾದಾಮಿ ತಾಲೂಕಿನ ಚೋಳಚಗುಡ್ಡದಲ್ಲಿ ರಾಷ್ಟಪಕ್ಷಿ ಪ್ರವಾಹಕ್ಕೆ ಸಿಲುಕಿತ್ತು. ನಂತರ ಸ್ಥಳೀಯರು ಅದನ್ನು ರಕ್ಷಿಸಿದರು. ಮತ್ತೊಂದು ಕಡೆ ಬಾದಾಮಿ ತಾಲೂಕಿನ ಚಿಕ್ಕಬಾಣಸಗಿ ಗ್ರಾಮದಲ್ಲಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮಂಗಗಳ ಆಕ್ರಂದನ ಮುಗಿಲುಮುಟ್ಟಿತ್ತು. ಕೊನೆಗೆ ಅಗ್ನಿ ಶಾಮಕದಳ ಸಿಬ್ಬಂದಿ ಕೋತಿಗಳ ರಕ್ಷಣೆಗೆ ಕಾರ್ಯಾಚರಣೆ ಕೈಗೊಂಡರು.
ಬಾದಾಮಿ, ಮುಧೋಳ, ಜಮಖಂಡಿ ತಾಲೂಕಿನಲ್ಲಿ ಪ್ರವಾಹದ ಅಬ್ಬರ ಜೋರಾಗಿದ್ದು, ಹಲವೆಡೆ ಕಾಳಜಿ ಕೇಂದ್ರಗಳನ್ನು ಸಹ ತೆರೆಯಲಾಗಿದೆ.ಜಿಲ್ಲೆಯ ೩೪ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿದ್ದು, ಬಾಗಲಕೋಟೆಯಿಂದ ಗದಗ ಸಂಪರ್ಕಿಸುವ ಚೊಳಚಗುಡ್ಡದ ಬಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಜೀವನ್ಮರಣದ ಹೋರಾಟ ನಡೆಸಿದ ನವಿಲು: ಬಾದಾಮಿ ತಾಲೂಕಿನ ಚೋಳಚಗುಡ್ಡ ಗ್ರಾಮದಲ್ಲಿ ರಾಷ್ಟçಪಕ್ಷಿ ನವಿಲು ಜೀವನ್ಮರಣದ ಹೋರಾಟ ನಡೆಸಿತು. ರಭಸವಾಗಿ ಹರಿದು ಬಂದ ನೀರಿನಲ್ಲಿ ಸಿಲುಕಿದ್ದ ನವಿಲು ಮೊದಲು ಮರವೊಂದರ ರಕ್ಷಣೆ ಪಡೆದಿತ್ತು. ಅದು ಮುಳುಗಲು ಬಂದಾಗ ನೀರಿನಲ್ಲಿ ಹರಿದುಹೊರಟಿತ್ತು. ಕೊನೆಗೆ ಅದು ನದಿ ದಡಕ್ಕೆ ಬಂದಾಗ ನಿಜಗುಣಪ್ಪ ಎಂಬ ವೃದ್ಧ ಹಾಗೂ ಯಲಪ್ಪ ಎಂಬುವವರು ಪ್ರಾಣದ ಹಂಗು ತೊರೆದು ರಕ್ಷಿಸಿದರು. ಇದು ಜನರ ಮುಂದೆ ನಡೆದಿರುವ ಚಿಕ್ಕ ಉದಾಹರಣೆ ಅಷ್ಟೇ. ದಿಢೀರ್ ನೀರು ಹರಿದು ಬಂದಿರುವುದರಿAದಾಗಿ ಅನೇಕ ಪ್ರಾಣಿ, ಪಕ್ಷಿಗಳು ಸಂಕಷ್ಟ ಎದುರಿಸಿದ್ದು, ಸಾಧ್ಯವಾಗಿರುವ ಕಡೆಗಳಲ್ಲಿ ಅವುಗಳನ್ನು ರಕ್ಷಿಸುವ ಕಾರ್ಯಮಾಡಲಾಗುತ್ತಿದೆ.
ಮಲಪ್ರಭಾ ನದಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಬಾದಾಮಿ ತಾಲೂಕಿನ ಚಿಕ್ಕನಸಬಿ ಗ್ರಾಮದಲ್ಲಿ ಹದಿನೈದಕ್ಕೂ ಹೆಚ್ಚು ಮಂಗಗಳು ಸಿಲುಕಿಕೊಂಡಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಂತರ ಅಗ್ನಿ ಶಾಮಕದಳ ಸಿಬ್ಬಂದಿ ಕಾರ್ಯಾಚರಣೆಯನ್ನು ಆರಂಭಿಸಿದ್ದು, ರಬ್ಬರ್ ಬೋಟ್ ಹಾಗೂ ಏಣಿಯೊಂದಿಗೆ ತೆರಳಿದ ೭ ಜನ ಸಿಬ್ಬಂದಿ ಅವುಗಳಿಗೆ ಆಹಾರ ಒದಗಿಸಿದ್ದಾರೆ. ನಂತರ ಅವುಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ಅವಕಾಶವಾಗುವಂತೆ ಸಿಬ್ಬಂದಿ ಏಣಿಯನ್ನು ಇರಿಸಿದ್ದಾರೆ. ಅದರ ಸಹಾಯದ ಮೂಲಕ ಅವುಗಳು ಸುರಕ್ಷಿತ ಸ್ಥಳಕ್ಕೆ ತೆರಳಿವೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಪರಿಕರಗಳೊಂದಿಗೆ ಹೊರಟ ಜನ :ಜಿಲ್ಲಾಡಳಿತ ನದಿ ಪಾತ್ರದ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಲವು ಬಾರಿ ಸೂಚಿಸಿದ್ದು, ಅದಕ್ಕಾಗಿ ವ್ಯವಸ್ಥೆಯನ್ನೂ ಕಲ್ಪಿಸಿದೆ. ಹುನಗುಂದ ತಾಲೂಕಿನ ಗಂಜಿಹಾಳ ಗ್ರಾಮದಲ್ಲಿ ಮಲಪ್ರಭೆ ನೀರು ಬಂದಿದ್ದರಿAದ ಜನ ಪರಿಕರಗಳೊಂದಿಗೆ ಊರು ಬಿಟ್ಟು ತೆರಳಿದರು. ಕೃಷಿಯಂತ್ರಗಳು, ಮನೆಯಲ್ಲಿನ ದಿನಬಳಕೆ ವಸ್ತುಗಳಿಂದ ಮನೆಯಿಂದ ಹೊರಟ ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊAಡರು.
