ಗುಡಿಕೈಗಾರಿಕೆಗೆ ಜಾಗತಿಕ ಸ್ಪರ್ಶಕೊಟ್ಟ "ಮಹಿಳಾ ಮಾರುಕಟ್ಟೆ"
ಮಹಿಳಾ ಮಾರುಕಟ್ಟೆ ಆರಂಭಗೊಂಡಿದ್ದೆ ಕನ್ನಡತಿಯರಿಗಾಗಿ. ಮನೆಯಲ್ಲಿ ತಯಾರಿಸಿ ಅದನ್ನು ಮಾರುಕಟ್ಟೆಗೆ ತಲುಪಿಸೋದು ಹೇಗೆ ಎಂಬ ಚಿಂತೆಯಲ್ಲಿದ್ದ ಸಾವಿರಾರು ಮಹಿಳೆಯರಿಗೆ ದಿಢೀರ್ ಎಂದು ಜಾಗತಿಕ ಮಾರುಕಟ್ಟೆಯನ್ನು ಒದಗಿಸಿದ್ದು ಈ ಫೇಸ್ಬುಕ್ ಪೇಜ್ ನ ಹೆಗ್ಗಳಿಕೆ ಈ ಕುರಿತಾಗಿ ಸಿದ್ಧಪಡಿಸಿರುವ ವಿಶೇಷ ವರದಿ ಇಲ್ಲಿದೆ ಓದಿ.
ರಂಜನಿ ಪಾಟೀಲ
ಬಾಗಲಕೋಟೆ
ಮಹಿಳಾ ಮಾರುಕಟ್ಟೆ.......ಮಹಿಳೆರಿಂದ ಮಹಿಳೆಯಗಾಗಿ ಮಹಿಳೆರಿಗೊಸ್ಕರವೇ ನಡೆಯುತ್ತಿರುವ ಆನಲೈನ್ ಮಾರುಕಟ್ಟೆ .ಇತ್ತಿಚಿನ ದಿನಗಳಲ್ಲಿ ತುಂಬಾ ಸದ್ದು ಮಾಡುತ್ತಿದೆ.
ಕೊರೊನಾ ಪಿಡುಗಿಗೆ ಇಡೀ ಜಗತ್ತಿನ ಆರ್ಥಿಕ ಸ್ಥಿತಿ ನಡುಗಿದ್ದು, ಸಣ್ಣ ಕೈಗಾರಿಕಾಗಳು ನೆಲಕಚ್ಚುವ ಸ್ಥಿತಿ ತಲುಪುತ್ತಿರುವ ಈ ಪರಿಸ್ಥಿತಿಯಲ್ಲಿ ಕೆಲ ಮಹಿಳಾ ಗೃಹದ್ಯೋಗಿಗಳು ಫಿನಿಕ್ಸ್ ಪಕ್ಷಿಯಂತೆ ಯಶಸ್ವಿ ಹಾದಿ ಹಿಡಿಯುತ್ತಿದ್ದು ಅದರ ಪೂರ್ತಿ ಪ್ರತಿಫಲ ಈ ಫೇಸ್ಬುಕ್ ನ ಈ ಗುಂಪಿಗೆ ಸೇರಿದೆ.
ಮನೆಯಿಂದಲೇ ವ್ಯಾಪಾರ ವಹಿವಾಟು ನಡೆಸುತ್ತಿರುವ ಸಾವಿರಾರು ಮಹಿಳೆಯರಿಗೆ ದಾರಿ ದೀಪದ ಕೆಲಸ ಮಾಡುತ್ತಿರುವ ಮಹಿಳಾ ಮಾರುಕಟ್ಟೆ ಗುಂಪಿನ ಜನನವಾಗಿದ್ದು ಕೇವಲ ೩,೪ ತಿಂಗಳಿಚೆಗೆ.
