ಮಾಜಿ ಸಿಎಂ ಸೇರಿ ಎಲ್ಲರ ಹೆಸರಿನಲ್ಲೂ ವಂಚಿಸುತ್ತಿದ್ದ

ಮಾಜಿ ಸಿಎಂ ಸೇರಿ ಎಲ್ಲರ ಹೆಸರಿನಲ್ಲೂ ವಂಚಿಸುತ್ತಿದ್ದ
 
ಬಾಗಲಕೋಟೆ: ರಾಮಾರೂಢ ಶ್ರೀಗಳಿಗೆ ವಂಚನೆ ಮಾಡಿರುವ ಆರೋಪಿ ಪ್ರಕಾಶ ಮುಧೋಳ ಈ ಹಿಂದೆಯೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಈಶ್ವರಪ್ಪ ಸೇರಿದಂತೆ ತಮ್ಮ ಹೆಸರನ್ನೂ ದುರುಪಯೋಗಪಡಿಸಿಕೊಂಡು ವಂಚನೆ ಮಾಡಲು ಮುಂದಾಗಿದ್ದ, ಆತನೊಬ್ಬ ಖತರನಾಕ್ ಕ್ರಿಮಿನಲ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಬಾಂಬ್ ಸಿಡಿಸಿದ್ದಾರೆ. 
ನಗರದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೧೮ರಲ್ಲಿ ತಾನೇ ಆರ್.ಬಿ.ತಿಮ್ಮಾಪೂರ ನನ್ನ ಸಹೋದರಿಗೆ ಕಾರು ಕೊಡಿಸಬೇಕಿದೆ ಎಂದು ಎಂದು ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಯಾಮಾರಿಸಲು ನೋಡಿದ್ದ, ಕೆ.ಎಸ್.ಈಶ್ವರಪ್ಪ ಅವರ ಸಹೋದರ ಎಂದು ಹಲವೆಡೆ ತಿರುಗಿದ್ದ, ಜಗದೀಶ ಶೆಟ್ಟರ್ ಹೆಸರಿನಲ್ಲಿ ಸಿಮೆಂಟ್ ಕಾರ್ಖಾನೆಯೊಂದಕ್ಕೆ ೨೫ ಲಕ್ಷ ರೂ. ವಂಚನೆ ಮಾಡಲು ಮುಂದಾಗಿದ್ದು, ಹಾಲಿನ ಪುಡಿಯಲ್ಲಿ ಯೂರಿಯಾ ಮಿಕ್ಸ್ ಮಾಡಿದ ಪ್ರಕರಣ ಹಾಗೂ ೨೦೧೯ರ ಪ್ರವಾಹ ಸಂತ್ರಸ್ತರಿಗೆ ವಿತರಿಸಲು ತಂದಿದ್ದ ಅಕ್ಕಿ ಕಳ್ಳತನ ಪ್ರಕರಣದಲ್ಲೂ ಆತ ಆರೋಪಿಯಾಗಿದ್ದ. ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರ ಹೆಸರಿನಲ್ಲೂ ಆತ ವಂಚನೆಗೆ ಮುಂದಾಗಿದ್ದ ಎಂದು ವಿವರಿಸಿದರು. ತಮಗೆ ಆರೋಪಿಯಿಂದ ಯಾವುದೇ ರೀತಿ ಮೋಸವಾಗಿಲ್ಲ. ಆದರೆ ಆತ ಹೆಸರುಗಳನ್ನು ದುರುಪಯೋಗಪಡಿಸಿಕೊಂಡು ಜನರನ್ನು ವಂಚಿಸಲು ಮುಂದಾಗುತ್ತಿದ್ದ, ಆತನ ಮೇಲೆ ಪ್ರಕರಣಗಳಿರುವುದು ಗೊತ್ತಿದೆ ಎಂದರು. 
ಬಾಕ್ಸ್
ಪ್ರಕರಣದ ಜಾಲ ಬೆನ್ನತ್ತಿದ ಪೊಲೀಸರು 
ರಾಮಾರೂಢ ಶ್ರೀಗಳಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ಪ್ರಕಾಶ ಮುಧೋಳಗೆ ನೆರವಾಗಿರುವ ಇತರೆ ಆರೋಪಿಗಳನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಪ್ರಕರಣದಲ್ಲಿ ಇತರ ಮೂರು ಜನರನ್ನು ವಶಕ್ಕೆ ಪಡೆದಿರುವುದಾಗಿ ಐಜಿಪಿ ಹೇಳಿರುವ ಬೆನ್ನಲ್ಲೇ ಇನ್ನೂ ಕೆಲ ಆರೋಪಿಗಳ ಪತ್ತೆಗಾಗಿ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.