ಕಳೆದ ವರ್ಷವಷ್ಟೇ ಇಂಥ ಸ್ಥಿತಿ ಬಂದೊದಗಿತ್ತು. ಇನ್ನೆಂದು ಇಂಥ ಶಿಕ್ಷೆ ಬೇಡ ಎಂದು ಬೇಡಿಕೆಕೊಂಡಿದ್ದೇವು. ವರ್ಷ ಕಳೆಯುವಷ್ಟರಲ್ಲಿ ಅಂಥದೇ ಚಿತ್ರಣವಿದ್ದು, ನಮ್ಮ ಬದುಕು ದೇವರಿಗೆ ಇಷ್ಟ ಎಂದು ಜನ ಅಳಲು ತೋಡಿಕೊಂಡರು. ಕಳೆದ ವರ್ಷ ಪ್ರವಾಹ ನೀಡಿದ ಪೆಟ್ಟು ಇನ್ನೂ ಮಾಸಿಲ್ಲ. ಅದು ಕಳಯುವಷ್ಟರಲ್ಲಿ ಕೊರೊನಾ ಬಂತು. ಅದು ಕೂಡ ಮುಕ್ತಾಯವಾಯಿತು ಎನ್ನುವಷ್ಟರಲಿ ಮತ್ತೆ ಪ್ರವಾಹ ಸ್ಥಿತಿ ಉಲ್ಭಣಿಸಿದ್ದು, ಇದೇ ಚಿತ್ರಣ ಮುಂದವರಿದರೆ ನಾವು ಬದುಕುವುದು ಹೇಗೆ ಎಂಬ ಪ್ರಶ್ನೆ ನದಿಪಾತ್ರಗಳ ಜನರಿಂದ ವ್ಯಕ್ತವಾಗುತ್ತಿದೆ.
ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ ೨.೦೮ ಲಕ್ಷ ಕ್ಯೂಸೆಕ್ ನೀರು ಹರಿದು, ಬಂದಿದ್ದು, ಅಷ್ಟೂ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿದೆ. ಇದರಿಂದಾಗಿ ಹಲವು ಕಡೆಗಳಲ್ಲಿ ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ.
ಇನ್ನೊಂದೆ ಜಮಖಂಡಿ ತಾಲೂಕಿನ ಕಂಕಣವಾಡಿ, ಟಕೋಡ ಹಾಗೂ ಟಕ್ಕಳಕಿ ಗ್ರಾಮಗಳ ರಸ್ತೆ ಸಂಚಾರವೂ ಬಂದಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಪ್ರವಾಹದಲ್ಲಿ ಬೇಡ ಸಾಹಸ: ಕೆಲವು ಕಡೆಗಳಲ್ಲಿ ರಸ್ತೆಗೆ ನೀರು ಹರಿದು ಸಂಚಾರ ಬಂದಾದರೂ ಕೆಲವು ಚಾಲಕರು ಅವುಗಳ ಮಧ್ಯೆಯೇ ಸಾಗುವ ಧೈರ್ಯ ತೋರುತ್ತಿದ್ದಾರೆ, ಜಮಖಂಡಿ ತಾಲೂಕಿನಲ್ಲಿ ಈ ಚಿತ್ರಣ ಕಂಡು ಬಂದಿದೆ. ಮತ್ತೊಂದು ಕಡೆ ಜೋರಾಗಿ ಹರಿಯುವ ಪ್ರವಾಹ ನೀರಿನ ದಡದಲ್ಲಿ ಮಹಿಳಯರು ಬಟ್ಟೆ ತೊಳೆಯುವುದು ಸಹ ಕಂಡು ಬಂದಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರವಾಹ ಸಂದರ್ಭದಲ್ಲಿ ನೀರಿನ ರಭಸ ಅಂದಾಜಿಗೂ ಸಿಗುವುದಿಲ್ಲ. ಹೀಗಿರುವಾಗ ಜನ ಮೈಮರೆಯುವುದು ಅವರನ್ನು ಅಪಾಯಕ್ಕೆ ಸಿಲುಕಿಸುತ್ತದೆ.