ದುಡ್ಡು ಕೊಡದಿದ್ದರೆ ದಾಳಿ: ಎಸಿಬಿ ಅಧಿಕಾರಿ ಹೆಸರಿನಲ್ಲಿ ವಂಚನೆಗೆ ಯತ್ನ: ಸೈಬರ್ ಠಾಣೆಗೆ ದೂರು
ಬಾಗಲಕೋಟೆ:
ಭ್ರಷ್ಟಾಚಾರ ನಿಗ್ರಹದಳದ ಹೆಸರು ಹೇಳಿ ಅಧಿಕಾರಿಗಳನ್ನು ಯಾಮಾರಿಸುತ್ತಿರುವ ದಂಧೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಗುರಿಯಾಗಿಸುತ್ತಿರುವ ತಂಡ ಹಣದ ಬೇಡಿಕೆ ಇಡುತ್ತಿದ್ದು, ಕೊಡದಿದ್ದಲ್ಲಿ ಮನೆ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕುತ್ತಿದೆ. ಬಾಗಲಕೋಟೆ ಜಿಪಂ ಅಧಿಕಾರಿಯೊಬ್ಬರಿಗೆ ಇಂಥದೇ ಬೆದರಿಕೆ ಕರೆ ಬಂದಿದ್ದು, ಅವರು ಬಾಗಲಕೋಟೆಯ ಸಿಇನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
(ಚಿತ್ರ ಶೀರ್ಷಿಕೆ: ದಾಖಲಿಸಿರುವ ಅಧಿಕಾರಿ ಈಶ್ವರ ಕುರಬಗಟ್ಟಿ)
ವಂಚಕರ ಜಾಲಕ್ಕೆ ಜಿಲ್ಲೆಯ ೮ ರಿಂದ ೧೦ ಅಧಿಕಾರಿಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಪಂಚಾಯತರಾಜ್ ಇಲಾಖೆಯ ಇಂಜನಿಯರಿಂಗ್ ವಿಭಾಗದ ಎಇಇ ಈಶ್ವರ ಕುರುಬಗಟ್ಟಿ ಅವರಿಗೂ ಇಂಥದೇ ಕರೆ ಬಂದಾಗ ಅನುಮಾನಗೊಂಡಿರುವ ಅವರು ಸಿಇಎನ್ ಠಾಣೆಗೆ ತೆರಳಿ ದೂರು ದಾಖಲಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಂಚನೆ ಜಾಲದ ಬೆನ್ನು ಬಿದ್ದಿದ್ದು. ಆರೋಪಿಗಳ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ಏಪ್ರೀಲ್ ಕೊನೆಯ ವಾರದಲ್ಲಿ ಈಶ್ವರ ಕುರಬಗಟ್ಟಿ ಅವರಿಗೆ ಹಣ ನೀಡದಿದ್ದರೆ ಮನೆ ಮೇಲೆ ದಾಳಿ ನಡೆಸಲಾಗುವುದು, ತಾನೊಬ್ಬ ಎಸಿಬಿ ಅಧಿಕಾರಿ ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಇದನ್ನು ಆಪ್ತರೊಂದಿಗೆ ಕುರಬಗಟ್ಟಿ ಹಂಚಿಕೊಂಡಾಗ ಎಸಿಬಿ ದಾಳಿಯ ಮಾಹಿತಿ ಸಂಪೂರ್ಣ ಗೌಪ್ಯವಾಗಿರುತ್ತದೆ. ಈ ರೀತಿಯಲ್ಲಿ ಬೆದರಿಕೆ ನೀಡಿ ಹಣ ವಸೂಲಿ ಸಾಧ್ಯವೇ ಇಲ್ಲ ಎಂಬುದನ್ನು ಹತ್ತಿರದವರು ಮನವರಿಕೆ ಮಾಡಿದಾಗ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಕುರಬಗಟ್ಟಿ ಅವರು ದೂರು ದಾಖಲಿಸಿದ್ದಾರೆ.
ಈ ಜಾಲ ಬಾಗಲಕೋಟೆಯಷ್ಟೇ ಅಲ್ಲದೇ ಇತರ ಜಿಲ್ಲೆಗಳಲ್ಲೂ ಸಕ್ರಿಯವಾಗಿರುವ ಬಗ್ಗೆ ಮಾಹಿತಿಯಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ೮ ರಿಂದ ೧೦ ಅಧಿಕಾರಿಗಳಿಗೆ ಈ ರೀತಿಯ ಬೆದರಿಕೆ ಕರೆಗಳು ಬಂದು ಕೆಲವರು ಭಯದಿಂದ ದುಡ್ಡು ನೀಡಿರುವ ಶಂಕೆಯಿದ್ದು, ಆರೋಪಿಗಳ ಪತ್ತೆ ನಂತರವೇ ವಂಚನೆಯ ಪ್ರಮಾಣ ಬೆಳಕಿಗೆ ಬರಲಿದೆ. ಈಶ್ವರ ಕುರಬಟ್ಟಿ ಅವರಿಗೆ ಕರೆ ಬಂದ ನಂಬರ್ ಅನ್ನು ಟ್ರೂಕಾಲರ್ ಆಪ್‌ನಲ್ಲಿ ಪರಿಶೀಲಿಸಿದಾಗಲೂ ಅದು ಎಸಿಬಿ ಅಧಿಕಾರಿ ಎಂದೇ ತೋರಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಎಸಿಬಿ ಹೆಸರಿನಲ್ಲಿ ಬೆದರಿಕೆ ಬಂದಿರುವ ಬಗ್ಗೆ ದೂರು ದಾಖಲಾಗಿದೆ. ವಂಚನೆಯ ಜಾಲವನ್ನು ಪತ್ತೆ ಮಾಡುವ ಕೆಲಸ ನಡೆದಿದೆ. ಇದು ಜಿಲ್ಲೆಯಲ್ಲಿ ಮಾತ್ರವಲ್ಲದೇ ಇತರ ಜಿಲ್ಲೆಗಳಲ್ಲಿ ನಡೆದಿರುವ ಸಾಧ್ಯತೆಯೂ ಇದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.