ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಸುಸೂತ್ರ

ಕರೊನಾ ಸುರಕ್ಷತಾ ಕ್ರಮಗಳ ನಡುವೆ ಗುರುವಾರ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಯಾವುದೇ ತೊಡಕಿಲ್ಲದೆ ಸುಸೂತ್ರವಾಗಿ ನಡೆಯಿತು

ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಸುಸೂತ್ರ
PU Exam

ಕರೊನಾ ಸುರಕ್ಷತಾ ಕ್ರಮಗಳ ನಡುವೆ ಗುರುವಾರ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಯಾವುದೇ ತೊಡಕಿಲ್ಲದೆ ಸುಸೂತ್ರವಾಗಿ ನಡೆಯಿತು.
ಜಿಲ್ಲೆಯ 16 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 6540 ಪರೀಕ್ಷಾರ್ಥಿಗಳಲ್ಲಿ 6272 ವಿದ್ಯಾರ್ಥಿಗಳು ಹಾಜರಾಗಿದ್ದು, 268 ವಿದ್ಯಾರ್ಥಿಗಳು ಗೈರಾದರು. ಜಿಲ್ಲಾಡಳಿತ ಕೋವಿಡ್-19 ತಡೆಗಟ್ಟುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು.
ಬೆಳಗ್ಗೆ 9 ಗಂಟೆಗೂ ಮುನ್ನವೇ ಪರೀಕ್ಷಾ ಕೇಂದ್ರಗಳತ್ತ ಆಗಮಿಸುತ್ತಿದ್ದ ವಿದ್ಯಾರ್ಥಿಗಳು ಪರಸ್ಪರ ಅಂತರವನ್ನು ಕಾಯ್ದಕೊಂಡರು. ಪರೀಕ್ಷಾ ಕೊಠಡಿಗಳಿಗೆ ತೆರಳುವ ಮುನ್ನ ಆವರಣದಲ್ಲಿ ಸೇರಿದ್ದ ವಿದ್ಯಾರ್ಥಿಗಳಿಗೆ ಧ್ವನಿವರ್ಧಕದ ಮೂಲಕ ಪರಸ್ಪರ ಅಂತರವನ್ನು ಕಾಯ್ದುಕೊಳ್ಳಲು ಸೂಚಿಸಲಾಗುತ್ತಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾಸ್ಕ್‌ಗಳನ್ನು ವಿತರಿಸಿ, ಸ್ಯಾನಿಟೈಸರ್‌ನಿಂದ ಕೈ ಶುಚಿಗೊಳಿಸಿ, ಥರ್ಮಲ್ ಸ್ಕಾೃನಿಂಗ್ ಮಾಪನದಿಂದ ಆರೋಗ್ಯ ತಪಾಸಣೆ ಮಾಡಿ ಪರೀಕ್ಷಾ ಕೊಠಡಿ ಒಳಗೆ ಹೋಗಲು ಅವಕಾಶ ಮಾಡಿಕೊಡಲಾಗಿತ್ತು.
ಹೊರ ರಾಜ್ಯದಿಂದ ನೋಂದಾಯಿಸಿಕೊಂಡಿದ್ದ 7 ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಿದ್ದರು. ಗೈರಾಗಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಕರೆ ಮಾಡಲಾಯಿತು. ಸಾವು, ಮದುವೆ ಹಾಗೂ ಇನ್ನಿತರ ವೈಯಕ್ತಿಕ ಕಾರಣಗಳಿಂದ ಹಾಗೂ 12 ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನೇ ಡೌನ್‌ಲೋಡ್ ಮಾಡಿಕೊಂಡಿಲ್ಲದಿರುವುದು ಮತ್ತು ಹೆಚ್ಚು ದಿನ ತರಗತಿಗೆ ಗೈರಾಗುತ್ತಿದ್ದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲವೆಂದು ಡಿಡಿಪಿಯು ಡಿ.ಎಸ್.ಕೃಷ್ಣಮೂರ್ತಿ ತಿಳಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಡಿಸಿ, ಎಸ್ಪಿ ಭೇಟಿ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಪ್ರಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ ಮುಂಜಾಗ್ರತೆ ಕ್ರಮಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಮಾತನಾಡಿ, ಒಂದು ವಿಶಿಷ್ಟ ವಾತಾವರಣದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಜಾಗ್ರತೆ ಹಾಗೂ ಜವಾಬ್ದಾರಿಯಿಂದ ವರ್ತಿಸಬೇಕಿದೆ. ಪರಸ್ಪರ ಅಂತರ ಕಾಯ್ದುಕೊಂಡು ಯಾವುದೇ ಆತಂಕಕ್ಕೆ ಒಳಗಾಗದೆ ಆರಾಮವಾಗಿ ಪರೀಕ್ಷೆಯನ್ನು ಬರೆಯಿರಿ ಎಂದು ಧೈರ್ಯ ತುಂಬಿದರು. ಎಸ್ಪಿ ಆನಂದ್‌ಕುಮಾರ್ ಇದ್ದರು.