ಮನೆಯಲ್ಲಿ ತಯಾರಿಸುವ ಶುದ್ಧ ಹಾಗೂ ಆರೋಗ್ಯಕರ ಪದಾರ್ಥಗಳು ದೊಡ್ಡ ಪಟ್ಟಣಗಳಲ್ಲಿ ಸಿಗುವುದು ಅಸಾಧ್ಯ ಎಂಬುದು ಈ ಮಹಿಳಾ ಮಾರುಕಟ್ಟೆ ಗುಂಪು ಅಲ್ಲಗಳಿಸಿದೆ!!. ಬೆರಳೆಣಿಕೆಯಷ್ಟು ಸದಸ್ಯರು ಇದ್ದ ಮಹಿಳಾ ಮಾರುಕಟ್ಟೆ ಗುಂಪು ನೋಡ ನೋಡುತ್ತಲೇ ಸಾವಿರಾರು ಸದಸ್ಯರನ್ನು ಹೊಂದಿದೆ.
ಕೊರೊನ ಸಂಕಷ್ಟದಲ್ಲಿ ಹುಟ್ಟಿದ ಗುಂಪು
ಇಡೀ ಜಗತ್ತು ಕೊರೊನಾ ಸಮಯದಲ್ಲಿ ಸ್ತಬ್ಧವಾದ ಸನ್ನಿವೇಶದಲ್ಲಿ ಮನೆಯಲ್ಲೇ ಚಿಕ್ಕಪುಟ್ಟ ವ್ಯಾಪಾರ ಮಾಡುವ ಮಹಿಳೆಯರಿಗೆ ಸಹಾಯವಾಗುವ ಆಶಯದಿಂದ ಮುಂಬಯಿಯಲ್ಲಿ ನೆಲೆಸಿರುವ ಕನ್ನಡತಿ ಅಪರ್ಣಾ ರಾವ್ 'ಮಹಿಳಾ ಮಾರುಕಟ್ಟೆ' ಎಂಬ ಅಪ್ಪಟ ಕನ್ನಡ ಫೇಸ್ಬುಕ್ ಗುಂಪನ್ನು ಹುಟ್ಟುಹಾಕಿದರು. ಕರ್ನಾಟಕ ಮಾತ್ರವಲ್ಲದೇ ದೇಶ, ವಿದೇಶದ ನೆಲೆಸಿರುವ ನೂರಾರು ಕನ್ನಡತಿಯರು ಈ ಗುಂಪಿನ ಸದಸ್ಯರಾಗಿರುವುದು ಹೆಮ್ಮೆಯ ವಿಚಾರ.
ಕಾರ್ಯವಿಧಾನ ಹೇಗೆ:ಇಲ್ಲಿ ಎಲ್ಲ ತರಹದ ವ್ಯಾಪಾರಿಗಳಿದ್ದು, ತಮ್ಮ ಉತ್ಪನ್ನಗಳ ಮಾಹಿತಿ, ಬೆಲೆಯನ್ನು ಗುಂಪಿನಲ್ಲಿ ಹಾಕುತ್ತಾರೆ, ಗ್ರಾಹಕರು ಅವರ ಅವಶ್ಯಕತೆ ಅನುಗುಣವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೆಚ್ಚಾಗಿ ಆನ್ಲೈನ್ ಪೇಮೆಂಟ್ ನಡೆಯುತ್ತಿದ್ದು, ಗ್ರಾಹಕರು ಹಾಗೂ ಮಾರಾಟಗಾರರು ಇಬ್ಬರ ಅನುಕಲಕ್ಕೂ ಒತ್ತು ನೀಡಲಾಗಿದೆ.
ಇಲ್ಲಿ ಎಲ್ಲವೂ ಲಭ್ಯ
ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಗೊಜ್ಜು,ಚಕ್ಕಲಿ, ಚಟ್ನಿಪುಡಿ, ಮಾಸಾಲೆ ಪುಡಿ ಹೀಗೆ ನಾನಾ ರೀತಿಯ ತಿಂಡಿ ತಿನಿಸುಗಳಿಂದ ಹಿಡಿದು ಮಲೆನಾಡಿನ ವಿಶೇಷವಾದ ಲೇಹ್ಯಗಳು ಇಲ್ಲಿ ಲಭ್ಯ. ಹಾಗೇ ಸೀರೆ, ಬ್ಯಾಗು, ಡ್ರೆಸ್, ಕೈಯಲ್ಲಿ ಮಾಡಿದ ಟೆರೆಕೋಟಾ ಆಭರಣಗಳು, ಮಕ್ಕಳ ಬಟ್ಟೆ, ಆಟಿಕೆಗಳು, ಅಡುಗೆಮನೆಗೆ ಅವಶ್ಯಕತೆ ಇರುವ ವಸ್ತುಗಳು ಸೇರಿದಂತೆ ನೂರಾರು ತರಹದ ಒಳ್ಳೆಯ ಗುಣಮಟ್ಟದ ವಸ್ತುಗಳು ಗ್ರಾಹಕರನ್ನು ಮೋಡಿ ಮಾಡುತ್ತಿದೆ.
