ಮೂರನೇ ಪೀಠ ಸ್ಥಾಪನೆ ವಿವಾದ: ಪಂಚಮಸಾಲಿ ಸಮಾಜದಲ್ಲೀಗ ಬೂದಿ ಮುಚ್ಚಿದ ಕೆಂಡ..!
ಮೂರನೇ ಪೀಠದ ಸ್ಥಾಪನೆ ವಿಚಾರವಾಗಿ ಶ್ರೀಗಳು,ಮುಖಂಡರ ಆರೋಪ-ಪ್ರತ್ಯಾರೋಪಗಳಿಂದಾಗಿ ಸಮಾಜದಲ್ಲಿ ಗೊಂದಲ ಸೃಷ್ಠಿಯಾಗಿದೆ.
ಬಾಗಲಕೋಟೆ:
ಪಂಚಮಸಾಲಿ ಸಮಾಜದ ಮೂರನೇ ಪೀಠದ ವಿವಾದ ಬೂದಿ ಮುಚ್ಚಿದ ಕೆಂಡದಂತಾಗಿದ್ದು,ಪಂಚಮಸಾಲಿ ಒಕ್ಕೂಟದ ಸ್ವಾಮೀಜಿಗಳು ಸಭೆ ನಡೆಸಿ ಕೂಡಲಸಂಗಮದ ಶ್ರೀಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕಿಡಿಕಾರಿದ್ದಾರೆ.
ಶುಕ್ರವಾರ ರಾತ್ರಿ ಬಾಗಲಕೋಟೆಯಲ್ಲಿ ಸಭೆ ನಡೆಸಿರುವ ಒಕ್ಕೂಟದ ಶ್ರೀಗಳು ಮೂರನೇ ಪೀಠದ ಸ್ಥಾಪನೆಯಿಂದ ಸಮಾಜ ಇಬ್ಭಾಗವಾಗಿಲ್ಲ. ಕೂಡಲಸಂಗಮದಲ್ಲಿ ಎರಡನೇ ಪೀಠ ಸ್ಥಾಪನೆ ಆದಾಗಲೇ ಇಬ್ಭಾಗವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಮಾಜವನ್ನು ಕಟ್ಟಿದ್ದು ಹರಿಹರ ಪೀಠ.ಆದರೆ ಆ ಪೀಠ ದೊರೆಯದಿದ್ದಾಗ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮದಲ್ಲಿ ಪೀಠ ಸ್ಥಾಪನೆ ಮಾಡಿದರು ನಿರಾಣಿ ಅವರಿಂದ ಎಲ್ಲ ಸವಲತ್ತು ಪಡೆದು ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಒಕ್ಕೂಟದ ಭಾಗವಾಗಿರುವ ಬೆಂಡವಾಡ ಮಠದ ಶ್ರೀರೇವಣಸಿದ್ಧ ಸ್ವಾಮೀಜಿ ಮಾತನಾಡಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ನೂರಕ್ಕೆ ನೂರರಷ್ಟು ನಿರಾಣಿ ಅವರಿಂದ ಸಹಾಯ ಪಡೆದಿದ್ದಾರೆ. ಸ್ವಾಮೀಜಿ ಆದಮೇಲೆ ಶ್ರೀಗಳು ತೊಟ್ಟಿರುವ ಬಟ್ಟೆ ಕೂಡ ನಿರಾಣಿ ಅವರದ್ದು, ಆ ಋಣವನ್ನು ಮರೆತು ಶ್ರೀಗಳಯ ಅಸಹ್ಯವಾಗಿ ಮಾತನಾಡುತ್ತಿದ್ದಾರೆ.ಈ ಬಗ್ಗೆ ಅವರು ಚರ್ಚೆಗೆ ಬಂದರೆ ನಾವು ಸಹ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಒಕ್ಕೂಟದ ವಕ್ತಾರ ಸುರೇಶ ಬಿರಾದಾರ ಮಾತನಾಡಿ, ಹರಿಹರ ಹಾಗೂ ಮೂರನೇ ಪೀಠದ ಬಗ್ಗೆ ಯತ್ನಾಳ ಹಗುರವಾಗಿ ಮಾತನಾಡಿ ಒಕ್ಕೂಟದ ೫೦ ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ.ಸಮಾಜಕ್ಕೆ ನಿರಾಣಿ ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.
ಇತ್ತ ಕೂಡಲಸಂಗಮ ಪೀಠದ ಭಕ್ತರು ಅಮರೇಶ ನಾಗೂರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಮಾಜಕ್ಕಾಗಿ ಜೀವನವನ್ನೇ ಮೀಸಲಿಟ್ಡಿದ್ದು ಮಾಡು ಇಲ್ಲವೇ ಮಡಿ ಹೋರಾಟ ನಡೆಸುತ್ತಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಸಿದ್ದು ಸವದಿ, ಸಿ.ಸಿ.ಪಾಟೀಲ, ವಿಜಯಾನಂದ ಕಾಶಪ್ಪನವರ ಸೇರಿ ಸಚಿವರು ಶಾಸಕರು ಹೋರಾಟದ ನೇತೃತ್ವ ವಹಿಸಿದ್ದರು, ಆ ಹೋರಾಟ ತಪ್ಪಿಸಲು ಯತ್ನಿಸಿದ್ದು ಯಾರೆಂಬುದು ಸಮಾಜಕ್ಕೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.