INNERWHEEL CLUBಗೆ ಇವರೇ ನೋಡಿ ಹೊಸ ಸಾರಥಿ
ಬಾಗಲಕೋಟೆ : ಸತತ 24 ವರ್ಷಗಳ ಸಾಮಾಜಿಕ ಸೇವೆ ಪೂರ್ಣಗೊಳಿಸಿ, 25ನೇ ವರ್ಷಕ್ಕೆ ಕಾಲಿಡುತ್ತಿರುವ ಇನ್ನರ್‌ವೀಲ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನವನಗರದ ಸೆಕ್ಟರ್ ನಂ.7ರ ಬೈಪಾಸ್ ರಸ್ತೆಯ ವಾಲ್ಮೀಕಿ ಭವನದಲ್ಲಿ ಜೂ. 30ರಂದು ಸಂಜೆ 5ಕ್ಕೆ ನಡೆಯಲಿದೆ.
ಇನ್ನರ್‌ಸ್ಟೀಲ್ ಸಂಸ್ಥೆಯು ವಿಶ್ವದ ಅತಿ ದೊಡ್ಡವಾದ ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಸಮಾಜದಲ್ಲಿ ಅಗತ್ಯವಿರುವ ಮತ್ತು ಹಿಂದುಳಿದ ವರ್ಗಗಳಿಗೆ ಸಹಾಯ ಮಾಡುವ ಜತೆಗೆ ಸಾಮಾಜಿಕ ಸೇವೆ ಮಾಡುತ್ತ ಬಂದಿದೆ. ಸ್ನೇಹ ಮತ್ತು ಸೇವೆ ಒದಗಿಸುವುದೇ ಇನ್ನರ್‌ವೀಲ್‌ನ ಧೈಯ ವಾಕ್ಯವಾಗಿದೆ ಎಂದು ನೂತನ ಅಧ್ಯಕ್ಷೆ ಡಾ|ಶ್ರೀಲತಾ ಹೆರಂಜಲ್ ತಿಳಿಸಿದ್ದಾರೆ.
ಬಾಗಲಕೋಟೆ ಇನ್ನರ್‌ವೀಲ್ ಸಂಸ್ಥೆಯು ತನ್ನ 24 ವರ್ಷಗಳ ಸುದೀರ್ಘ ಸೇವೆಯನ್ನು ಪೂರ್ತಿಗೊಳಿಸಿ, 25ನೇ ವರ್ಷದ ಬೆಳ್ಳಿಯ ಮಹೋತ್ಸವಕ್ಕೆ ಕಾಲಿಟ್ಟಿದೆ. ಆ ನಿಟ್ಟಿನಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಘೋಷಣೆ ಮಾಡಿದ್ದು, ರವಿವಾರ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದಾರೆ.
ನಮ್ಮ ಡಿಸ್ಟಿಕ್-74 ಕ್ಲಬ್‌ನ ನೂತನ ಚೇರಮನ್‌ರಾಗಿ ಜ್ಯೋತಿ ಕಿರಣ ದಾಸ ಅವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಡಾ|ಶ್ರೀಲತಾ ಹೆರಂಜಲ್, ಕಾರ್ಯದರ್ಶಿಯಾಗಿ ಸುಮಂಗಲಾ ಹದ್ಲಿ, ಖಜಾಂಚಿಯಾಗಿ ಸಂಧ್ಯಾ ಮಿಸ್ಕಿನ್, ಐ.ಎಸ್.ಓ ಆಗಿ ವೀಣಾ ವಾಘ, ಎಡಿಟರ್ ಆಗಿ ಪೂರ್ಣಿಮಾ ಅಕ್ಕಿಮರಡಿ ಆಯ್ಕೆಯಾಗಿದ್ದಾರೆ.
ಸಲಹೆಗಾರರಾಗಿ ಡಾ|ರೇವತಿ ಹೂಯಿಲಗೋಳ, ಸಂಧ್ಯಾ ಮಾಸೂರಕರ ಹಾಗೂ ಗೀತಾ ಯಡಹಳ್ಳಿ ಮತ್ತು 14 ಜನ ಇ.ಸಿ ಸದಸ್ಯರಿದ್ದಾರೆ. ವಿಕಲಚೇತನರಿಗೆ ಉಚಿತ ಕೃತಕ ಕೈ ಜೋಡಣೆ, ಕ್ಯಾನ್ಸರ್ ರೋಗ, ಹೃದಯ ರೋಗ ಚಿಕಿತ್ಸೆ, ಅನಾಥ ಆಶ್ರಮ-ವೃದ್ಧಾಶ್ರಮ ದತ್ತು ಪಡೆಯುವುದು, ಪರಿಸರ ಸಂರಕ್ಷಣೆ, ರಕ್ತದಾನ, ಸರಕಾರಿ ಶಾಲೆಯನ್ನು ಹ್ಯಾಪಿ ಸ್ಕೂಲ್ ಮಾಡುವುದು, ರೈಲ್ವೆ ನಿಲ್ದಾಣದಲ್ಲಿ ಹಾಲುಣಿಸುವ ತಾಯಂದಿರು ಪ್ರಯಾಣಿಕರಿಗಾಗಿ ಒಂದು ಹೈಟೆಕ್ ಕ್ಯಾಬಿನ್ ನಿರ್ಮಾಣ ಮಾಡುವುದು, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮುಂತಾದ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಈ ವರ್ಷ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ನೂತನ ಅಧ್ಯಕ್ಷೆ ಡಾ|ಶ್ರೀಲತಾ ಹೆರಂಜಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.