ಬಿಟಿಡಿಎ ಹೊಸ ಹೆಜ್ಜೆ

ಬಿಟಿಡಿಎ ಹೊಸ ಹೆಜ್ಜೆ
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ನಿವೇಶನ ವಿತರಣೆಯಲ್ಲಿ ಹೊಸ ಹೆಜ್ಜೆ ಇಟ್ಟಿದೆ. ೫೨೧ ಮೀ.ದಿಂದ ೫೨೩ ಮೀ. ಹಾಗೂ ಹಿನ್ನೀರಿನಿಂದ ೧೦೦ ಮೀ. ವ್ಯಾಪ್ತಿಯಲ್ಲಿ ಬಾಧಿತಗೊಳ್ಳುವ ಸಂತ್ರಸ್ತರ ಕಟ್ಟಡದಲ್ಲಿನ ಬಾಡಿಗೆದಾರರು, ಸಂತ್ರಸ್ತರ ಅವಲಂಬಿತರು, ಮಕ್ಕಳಿಗೆ ನಿವೇಶನ ನೀಡುವಲ್ಲಿ ವಿಳಂಬವಾಗಿತ್ತು. ಪರಿಹಾರ ಧನ ವಿತರಿಸಿ ಹಲವು ವರ್ಷಗಳು ಸಂದಿದ್ದರೂ ನವನಗರದ ೧ ಹಾಗೂ ೨ ಯುನಿಟ ಅಭಿವೃದ್ಧಿಯಾಗಿದ್ದರೂ ಸಹ ನಿವೇಶನ ವಿತರಣೆಯಲ್ಲಿ ವಿಳಂಬವಾಗಿದೆ ಎಂಬುದು ಸ್ಪಷ್ಟವಾಗಿದೆ. ಕಳೆದ ಹಲವಾರು ವರ್ಷಗಳಿಂದ ಪ್ರಾಧಿಕಾರದ ಕೆಲಸ ಆಮೆಗತಿಯಿಂದ ಸಾಗಿದೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿಗೆ ಏನು ಹೇಳಲು ಸಾಧ್ಯವಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಕಳೆದ ನಂತರ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತ ಮಂಡಳಿ ರಚನೆಯಾಗಿದೆ. ಶಾಸಕ ಡಾ. ವೀರಣ್ಣ ಚರಂತಿಮಠ ಅವರು ಸಭಾಪತಿಗಳಾಗಿzರೆ. ಅಧಿಕಾರ ಸ್ವೀಕರಿಸಿದ ಮೊದಲ ಸಭೆಯಲ್ಲಿ ೩೫ ನಿರ್ಣಯಗಳನ್ನು ಸ್ವೀಕರಿಸಿ ಅವುಗಳ ಅನುಷ್ಠಾನಕ್ಕೆ ಆಡಳಿತ ಮಂಡಳಿ ಹೆಜ್ಜೆ ಇಟ್ಟಿದೆ. ಅದರ ಭಾಗವಾಗಿ ಬಾಕಿ ಉಳಿದಿರುವ ಮುಖ್ಯ ಸಂತ್ರಸ್ತರು, ಸಂತ್ರಸ್ತರ ಅವಲಂಬಿತರ ಸಹೋದರರು, ಮಕ್ಕಳು, ಬಾಡಿಗೆದಾರರು ಈಗ ನಿವೇಶನ ಪಡೆಯುತ್ತಿದ್ದಾರೆ. ಮಂಗಳವಾರದಂದು ಸಾಂಕೇತಿಕವಾಗಿ ೫೭ ಫಲಾನುಭವಿಗಳಿಗೆ ನಿವೇಶನ ವಿತರಿಸಲಾಗಿದೆ. ಅವುಗಳನ್ನು ತ್ವರಿತವಾಗಿ ಪೂರ್ತಿಗೊಳಿಸಲು ಪ್ರಾಧಿಕಾರ ಹೆಜ್ಜೆ ಇಟ್ಟಿದೆ.
ಸಂತ್ರಸ್ತರು ಯಾವ ಉದೆಶಕ್ಕಾಗಿ ನಿವೇಶನ ಪಡೆದಿರುವವರು ಅದೇ ಕಾರಣಕ್ಕೆ ನಿವೇಶನ ಬಳಸಬೇಕೆಂಬ ಆದೇಶ ಜಾರಿಗೊಳಿಸಿರುವದು ಅತ್ಯಂತ ಸೂಕ್ತ. ಆದರೆ ಇದು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗದೇ ಅನುಷ್ಠಾನ ಕೂಡ ಅಷ್ಟೆ ಕಟ್ಟುನಿಟ್ಟಾಗಿ ನಡೆಯಬೇಕು. ೩ನೇ ಯುನಿಟನ್ನು ಕೂಡ ಅಭಿವೃದ್ಧಿಪಡಿಸುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಅಗತ್ಯ ೧೬೦೦ ಎಕರೆಯಲ್ಲಿ ೧೪೦೦ ಎಕರೆ ಭೂಮಿ ಈಗಾಗಲೇ ಸ್ವಾಧೀನವಾಗಿದೆ. ಇನ್ನೂ ೨೦೦ ಎಕರೆ ಮಾತ್ರ ಬಾಕಿ ಉಳಿದಿದೆ. ಅದು ನ್ಯಾಯಾಲಯದಲ್ಲಿರುವದರಿಂದ ರಾಜೀ ಮೂಲಕ ಇತ್ಯರ್ಥಪಡಿಸಬೇಕೆಂಬ ಪ್ರಾಧಿಕಾರದ ಇಚ್ಚೆ ಒಂದು ಆರೋಗ್ಯಕರ ಬೆಳವಣಿಗೆ. ಕಾರ್ಯಕ್ರಮದಲ್ಲಿ ಮಾತನಾಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರು ನವನಗರ ಚಂಡಿಗಡ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕೆಂಬುದು ರಾಮಕೃಷ್ಣ ಹೆಗಡೆ ಅವರ ಕನಸಾಗಿತ್ತು, ಆ ಕನಸನ್ನು ಸಾಕಾರಗೊಳಿಸಲು ಸಭಾಪತಿಗಳಾಗಿರುವ ಡಾ. ಚರಂತಿಮಠರು ಅತ್ಯಂತ ಸಮರ್ಥರು ಎಂದು ಹೇಳಿರುವದು ಔಚಿತ್ಯಪೂರ್ಣ, ಇದು ನವನಗರದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಿರುವದು ಸಂಕೇತ.
ಸಂ.