ನಿಯಮ ಪಾಲನೆಯಲ್ಲಿ ಇಲ್ಲ ರಾಜಿ:ಗುಂಪಿನ ಅಡ್ಮಿನ್ ಗಳಾಗಿ ಅಪರ್ಣಾ ಅವರ ಜೊತೆಗೆ ಕಾವ್ಯ, ಅಂಜಲಿ ಹಾಗೂ ಶೋಭಾ ರಾವ್ ಕಾರ್ಯನಿರ್ವಹಿಸುತ್ತಿದ್ದು, ಮಾರಾಟಗಾರರ ಉತ್ಪನಗಳು, ಅದರ ಗುಣಪಟ್ಟವನ್ನು ಪರಿಶೀಲಿಸಿದ ನಂತರವೇ ಅವರಿಗೆ ಮಾರಾಟ ಮಾಡಲು ಅನುಮತಿ ನೀಡುತ್ತಾರೆ. ಎಲ್ಲ ಮಾರಾಟಗಾರರಿಗೆ ಐಡಿ ಯನ್ನು ಒದಗಿಸಿದ್ದು ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಾ ಎಲ್ಲ ಶ್ಲಾಘನೆಗೆ ಪಾತ್ರವಾಗಿದ್ದಾರೆ.
ಮಕ್ಕಳಾಸಕ್ತಿಗೂ ಉಂಟು ವೇದಿಕೆ
ಮಕ್ಕಳಿಗೆ ಆಸಕ್ತಿ ವಿಷಯಗಳ ಬಗ್ಗೆ ಆನ್ಲೈನ್ ತರಗತಿಗಳು ಕೂಡ ಈ ಗುಂಪಿನಲ್ಲಿ ಲಭ್ಯ. ಸಂಗೀತ, ಚಿತ್ರಕಲೆ, ನೃತ್ಯ ಸೇರಿದಂತೆ ಹಲವು ತರಬೇತಿಗಳು ಇಲ್ಲಿ ನಡೆಯುತ್ತಿವೆ. ಕೋವಿಡ್ ಸಮಯದಲ್ಲಿ ಶಾಲಾ ಕಾಲೇಜುಗಳಿಂದ ದೂರವಿದ್ದ ಮಕ್ಕಳಿಗೆ ಮನೆಯಲ್ಲಿಯೇ ಕುಳಿತು ಕಲಿಯುವ ಅವಕಾಶ ಮಹಿಳಾ ಮಾರುಕಟ್ಟೆಯಿಂದ ಲಭಿಸಿದೆ.
ಮುಂಚೆಯಿಂದಲೂ ಮನೆಯಲ್ಲಿ ಮಾಡುವ ವಸ್ತುಗಳ ಅಲಭ್ಯತೆ ಕಾಡುತ್ತಿತ್ತು. ಈ ಮೊದಲೇ ಮಹಿಳಾ ಗುಂಪುಗಳಿದ್ದಾಗಿಯೂ ಕೇವಲ ಒಡವೆ ವಸ್ತ್ರ ಕೆಲ ವರ್ಕ್ ಶಾಪ್ ಗಳಿಗೆ ಮಾತ್ರ ಮೀಸಲಾಗಿತ್ತು. ಹೆಚ್ಚು ಆತ್ಮೀಯ ವಾತಾವರಣದ ಒಬ್ಬರಿಗೊಬ್ಬರು ಕೊಂಡಿಯಂತೆ ವ್ಯವಹರಿಸುವ ಮಾರುಕಟ್ಟೆ ಮೊದಲಿಂದಲೂ ನನ್ನ ಕನಸು. ಅಂಥಹ ಮಾರುಕಟ್ಟೆ ಮಾಡಲೇ ಬೇಕು ಎಂಬ ಹಠ ಹುಟ್ಟಿದ್ದು ಕರೋನ ಪರಿಸ್ಥಿತಿಯಲ್ಲಿ. ಅದರಲ್ಲೂ ಕನ್ನಡದಲ್ಲೇ ವ್ಯವಹರಿಸುವ ಮಹಿಳಾ ಗುಂಪು ನಮ್ಮದೇ ಮೊದಲು ಎಂದುಕೊಂಡಿದ್ದೇನೆ. ಮುಖ್ಯವಾಗಿ ಇದೊಂದು ಸಂಘಟನೆಯಾಗಿ ಜೊತೆಗೆ ವಾಣಿಜ್ಯ ಗುಂಪಾಗಿ ಹೊರ ಹೊಮ್ಮಲಿ ಎಂಬುದು ಗುಂಪು ನೆಡೆಸುತ್ತಿರುವ ನಮ್ಮ ಎಲ್ಲರ ಆಶಯ.
