ಡಿಸಿಸಿ ಬ್ಯಾಂಕ್‌ಗೆ ಮತ್ತೆ ಆಡಳಿತ ಮಂಡಳಿ

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗಳ ಅಧಿಕಾರವನ್ನು ಕೊನೆಗಾಣಿಸಿ ಆಡಳಿತಾಧಿಕಾರಿಗಳನ್ನು ನೇಮಿಸಿದ ಸರಕಾರದ ಕ್ರಮಕ್ಕೆ ಹೈಕೋರ್ಟನಲ್ಲಿ ಹಿನ್ನಡೆಯಾಗಿದೆ

ಡಿಸಿಸಿ ಬ್ಯಾಂಕ್‌ಗೆ ಮತ್ತೆ ಆಡಳಿತ ಮಂಡಳಿ
ಬಾಗಲಕೋಟೆ, ಬೆಳಗಾವಿ, ಕಾರವಾರ ಜಿಲ್ಲಾ ಡಿಸಿಸಿ ಬ್ಯಾಂಕ್‌ಗಳಿಗೆ ಡಿಸೆಂಬರ್‌ವರೆಗೆ ಚುನಾವಣೆಯನ್ನು ಮುಂದಕ್ಕೆ ಹಾಕಿ ಅವಧಿ ಮುಗಿಸಿದ ಆಡಳಿತ ಮಂಡಳಿಗಳ ಅಧಿಕಾರವನ್ನು ಕೊನೆಗಾಣಿಸಿ ಆಡಳಿತಾಧಿಕಾರಿಗಳನ್ನು ನೇಮಿಸಿದ ಸರಕಾರದ ಕ್ರಮಕ್ಕೆ ಹೈಕೋರ್ಟನಲ್ಲಿ ಹಿನ್ನಡೆಯಾಗಿದೆ. ಧಾರವಾಡ ಪೀಠ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಅವಧಿ ಮುಗಿಸಿದ ಆಡಳಿತ ಮಂಡಳಿಯನ್ನು ಮತ್ತೆ ಚುನಾವಣೆಯಾಗುವವರೆಗೂ ಮುಂದುವರೆಸಲು ಸೂಚಿಸಿದೆ. ಅದರಂತೆ ಜಿಲ್ಲಾಧಿಕಾರಿಗಳು ಅವಧಿ ಮುಕ್ತಾಯಗೊಂಡು ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯPರಾಗಿ ಅಜಯಕುಮಾರ ಸರನಾಯಕ ನೇತೃತ್ವದ ಆಡಳಿತ ಮಂಡಳಿ ಅಧಿಕಾರ ಗ್ರಹಣ ಮಾಡಿದೆ.
ಪಂಚಾಯಿತಿಗಳಿಗೆ ಅವಧಿ ಮುಗಿದಾಗ ಆಡಳಿತಾಧಿಕಾರಿಗಳನ್ನು ಸರಕಾರ ನೇಮಿಸಿದ್ದು, ಹೈಕೋರ್ಟ ಈ ಆದೇಶವನ್ನು ಪುರಸ್ಕರಿಸಿತ್ತು. ಇದೇ ಹಿನ್ನಲೆಯಲ್ಲಿ ಡಿಸಿಸಿ ಬ್ಯಾಂಕ್‌ಗಳಿಗೂ ಆಡಳಿತಾಧಿಕಾರಿಗಳನ್ನು ನೇಮಿಸಿದರೆ ನ್ಯಾಯಾಲಯದಲ್ಲಿ ಜಯ ಸಿಗಬಹುದೆಂಬ ಸರಕಾರದ ನಿರೀಕ್ಷೆ ಹುಸಿಯಾಗಿದೆ. ಜೂನ್, ಜುಲೈ, ಅಗಸ್ಟ ಹೀಗೆ ೩ ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳು, ಅಪೆಕ್ಸ ಬ್ಯಾಂಕ್‌ಗಳು ಅವಧಿ ಮುಕ್ತಾಯಗೊಂಡು ಆಡಳಿತಾಧಿಕಾರಿಗಳನ್ನು