ಮಹಾಲಿಂಗಪುರ ಪುರಸಭೆ ಘರ್ಷಣೆ :ಸುಮೋಟೊ ಕೇಸ್ ದಾಖಲು-ಶಾಸಕರ ನಡೆಗೆ ತೀವ್ರ ಆಕ್ರೋಶ

ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಶಾಸಕ‌ ಸಿದ್ದು ಸವದಿ ಅವರ ನಡೆದುಕೊಂಡ ರೀತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದು, ಅದರ ವಿವರ ಇಲ್ಲಿದೆ ಓದಿ.

ಮಹಾಲಿಂಗಪುರ ಪುರಸಭೆ ಘರ್ಷಣೆ :ಸುಮೋಟೊ ಕೇಸ್ ದಾಖಲು-ಶಾಸಕರ ನಡೆಗೆ ತೀವ್ರ ಆಕ್ರೋಶ

ನಾಡನುಡಿ ನ್ಯೂಸ್ 
ಬಾಗಲಕೋಟೆ:
ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ನಡೆದಿರುವ ಘರ್ಷಣೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್ ಗೆ ಬಿಜೆಪಿ ಸದಸ್ಯರು ಅಡ್ಡಮತದಾನ ಮಾಡಲಿದ್ದಾರೆ ಎಂಬ ಭೀತಿ ಬಿಜೆಪಿ ಮುಖಂಡರಿಗೆ ಕಾಡತೊಡಗಿತ್ತು. ಎರಡು ದಿನಗಳ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ  ಸಂದರ್ಭದಲ್ಲಿ‌ ಪಾಲ್ಗೊಳ್ಳಲು ಆಗಮಿಸಿದ ಮೂವರು ಮಹಿಳಾ ಸದಸ್ಯೆಯರನ್ನು ಶಾಸಕರ ಬೆಂಬಲಿಗರು, ಕಾರ್ಯಕರ್ತರು ಎಳೆದಾಡಿದ್ದು, ಇವರಷ್ಟೇ ಅಲ್ಲದೇ ಶಾಸಕ ಸಿದ್ದು ಸವದಿ ಕೂಡ ಮಹಿಳಾ ಸದಸ್ಯೆಯನ್ನು ಒಳಬಿಡದೆ ಎಳೆದಾಡಿದ್ದರು. ಮಹಿಳೆ ಎಂಬುದನ್ನೂ ಗಮನಿಸದೆ ಅನುಚಿತವಾಗಿ ವರ್ತಿಸಿದ್ದಾರೆ. ಬಿಜೆಪಿಯ ಸಂಸ್ಕೃತಿ ಇದು ಎಂದು ಕಾಂಗ್ರೆಸ್ ದೂರಿದೆ.

ಘಟನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದು, ತೇರದಾಳ‌ ಕ್ಷೇತ್ರದಾದ್ಯಂಥ ಈ ಘಟನೆ ವಿವಾದ ಸೃಷ್ಟಿಸಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸವದಿ, ಘಟನೆಯಲ್ಲಿ ಮಹಿಳೆಯನ್ನು ರಕ್ಷಿಸಲು ನಾನು ಮುಂದಾಗಿದ್ದೇನೆ ವಿನಾ ಹಲ್ಲೆ ನಡೆಸಿಲ್ಲ. ಆ ಸಂಸ್ಕೃತಿಯೂ ನನ್ನದಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ, ಕಾಂಗ್ರೆಸ್ ನವರು ನಮ್ಮ ಸದಸ್ಯರನ್ನು ಹೈಜಾಕ್ ಮಾಡಿದ್ದಾರೆ. ಈ ಘಟನೆಯಲ್ಲಿ ನನ್ನ ತಪ್ಪೇ ಇಲ್ಲ ಎಂದಿದ್ದಾರೆ.

ಆದರೆ ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನೆಟ್ಟಿಗರು  ಶಾಸಕರ ನಡೆಯನ್ನು ಖಂಡಿಸಿದ್ದಾರೆ.

ಮಹಾಲಿಂಗಪುರ ಘಟನೆಗೆ ಸಂಬಂಧಿಸಿದಂತೆ ಪುರಸಭೆ ಮಹಿಳಾ ಸದಸ್ಯರನ್ನು ರಕ್ಷಿಸುವ ಕಾರ್ಯವನ್ನು ಪೊಲೀಸರು ಮಾಡಿದ್ದಾರೆ. ಈವರೆಗೆ ಸದಸ್ಯೆಯರು ಯಾವುದೇ ದೂರು ನೀಡದ ಕಾರಣ ನಾವೇ ಸುಮೋಟೊ  ಕೇಸ್ ದಾಖಲಿಸಿದ್ದೇವೆ.

ಲೋಕೇಶ ಜಗಲಾಸರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