ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚನೆ: ಇಬ್ಬರ ಬಂಧನ

ಎಸಿಬಿ ಅಧಿಕಾರಿಗಳೆಂದು ಹೇಳಿಕೊಂಡು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಬೆದರಿಸುತ್ತಿದ್ದ ಇಬ್ಬರನ್ನು ಬಾಗಲಕೋಟೆ ಪೊಲೀಸರು ಹಾಸನ ಪೊಲೀಸರ ನೆರವಿನೊಂದಿಗೆ ಪತ್ತೆ ಮಾಡಿದ್ದಾರೆ.

ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚನೆ: ಇಬ್ಬರ ಬಂಧನ


ಬಾಗಲಕೋಟೆ:
ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ವಿವಿಧ ಇಲಾಖೆಗಳ ನೌಕರರನ್ನು ಬೆದರಿಸಿ ವಂಚನೆಗೈಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಗಲಕೋಟೆ ಹಾಗೂ ಹಾಸನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಈ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್, ಹಾಸನ‌ ಎಸ್ಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಎಸಿಬಿ ಉತ್ತರ ವಲಯ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮತ್ತು ಎಸಿಬಿ ದಕ್ಷಿಣ ವಲಯ ಪೊಲೀಸ್ ಅಧೀಕ್ಷಕ ವಿ.ಜೆ.ಸಜೀತ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಸದಲಗಾ ಗ್ರಾಮದ ಮುರಿಗೆಪ್ಪಾ ನಿಂಗಪ್ಪಾ ಕುಂಬಾರ(೫೬) ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಮುಗುಲಿ ಗ್ರಾಮದ ರಜನಿಕಾಂತ್ ನಾಗರಾಜ್(46) ಬಂಧಿತ ಆರೋಪಿಗಳು.ಆರೋಪಿಗಳಿಂದ ಸಿಮ್ ಕಾರ್ಡ್ ಹಾಗೈ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರ ಪೈಕೊ ಆರೋಪಿ ಮುರಿಗೆಪ್ಪಾ ೪೦ಕ್ಕೂ ಹೆಚ್ಚು ಜನರನ್ನು ಬೆದರಿಸಿ ವಂಚಿಸಿದ್ದ, ರಜನಿಕಾಂತ ೬ಕ್ಕಿಂತ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  ಇಬ್ಬರು ಆರೋಪಿಗಳು ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ವಿವಿಧ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಹಣ ನೀಡದಿದ್ದರೆ ದಾಳಿ ಮಾಡುವುದಾಗಿ ಬೆದರಿಸುತ್ತಿದ್ದರು. ಬಾಗಲಕೋಟೆ ಜಿಪಂ ಎಇಇಯೊಬ್ಬರಿಗೂ ಇಂಥ ಕರೆ ಬಂದಾಗ ಅನುಮಾನಗೊಂಡು ಅವರು ದೂರು ದಾಖಲಿಸಿದ್ದರು. ಕೆಲ ಅಧಿಕಾರಿಗಳು ಹೆದರಿ ಹಣ ವರ್ಗಾವಣೆ ಮಾಡಿರುವ ಶಂಕೆಯೂ ವ್ಯಕ್ತವಾಗಿತ್ತು. ಪ್ರಕರಣ ಗಂಭೀರವಾಗಿ  ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಇಬ್ಬರು ಆರೋಪಿಗಳು ಹಿಂದೆಯೂ ಕೆಲವು‌ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.