ನೇಮಿಸಲಾಗಿತ್ತು. ಸರಕಾರದ ಆದೇಶವನ್ನು ಹೈಕೋರ್ಟ ಮಾನ್ಯ ಮಾಡಿಲ್ಲ. ಈಗ ಡಿಸೆಂಬರ್‌ವರೆಗೆ ಇದ್ದ ಆಡಳಿತ ಮಂಡಳಿ ಮತ್ತೆ ಜೀವದಾನ ಪಡೆದುಕೊಂಡಿದೆ. ಕೋರೋನಾ ಸಂದರ್ಭದಲ್ಲಿ ಸಾವಿರಾರು ಜನ ಮತದಾನ ಕೇಂದ್ರಕ್ಕೆ ಬರಬಾರದು, ಮತ್ತಷ್ಟು ಆರೋಗ್ಯ ಸಮಸ್ಯೆಗೆ ಕಾರಣವಾಗಬಾರದೆಂಬ ನಿರೀಕ್ಷೆ ಇಟ್ಟುಕೊಂಡು ಸರಕಾರ ಚುನಾವಣೆಯನ್ನು ಮುಂದಕ್ಕೆ ಹಾಕಿತ್ತು. ಪಿಕೆಪಿಎಸ್ ಸೇರಿದಂತೆ ಸಹಕಾರಿ ಕ್ಷೇತ್ರಗಳಿಗೆ ಬಹುತೇಕ ಮತದಾರರು ೬೦ ವರ್ಷ ಮೀರಿರುವುದಾಗಿರುವುದರಿಂದ ಆರೋಗ್ಯ ಕಾರಣಕ್ಕೆ ಅವರು ಮತದಾನ ಕೇಂದ್ರಕ್ಕೆ ಬರುವದು ಸಮಂಜಸವಲ್ಲ, ಈ ಕಾರಣಕ್ಕೆ ಸರಕಾರ ಚುನಾವಣೆಯನ್ನು ಮುಂದಕ್ಕೆ ಹಾಕಿರುವದು ಸಮಂಜಸವಾಗಿದೆ. ಆದರೆ ಆಡಳಿತಾಧಿಕಾರಿಗಳ ನೇಮಕ ಮಾಡಿರುವದರಿಂದ ಅಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಅಡ್ಡಿಯಾಗುತ್ತದೆ. ಆಡಳಿತ ಮಂಡಳಿ ತನ್ನ ಹಕ್ಕನ್ನು ಪ್ರತಿಪಾದಿಸಿದೆ. ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವವರೆಗೆ ತನಗೆ ಅವಕಾಶ ಬೇಕೆಂದು ಕೇಳಿಕೊಂಡಿದೆ. ಈ ಬೇಡಿಕೆಗೆ ಮನ್ನಣೆ ಸಿಕ್ಕಿದೆ. ಹೈಕೋರ್ಟ ನೀಡಿರುವ ಮನ್ನಣೆಯ ಬಹುಮುಖ್ಯ ವಿಚಾರವನ್ನು ಆಡಳಿತ ಮಂಡಳಿ ಅರಿತುಕೊಳ್ಳಬೇಕು. ಕೋವಿಡ್ ಸಂಕಷ್ಟದಿಂದಾಗಿ ಕೃಷಿಕರು ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಬ್ಯಾಂಕುಗಳ ಆರ್ಥಿಕ ನೆರವು ಅಗತ್ಯವಾಗಿದೆ. ಈ ಸಂಬಂಧ ಬಂದಿರುವ ಅರ್ಜಿಗಳನ್ನು ಪರಿಶೀಲಿಸಬೇಕು, ಅರ್ಹತೆಯ ಆಧಾರದ ಮೇಲೆ ಸಾಲ ವಿತರಣೆಗೆ ಕ್ರಮ ಕೈಗೊಳ್ಳಬೇಕೇ ವಿನಃ ಚುನಾವಣೆ ತಯಾರಿ ಮಾಡಿಕೊಳ್ಳಲು ಅಧಿಕಾರದ ಅವಕಾಶವನ್ನು ಬಳಕೆ ಮಾಡಿಕೊಳ್ಳಬಾರದು.
- ಸಂ.