ನಾಳೆಯಿಂದ ಶ್ರೀದಿಗಂಬರೇಶ್ವರ ಮಠದ ಜಾತ್ರಾ ಮಹೋತ್ಸವ
*ಶ್ರೀಬಸಪ್ಪಜ್ಜನವರ ನೇತೃತ್ವದಲ್ಲಿ ಕಾರ್ಯಕ್ರಮ
ಬಾಗಲಕೋಟೆ:
ನವನಗರ ರಸ್ತೆಯಲ್ಲಿರುವ ಶ್ರೀದಿಗಂಬರೇಶ್ವರ ಮಠದ ೧೭ನೇಯ ವಾರ್ಷಿಕೋತ್ಸವ, ಸಪ್ತವಾರ್ಷಿಕ ಮಹಾರಥೋತ್ಸವ ಹಾಗೂ ಶ್ರೀದಿಗಂಬರೇಶ್ವರ ಮತ್ತು ಶ್ರೀಕಪ್ಪರ ಪಡಿಯಮ್ಮ ದೇವಿಯ ಪ್ರಥಮ ಪಲ್ಲಕ್ಕಿ ಉತ್ಸವಗಳು ಮೇ ೩ ರಿಂದ ಮೇ ೫ರವರೆಗೆ ಶ್ರೀಮಠದ ಶ್ರೀಬಸಪ್ಪಜ್ಜನವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳ ಕಾಲ ಸರಳ ಆಚರಣೆಗೆ ಸೀಮಿತಗೊಳಿಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ಮೇ ೩ರಂದು ಬೆಳಗ್ಗೆ ೫ ಗಂಟೆಗೆ ಕರ್ತೃ ಗದ್ದುಗೆಗಳಿಗೆ, ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ ಮತ್ತು ಗಣಾರಾಧನೆ ನಂತರ ಮಹಾಪ್ರಸಾದ ನೆರವೇರಲಿದೆ. ಮೇ ೪ ರಂದು ಬೆಳಗ್ಗೆ ೬ ಗಂಟೆಗೆ ಕರ್ತೃ ಗದ್ದುಗೆ, ಉತ್ಸವ ಮೂರ್ತಿ, ಪಲ್ಲಕ್ಕಿ ಹಾಗೂ ತೇರಿಗೆ ಮಹಾಪೂಜೆ ಸಲ್ಲಿಸಲಾಗುತ್ತಿದ್ದು, ಮಧ್ಯಾಹ್ನ ೧೨.೩೫ಕ್ಕೆ ಮಹಾಪ್ರಸಾದ ಇರಲಿದೆ. ಮೇ ೫ ರಂದು ಬೆಳಗ್ಗೆ ಧಾರ್ಮಿಕ ಪೂಜೆಗಳನ್ನು ಸಲ್ಲಿಸಲಾಗುತ್ತಿದ್ದು, ಮಧ್ಯಾಹ್ನ ಮಹಾಪ್ರಸಾದವಿರಲಿದೆ. ಸಂಜೆ ೫.೪೫ಕ್ಕೆ ಶ್ರೀದಿಗಂಬರೇಶ್ವರ ಹಾಗೂ ಶ್ರೀಕಪ್ಪರ ಪಡಿಯಮ್ಮ ದೇವಿ ಉತ್ಸವ ಮೂರ್ತಿಗಳನ್ನೊಳಗೊಂಡ ಪಲ್ಲಕ್ಕಿಯ ಪ್ರಥಮ ಮಹೋತ್ಸವ ಹಾಗೂ ರಥೋತ್ಸವಗಳು ಜರುಗಲಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.