ಉಸ್ಮಾನಗಣಿ ಬಂಧನಕ್ಕೆ ಆಗ್ರಹ: ವಿರಾಟ ಶಕ್ತಿ ಪ್ರದರ್ಶನ
ಬಾಗಲಕೋಟೆ:
ಭಾರತ ಮಾತೆಗೆ ಜೈಕಾರ ಕೂಗುವ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್ ಬಂಧನಕ್ಕೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಇಳಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇಳಕಲ್ ನಲ್ಲಿ ಅಘೋಷಿತ ಬಂದ್ ವಾತಾವರಣ ಕಂಡು ಬಂದಿತು.
ಗುಳೇರಗುಡಿಯಲ್ಲಿಅಬ್ದುಲ್ ಕಲಾಂ ವೃತ್ತ ಉದ್ಘಾಟನೆ ವೇಳೆ ಭಾರತ ಮಾತೆ, ಗೋ ಮಾತೆ, ಗಂಗಾಮಾತೆಗೆ ಜೈಕಾರ ಕೂಗುವ ವಿಚಾರವಾಗಿ ಉಸ್ಮಾನಗಣಿ ವಿವಾದತಾತ್ಮಕ ಹೇಳಿಕೆ ನೀಡಿದ್ದರು, ಅವರ ವಿರುದ್ಧ ಇಳಕಲ್ ಠಾಣೆಯಲ್ಲಿ ದೂರು ದಾಖಲಾದರೂ ಪೊಲೀಸರು ಬಂಧನಕ್ಕೆ ಮುಂದಾಗದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದು ಶುಕ್ರವಾರ ವಿರಾಟ ಸ್ವರೂಪ ಪಡೆಯಿತು. ೧೦ ಸಾವಿರಕ್ಕೂ ಅಧಿಕ ಜನ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತದ ಸಂಯೋಜಕ ಶ್ರೀಕಾಂತ ಹೊಸಕೆರೆ ಅವರು, ಉಸ್ಮಾನಗಣಿ ಬಂಧನಕ್ಕೆ ಪೊಲೀಸರು ಮೀನಮೇಷ ಎಣಿಸುವುದು ಸರಿಯಲ್ಲ. ಇದು ಹೋರಾಟದ ಆರಂಭ ಮಾತ್ರ. ಆತನ ಬಂಧನವಾಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಗುರುವಾರ ಸಂಜೆಯಿಂದಲೇ ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.