ಮತ ಎಣಿಕೆ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ : ಡಿಸಿ

ಮತ ಎಣಿಕೆ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ : ಡಿಸಿ


ಬಾಗಲಕೋಟೆ:  ಬಾಗಲಕೋಟೆ ಲೋಕಸಭಾ ಚುನಾವಣೆ-೨೦೨೪ರ ಮತ ಎಣಿಕೆ ಕಾರ್ಯ ಜೂನ್ ೪ ರಂದು ನಡೆಯಲಿದ್ದು, ಮತ ಏಣಿಕೆ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಹೇಳಿದರು.


 ಜಿಲ್ಲಾಡಳಿತ ಭವನದ ನೂತನ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆ ಮತ ಎಣಿಕೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಾಗಲಕೋಟೆ ಲೋಕಸಭಾ ಚುನಾವಣೆಗೆ ಸಂಬAಧಿಸಿದ ೮ ಮತಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಮತ ಎಣಿಕೆ ಕೇಂದ್ರ ಸಂಪೂರ್ಣ ಸಜ್ಜಾಗಿದ್ದು, ಯಾವುದೇ ರೀತಿಯ ಗೊಂದಲ, ಉಹಾಪೋಹಗಳಿಗೆ ಅವಕಾಶವಿಲ್ಲದಂತೆ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ತಿಳಿಸಿದರು.
 ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಮತದಾನ ಪ್ರಕ್ರಿಯೆಯಷ್ಟೆ ಮತ ಎಣಿಕೆಯು ಮಹತ್ವದ ಕಾರ್ಯವಾಗಿದ್ದು, ಯಾವುದೇ ರೀತಿಯ ಲೋಪಕ್ಕೆ ಅವಕಾಶ ಕೊಡದಂತೆ ಶ್ರದ್ದೆಯಿಂದ ಕಾರ್ಯ ನಿರ್ವಹಿಸಬೇಕು. ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಮತ ಎಣಿಕೆ ಕಾರ್ಯ ಯಶಸ್ವಿಗೊಳಿಸಲು ತಿಳಿಸಿದರು. 


 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಬಳಸವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮತ ಎಣಿಕಾ ಕೇಂದ್ರದೊಳಗೆ ಬರುವ ಪ್ರತಿಯೊಬ್ಬರು ಆಯಾ ಪ್ರವೇಶದ್ವಾರ ಹಾಗೂ ನಿಗದಿಪಡಿಸಿದ ಸ್ಥಳಗಳಲ್ಲಿ ಮೊಬೈಲ್ ಡಿಪಾಜಿಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅದರಂತೆ ಈಗಾಗಲೇ ಸೂಚಿಸಿ ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಅಭ್ಯರ್ಥಿಗಳು, ಮಾದ್ಯಮ ಪ್ರತಿನಿಧಿಗಳು ತಮ್ಮ ವಾಹನಗಳನ್ನು ನಿಲ್ಲಿಸಬೇಕು ಎಂದರು. 
ಯುಕೆಪಿಯ ಮಹಾವ್ಯವಸ್ಥಾಪಕ ಆಗಿರುವ ಚುನಾವಣಾ ತರಬೇತಿಯ ನೋಡಲ್ ಅಧಿಕಾರಿ ರಮೇಶ ಕಳಸದ ಮಾತನಾಡಿ ಪ್ರತಿ ಮತಕ್ಷೇತ್ರಕ್ಕೆ ೧೪ ಟೇಬಲ್‌ಗಳನ್ನು ಇರಿಸಲಾಗಿದ್ದು, ಪ್ರತಿ ಟೇಬಲ್‌ಗೆ ತಲಾ ಒಬ್ಬರಂತೆ ಮತ ಎಣಿಕಾ ಮೇಲ್ವಿಚಾರಕ, ಸಹಾಯಕ ಮತ್ತು ಮೈಕ್ರೋ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಅಂಚೆ ಮತಪತ್ರ ಎಣಿಕೆಗೆ ಎರಡು ಕೊಠಡಿ ಇದ್ದು, ಅದರಲ್ಲಿ  ಒಂದು ಕೊಠಡಿಗೆ ೧೪ ಮತ್ತು ಇನ್ನೊಂದು ಕೊಠಡಿಗೆ ೧೦ ಟೇಬಲ್ ಇರಿಸಲಾಗಿದೆ. ಸ್ಕಾö್ಯನಿಂಗ್ ಮಾಡಲು ೧೦ ಟೇಬಲ್ ಸಹ ಇರಿಸಲಾಗಿದೆ ಎಂದು ತಿಳಿಸಿದರು. 
ಮಾಸ್ಟರ ಟ್ರೆöÊನರ್ ಎನ್.ವಿ.ಶಿವಗಾಂವಕರ ಪ್ರಾತ್ಯಕ್ಷಿಕೆಯ ಮೂಲಕ ಮತ ಏಣಿಕೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಆಯಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ಹುಲ್ಲುಮನಿ ತಿಮ್ಮಣ್ಣ, ಸಾಜಿದ ಮುಲ್ಲಾ, ಸಂತೋಷ ಕಾಮಗೌಡ, ಎಂ.ಬಿ.ನಾಗಠಾಣ, ದುರುಗೇಶ ರುದ್ರಾಕ್ಷಿ, ಸಂತೋಷ ಜಗಲಾಸರ, ಶ್ರೀಧರ ಗೋಟೂರ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.