ಆನ್‌ಲೈನ್ ವಂಚನೆ: ಕೃಷಿ ಅಧಿಕಾರಿಗಳಿಗೆ ಪಂಗನಾಮ 

  ಆನ್‌ಲೈನ್ ವಂಚನೆ: ಕೃಷಿ ಅಧಿಕಾರಿಗಳಿಗೆ ಪಂಗನಾಮ 


ಬಾಗಲಕೋಟೆ: ಇತ್ತೀಚೆಗೆ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆಚ್ಚಿನ ಲಾಭಾಂಶ ನೀಡುವುದಾಗಿ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ೪೫.೫೯ ಲಕ್ಷ ರೂ.ಗಳ ವಂಚನೆ ಎಸೆಗಿರುವ ಪ್ರಕರಣ ಬೆಳಕಿಗೆ ಬಂದಿದೆ. 
 ಕೃಷಿ ಇಲಾಖೆ ಅಧಿಕಾರಿಗಳಾದ ಮುಧೋಳದ ಪ್ರಕಾಶ ಸದಾಶಿವ ಅಡವಿ, ಜಮಖಂಡಿ ತಾಲೂಕು ಹುನ್ನೂರಿನ ಶ್ರೀಶೈಲ್ ಈಶ್ವರ ತೇಲಿ ಮೋಸಕ್ಕೆ ಒಳಗಾದವರು. ಈ ಇಬ್ಬರಿಗೆ ಆರೋಪಿತರು ಇಂಟರ್‌ನ್ಯಾಷನಲ್ ಈಕ್ವಿಟಿ ಫಂಡ್ ಸಂಸ್ಥೆ ಹೆಸರು ಬಳಸಿ ಲಿಂಕ್ ಕಳಿಸಿದ್ದು, ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ. 
 ಅದರಂತೆ ದೂರುದಾರ ಪ್ರಕಾಶ ಅಡವಿ ಅವರು ೨೦೨೪ರ ಆಗಸ್ಟ್ ತಿಂಗಳಿನಿAದ ಅಕ್ಟೋಬರ್ ತಿಂಗಳ ೦೯ನೇ ತಾರೀಖಿನವರೆಗೆ ೨೫.೯೯ ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಸಾಕ್ಷಿದಾರ ಶ್ರೀಶೈಲ ತೇಲಿ ಅವರ ಖಾತೆಯಿಂದ ೨೦.೬೦ ಲಕ್ಷ ರೂ. ಸೇರಿ ೪೬.೫೯ ಲಕ್ಷ ರೂ.ಗಳನ್ನು ವಂಚಕರ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಈ ಪೈಕಿ ೯೯,೯೬೧ ರೂ.ಗಳು ಮಾತ್ರವೇ ದೂರುದಾರರಿಗೆ ಮರಳಿವೆ. ಇನ್ನುಳಿದ ೪೫.೫೯ ಲಕ್ಷ ರೂ.ಗಳಿಗೆ ಕನ್ನ ಬಿದ್ದಿರುವ ಬಗ್ಗೆ ಇಲ್ಲಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.