-ಅಪರ್ಣಾ ರಾವ್. ಮುಂಬಯಿ
ಮಹಿಳಾ ಮಾರುಕಟ್ಟೆ ಗುಂಪಿನ ಅಡ್ಮಿನ್
ಮಲೆನಾಡಿನ ಹಲವು ವಿಶೇಷ ತಿಂಡಿಯಾದ ಹಲಸಿನ ಚಿಪ್ಸ್ ಬಾಳೆ ಚಿಪ್ಸ್. ಕೊಕಂ, ಕಾಡು ಜೇನುತುಪ್ಪ, ಹಪ್ಪಳ ಸೇರಿದಂತೆ ಅನೇಕ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುತ್ತಿದ್ದೇನೆ.
ಮಹಿಳಾ ಮಾರುಕಟ್ಟೆಯಿಂದ ನಮ್ಮ ಉತ್ಪನ್ನಗಳು ಹೆಚ್ಚು ಜನಪ್ರಿಯವಾಗುತ್ತಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ.
ಕೊರಿಯರ್ ಚಾರ್ಜ್ ಜಾಸ್ತಿ, ಪ್ಯಾಕೆಜಿಂಗ್ ಸಮಸ್ಯೆ, ಅಗತ್ಯ ಸೈಜ್ ನ ಬಾಕ್ಸ್ ಗಳ ಸಂಗ್ರಹ ಮತ್ತು ಅವುಗಳ ಬೆಲೆ ಜಾಸ್ತಿ ಇರುವುದು, ಟ್ರಾನ್ಸಪೋರ್ಟ್ ಸಮಯದಲ್ಲಿ ಉಂಟಾಗುತ್ತಿರುವ ಪ್ಯಾಕೆಜ್ ಡ್ಯಾಮೆಜ್ ಸಮಸ್ಯೆ, ಫುಡ್ ಗ್ರೇಡ್ ಪ್ಲಾಸ್ಟಿಕ್ ಬಳಸಿದಾಗ ಅದು ಸ್ವಲ್ಪ ತೆಳು ಬರುತ್ತದೆ. ಅದನ್ನು ಪ್ಯಾಕ್ ಮಾಡಿದಾಗ, ಕೊರಿಯರ್ ಸಾಗಾಣಿಕೆಯ ಸಮಯದಲ್ಲಿ ಅವು ಒಡೆಯುತ್ತುರುವುದು. ಉತ್ತಮ ಗುಣಮಟ್ಟದ/ ದಪ್ಪವಾದ ಪ್ಲಾಸ್ಟಿಕ್ ದುಬಾರಿ ಹೀಗೆ ನಾನಾ ಸಮಸ್ಯೆಗಳನ್ನು ವ್ಯಾಪಾರಿಗಳು ಎದುರಿಸುವಂತಾಗಿದೆ. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ಗ್ರಾಹಕರನ್ನು ಈ ಗುಂಪಿನಿಂದ ಪಡೆದಿದ್ದೇನೆ ಎಂಬ ತೃಪ್ತಿ ಇದೆ.
- ಸಂಧ್ಯಾ ಶಾಸ್ತ್ರಿ, ಶಿರಸಿ
ಮಾರಾಟಗಾರರು, ಮಹಿಳಾ ಮಾರುಕಟ್ಟೆ