ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಏನಾಯ್ತು?

*ಪಂಚಮಸಾಲಿ‌ ಜಗದ್ಗುರುಗಳಿಗೆ ಜನಸಾಮಾನ್ಯರ ಪಕ್ಷದ ಪ್ರಶ್ನೆ

ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಏನಾಯ್ತು?

ಬಾಗಲಕೋಟೆ:

ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟದಲ್ಲಿ ಪಾಲ್ಗೊಳ್ಳದ ಮುರುಗೇಶ ನಿರಾಣಿ ಅವರು ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಇದನ್ನು ಗಮನಿಸಿದರೆ ಲಿಂಗಾಯತ ಸ್ವತಂತ್ರ ಹೋರಾಟದ ದಿಕ್ಕು ತಪ್ಪಿಸುವ ಕೆಲಸವಾಗುತ್ತದೆ ಎಂಬ ಅನುಮಾನ ಮೂಡಿದೆ ಎಂದು ಜನಸಾಮಾನ್ಯರ ಪಕ್ಷದ ಅಧ್ಯಕ್ಷ ಯಲ್ಲಪ್ಪ ಹೆಗಡೆ ಹೇಳಿದ್ದಾರೆ.

ಸೋಮವಾರ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವುದಕ್ಕೆ ನಮ್ಮ ವಿರೋಧವಿಲ್ಲ ಆದರೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕ್ಷೀಣಿಸಿರುವುದು ಏಕೆ ಎಂಬುದಕ್ಕೆ ಬಸವಜಯಮೃತ್ಯುಂಜಯ ಸ್ವಾಮೀಜಿ ಉತ್ತರಿಸಬೇಕೆಂದು ಆಗ್ರಹಿಸಿದರು.

ಕನಕಗುರುಪೀಠ, ವಾಲ್ಮೀಕಿ ಸ್ವಾಮೀಜಿ ಹಾಗೂ ಪಂಚಮಸಾಲಿ ಜಗದ್ಗುರುಗಳು ರಾಜಕಾರಣಿಗಳು ರೂಪಿಸಿರುವ ಷಡ್ಯಂತರಕ್ಕೆ ಬಲಿ ಆಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾತಿ ಹೋರಾಟಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ತಮ್ಮದೇ ಸರ್ಕಾರವಿದ್ದರೂ ರಾಮುಲು ಅವರು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಹೋರಾಟದ ನೇತೃತ್ವ ವಹಿಸಿದ್ದಾರೆ, ಈಶ್ವರಪ್ಪ ಅವರು ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದಾರೆ, ನಿರಾಣಿ ಅವರು ಪಂಚಮಸಾಲಿ ಸಮಾಜ ಹೋರಾಟದ ನೇತೃತ್ವ ವಹಿಸಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಈ ಹೋರಾಟಗಳನ್ನು ಈ ನಾಯಕರು ರೂಪಿಸುತ್ತಿದ್ದು, ಇವರ ಷಡ್ಯಂತರಕ್ಕೆ ಸ್ವಾಮೀಜಿಗಳು ಬಲಿ ಆಗುತ್ತಿದ್ದಾರೆ ಎಂದು ದೂರಿದರು.

ಎಚ್.ಎನ್.ಹೇಮಂತ ಮತ್ತಿತರರು ಉಪಸ್ಥಿತರಿದ್ದರು.